ಬ್ಲೂವೇಲ್, ಪಬ್ಜಿಯಂಥ ಅಪಾಯಕಾರಿ ಆಟಗಳು ನೂರಾರು ಪ್ರಾಣಗಳನ್ನು ಕಸಿದುಕೊಂಡ ಬೆನ್ನಲ್ಲೇ ‘ಟಿಕ್ಟಾಕ್’ ಎಂಬ ಆಪ್ ಯುವಜನರನ್ನು ತನ್ನ ತೆಕ್ಕೆಯೊಳಕ್ಕೆ ಸೆಳೆದುಕೊಂಡಿದೆ. ಮನರಂಜನೆಗಷ್ಟೇ ಸೀಮಿತ ಆಗಬೇಕಿದ್ದ ಈ ಆಪ್ ಗೀಳುರೋಗವಾಗಿ ಕ್ರಿಮಿನಲ್ ಪ್ರಕರಣಗಳಿಗೂ ದಾರಿ ಮಾಡಿಕೊಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಟಿಕ್ಟಾಕ್ ಕಂಪನಿ, ಅಪರಾಧಿಗಳ ಮೇಲೆ ಕಣ್ಣಿಟ್ಟಿದೆ.
| ಸುಚೇತನಾ ನಾಯ್ಕ
ಮೊನ್ನೆಯಷ್ಟೇ ಹೈದರಾಬಾದ್ನಲ್ಲಿ ನಡೆದ ಘಟನೆ ಇದು. ನರಸಿಂಹ ಎಂಬ ಯುವಕ ಕೆರೆಯ ದಂಡೆಗೆ ಹೋಗಿ ಡಾನ್ಸ್ ಮಾಡಿದ. ಅವನ ಉದ್ದೇಶ ಟಿಕ್ಟಾಕ್ ಆಪ್ನಲ್ಲಿ ವಿಡಿಯೋ ಮಾಡುವುದು. ವಿಡಿಯೋಗೆ ಪೋಸ್ ನೀಡುವ ಭರದಲ್ಲಿ ಕಾಲು ಜಾರಿ ಬಿದ್ದ. ಈಜು ಬರುತ್ತಿರಲಿಲ್ಲ. ರಕ್ಷಣೆಗೆ ಕೂಗಿಕೊಂಡರೂ ಯಾರೂ ಬರಲಿಲ್ಲ. ಅಲ್ಲಿಯೇ ಪ್ರಾಣ ಕಳೆದುಕೊಂಡ.
ಇನ್ನೊಂದು ಕಡೆ, ಕೋಲಾರ ತಾಲೂಕಿನ ವಡಗೇರಿ ಗ್ರಾಮದ ವಿದ್ಯಾರ್ಥಿನಿ ಮಾಲಾ, ಟಿಕ್ಟಾಕ್ ವಿಡಿಯೋ ಮಾಡುವಾಗ ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸತ್ತಳು, ಕಳೆದ ಜೂನ್ನಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಗ್ರಾಮದ ಯುವಕ, ಸ್ಟಂಟ್ ಮಾಡುತ್ತಾ ವಿಡಿಯೋ ಮಾಡಹೋಗಿ ಕತ್ತು, ಬೆನ್ನು ಮೂಳೆ ಮುರಿದುಕೊಂಡು ಸಾವನ್ನಪ್ಪಿದ್ದ. ಒಂದೇ… ಎರಡೇ… ತಮಾಷೆಯ ವಿಡಿಯೋಗಳನ್ನು ಹಾಕಿ ಜನರ ಮನರಂಜಿಸುವ ಉದ್ದೇಶದಿಂದ ಚೀನೀಯರು ತಯಾರು ಮಾಡಿರುವ ಟಿಕ್ಟಾಕ್ ಆಪ್, ಭಾರತಾದ್ಯಂತ ಈ 2-3 ವರ್ಷಗಳಲ್ಲಿಯೇ ನೂರಾರು ಮಂದಿಯನ್ನು, ಅದರಲ್ಲಿಯೂ ಹೆಚ್ಚಾಗಿ ಯುವಕ- ಯುವತಿಯರನ್ನು ಬಲಿ ಪಡೆದಿದೆ, ಸಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ!
ಟಿಕ್ಟಾಕ್ನಲ್ಲಿಯೇ ಮುಳುಗಿರುವ ಹೆಂಡತಿಯಿಂದ ಬೇಸತ್ತ ತಮಿಳುನಾಡಿನ ಯುವಕನೊಬ್ಬ ಆಕೆಯಿಂದ ಮೊಬೈಲ್ ಕಸಿದುಕೊಂಡ ಕಾರಣಕ್ಕೆ 24 ವರ್ಷದ ಅನಿತಾ, ವಿಷ ಕುಡಿದು, ಅದೇ ಆಪ್ನಲ್ಲಿ ವಿಡಿಯೋ ಮಾಡಿ ಪ್ರಾಣಬಿಟ್ಟಿದ್ದು ಇದರ ಗೀಳಿನ ಪರಮಾವಧಿಗೆ ಸಾಕ್ಷಿಯಾಗಿದೆ.
