ಸರ್ಕಾರಕ್ಕೆ ಸಿದ್ದು ಟೈಮ್ ಬಾಂಬ್

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಮೈತ್ರಿ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ. ಮೇ 23ರ ಚುನಾವಣೆ ಫಲಿತಾಂಶದ ನಂತರ ಅವರು ಬಾಂಬ್ ಸ್ಪೋಟಿಸಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಿಶ್ಲೇಷಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೋಸ್ತಿ ಸರ್ಕಾರದಲ್ಲಿ ಉಂಟಾಗಿ ರುವ ಭಿನ್ನಾಭಿಪ್ರಾಯದ ಕೇಂದ್ರ ಬಿಂದು ಮಾಜಿ ಸಿಎಂ ಸಿದ್ದರಾಮಯ್ಯ. ಅವರು ಹೆಣೆದ ಬಲೆಗೆ ಯಾವುದೇ ಸಮಯದಲ್ಲಿ ಈ ಸರ್ಕಾರ ಬೀಳಬಹುದು ಎಂದರು.

ಮಂಡ್ಯದಲ್ಲಿ ಸುಮಲತಾ ಪರವಾಗಿ ಚುನಾವಣೆ ನಡೆಸಿದ ಸಿದ್ದರಾಮಯ್ಯ ಆಪ್ತರಾದ ಚಲುವರಾಯಸ್ವಾಮಿ, ಸುಮಲತಾ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಮಂಡ್ಯ ಭಿನ್ನಾಭಿಪ್ರಾಯದ ಹಿಂದೆ ಸಿದ್ದರಾಮಯ್ಯ ಇರುವುದನ್ನು ಬಹಿರಂಗಗೊಳಿಸಿದ್ದಾರೆ ಎಂದರು.

ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಚುನಾಯಿತರಾಗುವುದು ಸಿದ್ದರಾಮಯ್ಯಗೆ ಬೇಕಾಗಿರಲಿಲ್ಲ. ಇದನ್ನರಿತ ಸಿಎಂ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಮೂಲಕ ತಮ್ಮ ಅಸಮಾಧಾನ ಹೊರಹಾಕಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಗೆ ಬಂದಿದ್ದು ತಮ್ಮ ಪಕ್ಷದ ಮುಖಂಡರ ಮಕ್ಕಳ ಮದುವೆಯಲ್ಲಿ ಪಾಲ್ಗೊಳ್ಳಲು. ಅವರಿಗೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಆಸಕ್ತಿ ಇದ್ದಿದ್ದರೆ ಇನ್ನೊಂದು ದಿನ ಇದ್ದು ಪ್ರಚಾರ ಮಾಡುತ್ತಿದ್ದರು ಎಂದು ರ್ತಸಿದರು.

ಈ ಹಿಂದೆ ರಾಜಕೀಯ ನಿವೃತ್ತಿ ಕೈಗೊಳ್ಳುವುದಾಗಿ ಘೋಷಿಸಿದ್ದ ಸಿದ್ದರಾಮಯ್ಯ, ಕಳೆದ ಸಲದ್ದೇ ತಮ್ಮ ಕೊನೆಯ ಚುನಾವಣೆ ಎಂದಿದ್ದರು. ಇದೀಗ ಮುಂದಿನ ಮುಖ್ಯಮಂತ್ರಿ ತಾನೇ ಎಂದು ಆಪ್ತರಿಂದ ಹೇಳಿಸುತ್ತಿದ್ದಾರೆ ಎಂದು ಟೀಕಿಸಿದರು.

ಕನಕಪುರ ಕಾರ್ಯಕರ್ತರು: ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಚುನಾವಣಾ ಪ್ರಚಾರಕ್ಕೆ ಕಾರ್ಯ ಕರ್ತರಿಲ್ಲದ ಕಾರಣ ಕಾಂಗ್ರೆಸ್ ಮುಖಂಡರು ಕನಕಪುರ ಹಾಗೂ ಬೆಂಗಳೂರು ಗ್ರಾಮಾಂತರದಿಂದ ಜನರನ್ನು ಕರೆಸಿಕೊಂಡಿದ್ದಾರೆ ಎಂದು ಶೆಟ್ಟರ್ ವ್ಯಂಗ್ಯವಾಡಿದರು.

