ಹಡಗಲಿ: ಸಮೀಪದ ಕಗ್ಗೋಡ ಗ್ರಾಮದ ತಿಪ್ಪರಾಯ ಮುತ್ಯಾನ ಜಾತ್ರೆಗೆ ಶುಕ್ರವಾರ ಸಂಜೆ ವೈಭವದ ತೆರೆ ಎಳೆಯಲಾಯಿತು.
ಮೂರು ದಿನ ನಡೆದ ಜಾತ್ರೆಯಲ್ಲಿ ವಿಜಯಪುರ ತಾಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳ ಲಕ್ಷಾಂತರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಬುಧವಾರವೇ ಜಾತ್ರೆಗೆ ಚಾಲನೆ ನೀಡಲಾಗಿತ್ತು.
ಅಂದು ರಾತ್ರಿ ನಾಗಠಾಣದ ಬೀರದೇವರು, ಗೂಳಪ್ಪ ಮುತ್ಯಾ ಪಲ್ಲಕ್ಕಿ ಹಾಗೂ ಶಿವಣಗಿ ನೆನೆಯಪ್ಪ ಮುತ್ಯಾ ಪಲ್ಲಕ್ಕಿ ಗ್ರಾಮಕ್ಕೆ ಆಗಮಿಸಿದ್ದವು. ಗುರುವಾರ ನಸುಕಿನಲ್ಲಿ ಗಂಗಾಪೂಜೆ ನಡೆಯಿತು.
ಕಗ್ಗೋಡ ಗುಡ್ಡದಲ್ಲಿರುವ ತಿಪ್ಪರಾಯ ಮುತ್ಯಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಮಳೆ ಬೆಳೆ ಹೇಳಿಕೆ ನಡೆದವು. ಶುಕ್ರವಾರ ಬೆಳಗ್ಗೆ ವಿಶೇಷ ಪೂಜೆ, ದೈಗೊಂಡ ಗೌಡರ ಕರಿಕಟ್ಟುವ ಹಬ್ಬ ನಡೆಯಿತು.
ನಾಟಕ, ಹಾಡು ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು. ಪ್ರಫುಲ್ ಮಂಗಾನವರ ಹಾಗೂ ಇತರ ಗಣ್ಯರು, ಜಾತ್ರೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಭಕ್ತರನ್ನು ಸನ್ಮಾನಿಸಲಾಯಿತು.
ಮಾಳಿಂಗರಾಯ ಪೂಜಾರಿ, ಮಲ್ಲು ಹಿರೇಕುರುಬರ, ಬೀರು ಹಿರೇಕುರಬರ, ನಿಂಗು ಹಿರೇಕುರಬರ, ಪೂಜು ಹಿರೇಕುರಬರ ಇತರರಿದ್ದರು.
ಐದು ಕ್ವಿಂಟಾಲ್ ಮಾದಲಿ: ಮೂರು ದಿನದ ಜಾತ್ರೆಯಲ್ಲಿ ಭಕ್ತರಿಗೆ ಅನ್ನ, ಸಾಂಬಾರ, ಸಜ್ಜಕ ಹಾಗೂ ಮಾದಲಿ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಅಂದಾಜು 5 ಕ್ವಿಂಟಾಲ್ ಮಾದಲಿ ಪ್ರಸಾದವನ್ನು ಭಕ್ತರಿಗೆ ಹಂಚಲಾಯಿತು. ಗಣ್ಯರಾದ ಜ್ಯೋತೆಪ್ಪ ಪೂಜಾರಿ, ಬಾಬುಗೌಡ ಪಾಟೀಲ ಪ್ರಸಾದ ವ್ಯವಸ್ಥೆ ಕೈಗೊಂಡಿದ್ದರು.
