ಈ ಬಾರಿ ಕೈ-ಕಮಲ ಭರ್ಜರಿ ಪೈಪೋಟಿ

ಪ್ರಸಾದ್‌ಲಕ್ಕೂರು ಚಾಮರಾಜನಗರ
ಪ್ರಸ್ತುತ ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ 90ರ ದಶಕದಲ್ಲಿ ಜನತಾ ಪರಿವಾರ ತನ್ನ ಪ್ರಾಬಲ್ಯ ಮೆರೆದಿತ್ತು. ಆ ಸಮಯದಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ನಡುವೆಯೇ ನೇರ ಫೈಟ್ ನಡೆದಿತ್ತು.

ಕ್ಷೇತ್ರಕ್ಕೆ ಇಲ್ಲಿಯ ತನಕ ನಡೆದಿರುವ 14 ಲೋಕಸಭಾ ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಜಯಗಳಿಸಿದ್ದರೆ, 4 ಸಲ ಜನತಾ ಪರಿವಾರ ಗೆದ್ದು ಕಾಂಗ್ರೆಸ್‌ಗೆ ಹೊಡೆತ ನೀಡಿತ್ತು. 1962, 1967, 1972, 1977, 1980, 1984, 1989, 1991, 2009, 2014 ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, 1996, 1998, 1999, 2004ರ ಚುನಾವಣೆಗಳಲ್ಲಿ ಜನತಾ ಪರಿವಾರ ಜಯಗಳಿಸಿತ್ತು.

90ರ ದಶಕ ಜನತಾ ಪರಿವಾರದ ನಾಯಕರ ಹವಾ ಇದ್ದ ಕಾಲ. ಕ್ಷೇತ್ರದಲ್ಲಿ 1989 ರಿಂದ 2004 ರವರೆಗೂ ಜನತಾ ಪರಿವಾರ ಕಾಂಗ್ರೆಸ್ ಎದುರಾಳಿಯಾಗಿತ್ತು. ಇದರಲ್ಲಿ ಜನತಾ ಪರಿವಾರ ತಾನು 2 ಬಾರಿ ಸೋತು. 4 ಬಾರಿ ಜಯಗಳಿಸಿ ಕಾಂಗ್ರೆಸ್‌ಗೆ ಸೋಲಿನ ತೋರಿತ್ತು.

ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜನತಾ ಪರಿವಾರ ಒಡೆದು ಹೋಳಾದ್ದರಿಂದ ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆ ವಿಸ್ತರಿಸಿಕೊಂಡಿತು. 2009 ಮತ್ತು 2014ರ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದು ಕಾಂಗ್ರೆಸ್ ಜಯಗಳಿಸಿದೆ. ಈ ಬಾರಿಯೂ ಇದೇ ಪಕ್ಷಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ.

1989ರಲ್ಲಿ ಮೊದಲು ದೇವನೂರು ಶಿವಮಲ್ಲು ಜನತಾದಳದಿಂದ ಕಣಕ್ಕೆ ಇಳಿದಿದ್ದರು. ಆದರೆ ಅವರು ತಮ್ಮ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಸೋತರು. 1991ರಲ್ಲಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಜನತಾದಳದಿಂದ ಕಣಕ್ಕೆ ಇಳಿದರಾದರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರಾಭವಗೊಂಡರು.

ಎ.ಸಿದ್ದರಾಜುಗೆ ಗೆಲುವು: 1996ರಲ್ಲಿ ಗುಂಡ್ಲುಪೇಟೆ ತಾಲೂಕಿನ ಎ.ಸಿದ್ದರಾಜು ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಲ್.ಎಚ್.ಬಾಲಕೃಷ್ಣ ಅವರನ್ನು ಸೋಲಿಸಿ ಜನತಾ ಪರಿವಾರದ ಖಾತೆ ತೆರೆದರು. 1998ರಲ್ಲಿ ಸಿದ್ದರಾಜು ಮತ್ತೆ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ವಿ.ಶ್ರೀನಿವಾಸಪ್ರಸಾದ್ ಅವರನ್ನು ಪರಾಭವಗೊಳಿಸಿದ್ದರು.

ಈ ನಡುವೆ ಘಟಿಸಿದ ರಾಜಕೀಯ ಏಳುಬೀಳುಗಳಲ್ಲಿ ಜನತಾದಳದಲ್ಲಿದ್ದ ಎ.ಸಿದ್ದರಾಜು ಅವರು ಕಾಂಗ್ರೆಸ್ ಸೇರಿದರೆ, ಕಾಂಗ್ರೆಸ್‌ನಲ್ಲಿದ್ದ ವಿ.ಶ್ರೀನಿವಾಸಪ್ರಸಾದ್ ಜನತಾದಳದತ್ತ ಮುಖ ಮಾಡಿದರು. 1999ರಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸಪ್ರಸಾದ್ ಕಾಂಗ್ರೆಸ್‌ನ ಎ.ಸಿದ್ದರಾಜು ಅವರನು ಸೋಲಿಸಿ ಸೇಡು ತೀರಿಸಿಕೊಂಡರು.

2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಕಣದಿಂದ ಹಿಂದೆ ಸರಿದರು. ತಮ್ಮ ಸಂಬಂಧಿ ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ಎಂ.ಶಿವಣ್ಣ ಅವರನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎ.ಸಿದ್ದರಾಜು ಅವರು ಸೋತರು. ಇಲ್ಲಿಯ ತನಕ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವೆಯೇ ಫೈಟ್ ಇತ್ತು. ಬಿಜೆಪಿ ಲೆಕ್ಕಕ್ಕೆ ಇರಲಿಲ್ಲ.