ಟಿಕ್ಟಾಕ್ ಹುಚ್ಚಿಗೆ ಬಲಿಯಾಗಿ ತಮ್ಮದೇ ತಪ್ಪಿನಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಕಥೆ ಒಂದೆಡೆಯಾದರೆ, ಈ ಆಪ್ ಸೃಷ್ಟಿಸುವ ಅನಾಹುತಗಳು ಇನ್ನೊಂದೆಡೆ. ಅಶ್ಲೀಲ ವಿಡಿಯೋಗಳನ್ನು ಮಾಡಿ ಹರಿಬಿಡುವುದು, ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡುವುದು ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳಿಗೆ ಈ ಆಪ್ ಮಾಧ್ಯಮವಾಗಿದ್ದು, ಜನರನ್ನು ದಂಗಾಗಿಸಿದೆ.
2019ರ ಹೊಸ ವರ್ಷದ ಆಚರಣೆಯ ಭರದಲ್ಲಿ ಬೆಂಗಳೂರಿನ ಬನ್ನೇರಘಟ್ಟದ ಯುವತಿಯೊಬ್ಬಳು ಜೋಶ್ನಿಂದ ಕುಣಿದು ಕುಪ್ಪಳಿಸಿ, ಅದರ ವಿಡಿಯೋ ಮಾಡಿ ಈ ಆಪ್ ಮೂಲಕ ಹರಿಬಿಟ್ಟಳು. ಒಂದೇ ದಿನ ಫೇಸ್ಬುಕ್ನಲ್ಲಿ ಲೈಕು, ಕಮೆಂಟುಗಳ ಸುರಿಮಳೆಯಾಯಿತು, ಯುವತಿ ಹಿರಿಹಿರಿ ಹಿಗ್ಗಿದಳು. ಆಮೇಲೆ ಶುರುವಾಯಿತು ನೋಡಿ… ಒಂದರ ಮೇಲೊಂದರಂತೆ ಅಶ್ಲೀಲ ಕಮೆಂಟ್ಗಳ ಸುರಿಮಳೆ! ಈ ಡಾನ್ಸ್ಗೆ ಅಶ್ಲೀಲ ಹಾಡುಗಳನ್ನು ಜೋಡಿಸಿ, ಆಕೆ ಕಲಿಯುತ್ತಿರುವ ಕಾಲೇಜಿನ ಹುಡುಗರೇ ಎಲ್ಲೆಡೆ ಶೇರ್ ಮಾಡಿದರು. ಆ ವಿಡಿಯೋ ನೋಡಿದ ಕೆಲ ಹುಡುಗರು, ಆಕೆಯ ಮೊಬೈಲ್ ನಂಬರ್ ಪತ್ತೆಹಚ್ಚಿ ಹಗಲು- ರಾತ್ರಿ ಎನ್ನದೇ ಕೆಟ್ಟ ಮೆಸೇಜ್, ವಿಡಿಯೋಗಳನ್ನು ಕಳುಹಿಸತೊಡಗಿದರು. ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಯುವತಿ ಡಿಪ್ರೆಷನ್ಗೆ ಹೋದಾಗ ತಂದೆ-ತಾಯಿ ಹೆದರಿದರು. ಸೈಬರ್ ಪೊಲೀಸರಲ್ಲಿ ದೂರು ದಾಖಲಿಸಿದರು.
ಜೂನ್ 18ರಂದು ಜಾರ್ಖಂಡ್ನಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ತಬ್ರೇಜ ಅನ್ಸಾರಿ ಎಂಬಾತನ ಮೇಲೆ ಕೆಲವು ಯುವಕರು ದಾಳಿ ಮಾಡಿದರು. ಜೈ ಶ್ರೀರಾಮ್ ಜೈ ಹನುಮಾನ್ ಎಂದು ಹೇಳುವಂತೆ ಆ ಯುವಕನನ್ನು ಒತ್ತಾಯಿಸಿ, ಆತನ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದರು. ನಂತರ ಆ ಯುವಕ ಪ್ರಾಣಬಿಟ್ಟ. ಯುವಕರು ಹಲ್ಲೆ ಮಾಡಿರುವ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟರು. ಇದೀಗ ಆ ಆರೋಪಿಗಳು ಪೊಲೀಸರ ‘ಅತಿಥಿ’ಯಾಗಿದ್ದಾರೆ!