ಭಕ್ತಿಗೆ ಮೆಚ್ಚಿ ಬಂದ ತಿಪ್ಪರಾಯ ಮುತ್ಯಾ: ಹದಿನೆಂಟನೇ ಶತಮಾನದಲ್ಲಿ ನೆಲೆಸಿದ್ದರು ಎನ್ನಲಾಗುವ ತಿಪ್ಪರಾಯ ಮುತ್ಯಾ ಅವರ ಮೂಲ ವಿಜಯಪುರ ಜಿಲ್ಲೆಯ ನಾಗಠಾಣ. ಇವರು ನಾಗಠಾಣದ ಬೀರದೇವರ ಶಿಷ್ಯರಾಗಿದ್ದರು. ಸುತ್ತಲಿನ ಎಲ್ಲ ಹಳ್ಳಿಗಳಲ್ಲಿ ತಿರುಗಾಡಿ ತಮ್ಮ ಅನುಷ್ಠಾನ, ಪವಾಡಗಳ ಮೂಲಕ ಭಕ್ತರ ಕಷ್ಟ ಪರಿಹರಿಸುತ್ತಿದ್ದರು. ಒಮ್ಮೆ ಇವರು ಭೈರೋಡಗಿ ಗ್ರಾಮದಲ್ಲಿ ನೆಲೆಸಿದ್ದಾಗ ಅಂತಕಾಲ ಸಮೀಪಿಸಿತು ಎಂದು ಎತ್ತಿನ ಗಾಡಿಯಲ್ಲಿ ನಾಗಠಾಣಕ್ಕೆ ಹೊರಡಲು ಮುಂದಾದರು. ದಾರಿಯಲ್ಲಿ ಕಗ್ಗೋಡ ಬಳಿ ಎತ್ತುಗಳಿಗೆ ಕಣ್ಣು ಕಾಣದಂತಾಗಿ ನಿಂತುಬಿಟ್ಟವು. ಆಗ ತಿಪ್ಪರಾಯ ಮುತ್ಯಾ ಎತ್ತುಗಳ ಕಣ್ಣಿಗೆ ಭಂಡಾರ ಹಚ್ಚುತ್ತಿದ್ದಂತೆ ಎತ್ತುಗಳ ಕಣ್ಣು ಕಾಣುವಂತಾಗಿ ನಾಗಠಾಣಕ್ಕೆ ಪ್ರಯಾಣ ಮುಂದುವರಿಸಿದವು. ಆದರೆ ಕಗ್ಗೋಡದಲ್ಲಿ ಈ ಘಟನೆ ನಡೆದ ಬಗ್ಗೆ ತಿಪ್ಪರಾಯ ಮುತ್ಯಾ ಗಂಭೀರವಾಗಿ ಯೋಚಿಸಿದರು. ಈ ಗ್ರಾಮದಲ್ಲಿ ಹಿರೇಕುರುಬರ ಮನೆತನದ ಶಾವಂತ್ರವ್ವ ಎಂಬ ಭಕ್ತೆ ತಿಪ್ಪರಾಯ ಮುತ್ಯಾನನ್ನು ಅನನ್ಯವಾಗಿ ಸ್ತುತಿಸುತ್ತಿದ್ದರು. ಇವರ ಭಕ್ತಿಗೆ ಮೆಚ್ಚಿ ತಿಪ್ಪರಾಯ ಮುತ್ಯಾ ಕಗ್ಗೋಡದಲ್ಲೇ ನೆಲೆಸಿದರು. ಶಾವಂತ್ರವ್ವ ಅವರ ಮನೆಯಲ್ಲಿದ್ದ ಕರೆಪ್ಪ ಎಂಬುವರು ಮುತ್ಯಾನ ಸೇವೆ ಕೈಗೊಂಡರು. ಪ್ರಸ್ತುತ ಕರೆಪ್ಪ ಅವರ ಮನೆತನದವರೇ ಪ್ರತಿ ವರ್ಷ ಹೇಳಿಕೆ ಹೇಳುತ್ತಿದ್ದಾರೆ. ಹಿರೇಕುರುಬರ ಮನೆತನದವರು ಪರಂಪರೆಯಂತೆ ಪೂಜೆ ಸಲ್ಲಿಸುತ್ತಿದ್ದಾರೆ. 500ಕ್ಕೂ ಹೆಚ್ಚು ವರ್ಷಗಳಿಂದ ವೈಭವದ ಜಾತ್ರೆ ನಡೆಯುತ್ತಿದೆ.