2008ರಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ನಡುವೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ತನ್ನ ಒಪ್ಪಂದದಂತೆ ಅಧಿಕಾರ ಹಂಚಿಕೆ ಮಾಡಲಿಲ್ಲ ಎಂದು ಅಸಮಾಧಾನಗೊಂಡು ವಚನ ಭ್ರಷ್ಟ ಜೆಡಿಎಸ್ ಎಂದು ವ್ಯಾಪಕ ಪ್ರಚಾರ ಮಾಡಿದ್ದರು.

ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತು. ಅಲ್ಲಿಂದ ಚಾಮರಾಜನಗರ ಕ್ಷೇತ್ರದಲ್ಲೂ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಂಡು 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಯಾಗಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್‌ನ ಧ್ರುವನಾರಾಯಣ ಅವರ ವಿರುದ್ಧ ಕಣಕ್ಕೆ ಇಳಿಸಿತ್ತು. ಧ್ರುವನಾರಾಯಣ ಅವರು 2 ಬಾರಿಯೂ ಗೆದ್ದರು.

ಧ್ರುವನಾರಾಯಣ ಮೈತ್ರಿ ಅಭ್ಯರ್ಥಿ: ಈ ಬಾರಿ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಬಿಜೆಪಿಯಿಂದ ಕಾಂಗ್ರೆಸ್‌ನ ಧ್ರುವ ಅವರ ಎದುರಾಳಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಡುವೆ ಸೀಟು ಹಂಚಿಕೆ ಮಾಡಿಕೊಂಡಿರುವುದರಿಂದ ಧ್ರುವನಾರಾಯಣ ಅವರು ಮೈತ್ರಿ ಅಭ್ಯರ್ಥಿಯಾಗಿದ್ದಾರೆ.
2009 ಮತ್ತು 2014ರ ಚುನಾವಣೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರು ಜಯಗಳಿಸದಿದ್ದರೂ ಗಳಿಸಿದ ಮತಗಳು ಮಾತ್ರ ಗಮನಾರ್ಹ. 2009ರಲ್ಲಿ ಕಾಂಗ್ರೆಸ್‌ನ ಧ್ರುವ ಅವರು 3,69,970 ಮತಗಳಿಸಿ ವಿಜೇತರಾದರೆ, ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ 3,65,968 ಮತ ಪಡೆದು ಸೋತರು. ಜೆಡಿಎಸ್‌ನ ಕೋಟೆ ಎಂ.ಶಿವಣ್ಣ 1,06,876 ಮತ ಗಳಿಸಿದ್ದರು.
ಹಾಗೆಯೇ 2014ರಲ್ಲಿ ಕಾಂಗ್ರೆಸ್‌ನ ಧ್ರುವ ಅವರು 5,67,782 ಮತಗಳಿಸಿ ವಿಜೇತರಾದರೆ, ಅವರ ಪ್ರತಿಸ್ಪರ್ಧಿ ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ 4,26,600 ಮತ ಪಡೆದು ಸೋತರು. ಜೆಡಿಎಸ್‌ನ ಕೋಟೆ ಎಂ.ಶಿವಣ್ಣ 58,760 ಮತ ಗಳಿಸಿದ್ದರು. ಈ ಸಲ ಜೆಡಿಎಸ್‌ನ ಮತಗಳು ಯಾರತ್ತ ಹೋಗಲಿವೆ ಎಂಬ ಪ್ರಶ್ನೆ ಎದ್ದಿದೆ.

ಕೆಲಸ ಮಾಡಿದ್ದ ಎಚ್ಚೆಸ್ಸೆಂ ತಂತ್ರಗಾರಿಕೆ: ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದ ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರು 1994ರ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರಕ್ಕೆ ಜನತಾದಳದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದರು. ನಂತರ ಜನತಾ ಪರಿವಾರದ ಪ್ರಭಾವಿ ನಾಯಕರಾಗಿ ಬೆಳೆದು 1999ರಲ್ಲಿ ಜೆಡಿಯುನಿಂದ ಮತ್ತು 2004ರಲ್ಲಿ ಜೆಡಿಎಸ್‌ನಿಂದ ಗೆದ್ದು ಶಾಸಕರಾಗಿದ್ದರು.
1996, 1998, 1999, 2004ರ ಲೋಕಸಭಾ ಚುನಾವಣೆಗಳಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಜನತಾ ಪರಿವಾರ ಜಯಗಳಿಸಿತ್ತು. ಈ ಗೆಲುವಿನ ಹಿಂದೆ ಎಚ್.ಎಚ್.ಮಹದೇವಪ್ರಸಾದ್ ಅವರ ಶ್ರಮ ಮತ್ತು ರಾಜಕೀಯ ತಂತ್ರಗಾರಿಕೆ ಕೆಲಸ ಮಾಡಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪ್ರಸಾದ್ ಕಾಂಗ್ರೆಸ್ ಸೇರಿದ್ದರು. ಬಳಿಕ 2009 ಮತ್ತು 2014ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರು ಗೆದ್ದಿದ್ದರು. ಈ ಗೆಲುವಿನ ಹಿಂದೆ ಮಹದೇವಪ್ರಸಾದ್ ಅವರ ರಾಜಕೀಯ ಪ್ರಭಾವವಿತ್ತು ಎಂದು ಜಿಲ್ಲೆಯ ರಾಜಕೀಯ ಮುಖಂಡರು ಹೇಳುತ್ತಾರೆ.