ಬರಗಾಲ ನಿರ್ವಹಣೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೂ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೇವಲ ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕುಂದಗೋಳ ಪ್ರಚಾರದ ಸಮಯದಲ್ಲಿ ಕಣ್ಣೀರಿಡುವ ಮೂಲಕ ಸಚಿವ ಡಿ.ಕೆ. ಶಿವಕುಮಾರ ಅವರು ಅಳುಮುಂಜಿ ದೇವೇಗೌಡರ ಕುಟುಂಬದ ಪೇಟೆಂಟ್​ನ ಪಾಲುದಾರರಾಗಿದ್ದಾರೆ ಎಂದು ಟೀಕಿಸಿದರು.

ಕಾವೇರಿಯಲ್ಲೇಕೆ ಸಿದ್ದರಾಮಯ್ಯ?:ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಒಂದು ವರ್ಷ ಗತಿಸಿದರೂ ಬೆಂಗಳೂರಿನ ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಿಸಿದರು.

ಮುಖ್ಯಮಂತ್ರಿಯಾದವರು ಅಧಿಕಾರದಿಂದ ಕೆಳಗಿಳಿದ ನಂತರ ಅಧಿಕೃತ ನಿವಾಸ ಖಾಲಿ ಮಾಡಲು 2 ತಿಂಗಳು ಗಡುವು ಇರುತ್ತದೆ.

ಆದರೆ, ಸಿದ್ದರಾಮಯ್ಯ ಸಚಿವ ಜಾರ್ಜ್ ಹೆಸರಿನಲ್ಲಿ ಆ ನಿವಾಸ ಪಡೆದು ಅನಧಿಕೃತವಾಗಿ ವಾಸಿಸುತ್ತಿದ್ದಾರೆ ಎಂದು ದೂರಿದರು. ತಾವು ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿದ 2 ತಿಂಗಳಲ್ಲಿ ಕಾವೇರಿ ನಿವಾಸ ಖಾಲಿ ಮಾಡಿದ್ದಾಗಿಯೂ ಶೆಟ್ಟರ್ ತಿಳಿಸಿದರು.

ಸುಮಲತಾ ಅಂಬರೀಷಗೆ ಬೆಂಬಲ ನೀಡಿದ್ದು ನಾವಾ, ಅವರಾ?: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಸಿದ್ದರಾಮಯ್ಯ ಬೆಂಬಲ ನೀಡಿದ್ದರು ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಆರೋಪಕ್ಕೆ, ಬೆಂಬಲ ನೀಡಿದ್ದು ನಾವಾ, ಅವರಾ? ಎಂದು ಕೇಳುವ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದರು. ನಾವು ಬೆಂಬಲ ನೀಡಿದ್ದೇವೆ ಎನ್ನುವುದು ಸುಳ್ಳು. ಈ ರೀತಿ ಬೆಂಕಿ ಹಚ್ಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಸುಳ್ಳು ಹೇಳುವುದು ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿಲ್ಲ ಎಂದು ಕಿಡಿ ಕಾರಿದರು. ದೋಸ್ತಿ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ ಎಂಬ ಶೆಟ್ಟರ್ ಹೇಳಿಕೆಗೆ, ಸಮ್ಮಿಶ್ರ ಸರ್ಕಾರ ಇನ್ನೂ 4 ವರ್ಷ ಭದ್ರವಾಗಿರುತ್ತದೆ. ಬಿಜೆಪಿಯವರಿಗೆ ಹೇಳಿಕೊಳ್ಳಲು ಏನೂ ಇಲ್ಲ ಎಂದು ಟೀಕಿಸಿದರು.