ಸೆಲೆಬ್ರಿಟಿ ಆಗುವ ಹುಚ್ಚು: ಭಾರತವೊಂದರಲ್ಲಿಯೇ ಇಲ್ಲಿಯವರೆಗೆ 88.6 ಕೋಟಿ ಮಂದಿ ಟಿಕ್ಟಾಕ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದರೆ ಇದು ಯಾವ ಪರಿಯಲ್ಲಿ ಜನರನ್ನು ತನ್ನ ತೆಕ್ಕೆಗೆ ಬೀಳಿಸಿಕೊಂಡಿದೆ ಎಂಬುದರ ಅರಿವಾಗುತ್ತದೆ. ಅಷ್ಟಕ್ಕೂ 15 ಸೆಕೆಂಡ್ಗಳ ಈ ವಿಡಿಯೋ ಆಪ್ ಇಷ್ಟು ಮಂದಿಯನ್ನು ಮರುಳು ಮಾಡಲು ಕಾರಣವೇನು? ಈಚೆಗೆ ನಡೆದ ಅಧ್ಯಯಗಳ ಪ್ರಕಾರ, ರಾತ್ರೋ ರಾತ್ರಿ ಸೆಲೆಬ್ರಿಟಿ ಆಗುವ ಹುಚ್ಚೇ ಇದಕ್ಕೆ ಕಾರಣವಂತೆ. ಈ ಹುಚ್ಚಿಗೆ ಇಂಬು ಎಂಬಂತೆ ಕೆಲವು ನಟ-ನಟಿಯರೂ ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿ ಅದನ್ನು ವೈರಲ್ ಮಾಡುತ್ತಿರುವುದು, ಯುವಜನರು ಇದರ ಗೀಳು ಹಚ್ಚಿಸಿಕೊಳ್ಳಲು ಇನ್ನಷ್ಟು ಕಾರಣವಾಗುತ್ತಿದೆ.
ಹೆಚ್ಚಿನ ಯುವಜನರಿಗೆ ರೋಲ್ ಮಾಡೆಲ್ಗಳೆಂದರೆ ಚಿತ್ರ ನಟ- ನಟಿಯರು. ತಾವೂ ಅವರನ್ನೇ ಅನುಸರಿಸಬೇಕು, ಸಿನಿಮಾದಲ್ಲಿ ಅಲ್ಲದಿದ್ದರೂ, ಟೀವಿಯಲ್ಲಾದರೂ ಕಾಣಿಸಿಕೊಳ್ಳುವ ಆಸೆ. ಆದರೆ ಎಲ್ಲರಿಗೂ ಇಂಥ ಭಾಗ್ಯ ದಕ್ಕುವುದಿಲ್ಲವಲ್ಲ! ಅಂಥವರಿಗೆ ವರದಾನವಾಗಿದ್ದು ಟಿಕ್ಟಾಕ್. ತಮ್ಮೊಳಗಿನ ನಟನಾ ಸಾಮರ್ಥ್ಯವನ್ನು ತೋರಿಸುವ ವೇದಿಕೆ ಇದಾಯಿತು. ಆರಂಭದಲ್ಲಿ ಕೆಲವರು ರಾತ್ರೋ ರಾತ್ರಿ ಫೇಮಸ್ ಆಗಿದ್ದೂ ಇದೆ. ಇನ್ನು ಕೆಲವರಿಗೆ ಒಂದಿಷ್ಟು ಲೈಕ್, ಕಮೆಂಟ್ಗಳು ಬಂದು, ತಾವೂ ಚಿತ್ರನಟ- ನಟಿಯಾಗಿದ್ದಷ್ಟೇ ಖುಷಿ ಪಟ್ಟದ್ದೂ ಇದೆ. ಲೈಕ್, ಕಮೆಂಟ್ಗಳು ಹೆಚ್ಚಿಗೆ ಬಂದಿಲ್ಲದವರು, ತಮ್ಮ ನಟನೆ ಚೆನ್ನಾಗಿ ಆಗಿಲ್ಲವೇನೋ ಎಂದುಕೊಂಡು ಕಷ್ಟದ ಸ್ಟಂಟ್ಗಳನ್ನು ಮಾಡಹೋಗಿ (ತಮ್ಮ ನೆಚ್ಚಿನ ನಟ- ನಟಿಯರು ಮಾಡಿದಂತೆ) ಜೀವ ಕಳೆದುಕೊಂಡರು, ಕಳೆದುಕೊಳ್ಳುತ್ತಿದ್ದಾರೆ.
