ಟಿಳಕವಾಡಿಯ ಎಕ್ಸಿಸ್ ಬ್ಯಾಂಕ್ ಕಚೇರಿಗೆ ಮುತ್ತಿಗೆ

ಬೆಳಗಾವಿ:  ಕೃಷಿ ಟ್ರಾೃಕ್ಟರ್ ಸಾಲ ಮರುಪವಾತಿಸಿಲ್ಲ ಎಂಬ ಕಾರಣಕ್ಕೆ ರೈತನಿಗೆ ಕೋರ್ಟ್ ಮೂಲಕ ಎಕ್ಸ್ಸಿ ಸ್ ಬ್ಯಾಂಕ್ ಅಧಿಕಾರಿಗಳು ಬಂಧನ ವಾರೆಂಟ್ ಹೊರಡಿಸಿರುವುದನ್ನು ವಿರೋಧಿಸಿ ಬುಧವಾರ ನಗರದ ಟಿಳಕವಾಡಿಯ ಎಕ್ಸಿ ಸ್ ಬ್ಯಾಂಕ್‌ನ ಮುಖ್ಯ ಕಚೇರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತರು ಮಳೆ ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವಾಗ ಎಕ್ಸಿ ಸ್ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಬಂಧನ ವಾರೆಂಟ್ ಹೊರಡಿಸಿ ರೈತರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲ ಮರು ಪಾವತಿಗಾಗಿ ರೈತರಿಗೆ ಮೇಲಿಂದ ಮೇಲೆ ನೀಡುತ್ತಿರುವ ನೋಟಿಸ್‌ಗೆ ಹೆದರಿ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ರೈತರ ಹಿತರಕ್ಷಣೆ ಕಾಪಾಡುವ ಬದಲು ರೈತರನ್ನು ಕೊಲೆ ಮಾಡುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಎಕ್ಸಿ ಸ್ ಬ್ಯಾಂಕ್ ಅಧಿಕಾರಿಗಳು ಕೂಡಲೇ ಬಂಧನ ವಾರೆಂಟ್ ವಾಪಸ್ ಪಡೆದುಕೊಳ್ಳಬೇಕು. ರೈತನ ಬಾಕಿ ಉಳಿದುಕೊಂಡಿರುವ ಟ್ರಾೃಕ್ಟರ್ ಸಾಲಕ್ಕಿಂತ ಹೆಚ್ಚಿನ ಮೊತ್ತದ ಕೃಷಿ ಚಟುವಟಿಕೆ ಉಪಕರಣಗಳನ್ನು ಜಪ್ತಿ ಮಾಡಿಕೊಂಡು ಅಗ್ಗದ ದರದಲ್ಲಿ ಹರಾಜು ಹಾಕಿದ್ದಾರೆ. ಹಾಗಾಗಿ ಟ್ರಾೃಕ್ಟರ್ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ಘಟನೆ ವಿವರ: ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ಸಂಗಪ್ಪ ಅಡಗಿಮನಿ ಎಂಬ ರೈತ 2005ರಲ್ಲಿ ಕೃಷಿ ಚಟುವಟಿಕೆಗಾಗಿ ಟ್ರಾೃಕ್ಟರ್ ಖರೀದಿಸಲು 4.88 ಲಕ್ಷ ರೂ.ಸಾಲ ಪಡೆದುಕೊಂಡಿದ್ದರು. ಆದರೆ, ಬಳಿಕ ಬರಗಾಲ ಎದುರಾಗಿ ಹೊಲದಲ್ಲಿ ಯಾವುದೇ ಆದಾಯ ಬರದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಅಸಲಿ ಸಾಲದ ಜತೆಗೆ ಬಡ್ಡಿ ಸೇರಿ 5.46 ಲಕ್ಷ ರೂ. ಸಾಲದ ಮೊತ್ತ ಆಗಿತ್ತು. ಸಾಲ ಮರು ಪಾವತಿಸುವಂತೆ 2006ರಿಂದಲೇ ಬ್ಯಾಂಕ್ ಅಧಿಕಾರಿಗಳು ರೈತನಿಗೆ ಸಾಲ ಮರುಪಾವತಿಸುವಂತೆ ಮೇಲಿಂದ ಮೇಲೆ ತಿಳಿವಳಿಕೆ ಪತ್ರ ನೀಡುತ್ತಿದ್ದರು. ಆದರೆ, ರೈತನು ಬ್ಯಾಂಕ್‌ನ ಪತ್ರಗಳಿಗೆ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ 2009ರಲ್ಲಿ ಬ್ಯಾಂಕ್ ಅಧಿಕಾರಿಗಳು ಟ್ರಾೃಕ್ಟರ್ ಜಪ್ತಿ ಮಾಡಿಕೊಂಡು 2.20 ಲಕ್ಷ ರೂ.ಗೆ ಹರಾಜು ಹಾಕಿದ್ದಾರೆ. ಬಳಿಕ ಬಾಕಿ ಉಳಿದಿರುವ ಸಾಲದ ಮೊತ್ತವನ್ನು ನೀಡುವಂತೆ ರೈತನಿಕೆ ನಿರಂತರ ನೋರ್ಟ್ ನೋಟಿಸ್ ಜಾರಿ ಮಾಡಿದ್ದರು. ಆದರೆ, ರೈತನು ಸ್ಪಂದಿಸದಿದ್ದರಿಂದ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೂಲಕ 2018 ಸೆಪ್ಟೆಂಬರ್ 20ರಂದು ಬಂಧನ ವಾರೆಂಟ್ ಹೊರಡಿಸಿ 2019 ಫೆ.18ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ರೈತರು ದೂರಿದ್ದಾರೆ. ರೈತ ಸಂಘದ ಚೂನಪ್ಪ ಪೂಜಾರಿ, ಅಶೋಕ ಯಮಕನಮರಡಿ, ಸೋಮು ರೈನಾಪುರ, ಜಯಶ್ರೀ ಗುರನ್ನವರ, ಅಮಿನ್ ಪಾಷಾ, ಸಂಗಪ್ಪ ಅಡಗಿಮನಿ ಹಾಗೂ ರೈತ ಮುಖಂಡರು ಇದ್ದರು.