ಟಿಪ್ಪರ್ ಪಲ್ಟಿಯಾಗಿ ಇಬ್ಬರು ಮೃತ್ಯು

< ಉಪ್ಪೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವಘಡ *ಓರ್ವ ಗಂಭೀರ>

ಬ್ರಹ್ಮಾವರ: ಉಪ್ಪೂರು ರಾಷ್ಟ್ರೀಯ ಹೆದ್ದಾರಿ 66ರ ಹೆರಾಯಿಬೆಟ್ಟು ಫಿಶರಿಸ್ ಕಾಲೇಜು ಬಳಿ ಶುಕ್ರವಾರ ಬೆಳಗ್ಗೆ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿದ್ದಾರೆ.

ಬ್ರಹ್ಮಾವರ ನಿವಾಸಿ ನಾಗರಾಜ್ ಗಾಣಿಗ(30) ಹಾಗೂ ಭಟ್ಕಳದ ಕುಮಾರ್ ಆರ್.ಎಂ(27) ಮೃತಪಟ್ಟವರು. ಸಾಗರ ತಾಲೂಕು ಬಾಲಿಗೆ ಗ್ರಾಮದ ರಾಘವೇಂದ್ರ ಎಸ್.ಎಂ ಗಾಯಾಳು.

ಬ್ರಹ್ಮಾವರದಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಟಿಪ್ಪರ್ ಮಳೆಯ ಕಾರಣದಿಂದ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಮೇಲೆ ಹತ್ತಿ ತಡೆಕಂಬಕ್ಕೆ ಡಿಕ್ಕಿಯಾಗಿ ಇನ್ನೊಂದು ಭಾಗದ ರಸ್ತೆಗೆ ಮಗುಚಿ ಬಿದ್ದಿದೆ. ಚಾಲಕ ನಾಗರಾಜ್ ಗಾಣಿಗ ಸ್ಥಳದಲ್ಲೇ ಮೃತಪಟ್ಟರು. ಟಿಪ್ಪರ್‌ನಡಿ ಬಿದ್ದು ಗಂಭೀರ ಗಾಯಗೊಂಡಿದ್ದ ಕುಮಾರ್ ಅವರನ್ನು ಬ್ರಹ್ಮಾವರ 108 ಅಂಬುಲೆನ್ಸ್ ಸಿಬ್ಬಂದಿ ಚಂದ್ರಶೇಖರ ಇ.ಎಂ.ಟಿ, ಚಾಲಕ ವಿಜಯ ಪಾಟೀಲ್ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಟಿಪ್ಪರ್ ಬಾಗಿಲ ಬಳಿ ಕುಳಿತಿದ್ದ ರಾಘವೇಂದ್ರ ಅವರು ಅಪಘಾತ ಸಂದರ್ಭ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂದರ್ಭ ಅದೇ ದಾರಿಯಾಗಿ ಯೋಗ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರ ನೀಡಿದರು. ಅಪಘಾತದಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿತ್ತು. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ವಲಯಕ್ಕೆ ಎಸ್ಪಿ ಭೇಟಿ : ಬ್ರಹ್ಮಾವರ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಹಲವು ಅಪಘಾತಗಳು ನಡೆಯುತ್ತಿದ್ದು, ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಆಗಮಿಸಿ ಈ ಭಾಗದಲ್ಲಿ ನಡೆಯುತ್ತಿರುವ ಅಪಘಾತಗಳ ಕುರಿತು ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಅವರಿಂದ ಮಾಹಿತಿ ಸಂಗ್ರಹಿಸಿದರು.

ಜೀವನ್ಮರಣ ಸ್ಥಿತಿಯಲ್ಲಿ 30 ನಿಮಿಷ:  ಮಗುಚಿ ಬಿದ್ದ ಟಿಪ್ಪರ್‌ನಡಿ ಸಿಲುಕಿದ ಭಟ್ಕಳದ ಕುಮಾರ್ ಆರ್.ಎಂ ಅವರು 30 ನಿಮಿಷಕ್ಕೂ ಹೆಚ್ಚು ಕಾಲ ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜಮಾಯಿಸಿದ ಸಾರ್ವಜನಿಕರು ಶತ ಪ್ರಯತ್ನ ಪಟ್ಟು ಹೊರತೆಗೆಯುವ ಪ್ರಯತ್ನ ಮಾಡಿದರೂ, ಫಲಕಾರಿಯಾಗಲಿಲ್ಲ. ಬಳಿಕ ಕ್ರೇನ್ ಮೂಲಕ ಟಿಪ್ಪರ್‌ನ್ನು ಎತ್ತಿ ಕುಮಾರ್ ಅವರನ್ನು ಹೊರತೆಗೆದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.