ಬಳಕೆದಾರರ ಮೇಲೆ ಹದ್ದಿನ ಕಣ್ಣು
ಕೋರ್ಟ್ನಿಂದ ಟಿಕ್ಟಾಕ್ ಆಪ್ ಬ್ಯಾನ್ ಆದ ನಂತರ ಹರಸಾಹಸಪಟ್ಟು, ಬ್ಯಾನ್ ತೆರವುಗೊಳಿಸಿಕೊಂಡಿರುವ ಈ ಆಪ್ನ ಮಾಲೀಕರಾಗಿರುವ ಬೈಟ್ ಡಾನ್ಸ್ ಟೆಕ್ನಾಲಜಿ ಕಂಪನಿ ಈಗ ಬಳಕೆದಾರರ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಅಶ್ಲೀಲ ವಿಡಿಯೋಗಳನ್ನು ಈ ಆಪ್ನಲ್ಲಿ ಅಪ್ಲೋಡ್ ಮಾಡದಂತೆ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕಂಪನಿ ಕೋರ್ಟ್ಗೆ ನೀಡಿರುವ ವಾಗ್ದಾನದಂತೆ ನಡೆದುಕೊಂಡಿದೆ. ಅಷ್ಟೇ ಅಲ್ಲದೇ, ಹಿಂಸಾತ್ಮಕ, ಪ್ರಚೋದನಕಾರಿ, ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಇತ್ಯಾದಿ ವಿಡಿಯೋಗಳನ್ನು ಅಪ್ಲೋಡ್ ಮಾಡಿರುವ ಹಲವು ಬಳಕೆದಾರರ ಖಾತೆ ಈಗಾಗಲೇ ರದ್ದುಗೊಂಡಿದೆ. ಇಂಥ ಬಳಕೆದಾರರನ್ನು ತಾವು ಸಹಿಸುವುದಿಲ್ಲ ಎಂದಿರುವ ಕಂಪನಿ, ಖಾತೆ ರದ್ದು ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಿದೆ.
ಕೋರ್ಟ್ ಅಂಗಳಕ್ಕೆ
ಮನರಂಜನೆಗೆ ವೇದಿಕೆ ಒದಗಿಸಬೇಕಿದ್ದ ಟಿಕ್ಟಾಕ್ ಆಪ್, ಅಲ್ಪ ಅವಧಿಯಲ್ಲಿ ಹಿಂಸಾಚಾರ, ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳಿಗೂ ಬಳಕೆಯಾಗಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದೇ ಕಾರಣಕ್ಕೆ ಈ ಆಪ್ ಬ್ಯಾನ್ ಆಗುವ ಹಂತಕ್ಕೂ ಬಂತು.
ಈ ಆಪ್ ಗೀಳಿನಿಂದ ಯುವಜನರು ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದಾಗಿ ದೂರಿ ಮದ್ರಾಸ್ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ಟಿಕ್ಟಾಕ್ ಆಪ್ ಅನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಕಳೆದ ಏಪ್ರಿಲ್ನಲ್ಲಿ ಭಾರತದಲ್ಲಿ ಇದನ್ನು ಬ್ಯಾನ್ ಮಾಡುವಂತೆ ಸೂಚಿಸಿತ್ತು.
ಇದರಿಂದಾಗಿ ಏ.18ರಂದು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ಗಳಿಂದ ಟಿಕ್ಟಾಕ್ ಆಪ್ ಅನ್ನು ತೆಗೆದುಹಾಕಲಾಯಿತು, ಆದರೆ ಅದಾಗಲೇ ಡೌನ್ಲೋಡ್ ಮಾಡಿಕೊಂಡಿರುವವರು ಆಪ್ ಬಳಸಲು ಅವಕಾಶವಿತ್ತು. ಈ ತೀರ್ಪಿಗೆ ಸುಪ್ರೀಂಕೋರ್ಟ್ ಕೂಡ ‘ಅಸ್ತು’ ಎಂದ ಮೇಲೆ ಬೈಟ್ ಡಾನ್ಸ್ ಟೆಕ್ನಾಲಜಿ ಕಂಪನಿ ಆತಂಕಕ್ಕೆ ಒಳಗಾಯಿತು. ಹೊಸ ಬಳಕೆದಾರರು ಇಲ್ಲದೆಯೇ ಕಂಪನಿಗೆ ದಿನಕ್ಕೆ -ಠಿ; 4.5 ಕೋಟಿ ನಷ್ಟ ಉಂಟಾಗತೊಡಗಿತು. ಅಂದರೆ ಈ ಆಪ್ ಮೂಲಕ ಬರುವ ಜಾಹೀರಾತಿನಿಂದ ಕಂಪನಿ ಅದೆಷ್ಟು ಆದಾಯ ಮಾಡಿಕೊಳ್ಳುತ್ತಿದೆ ಎಂಬುದು ಊಹೆಗೂ ನಿಲುಕದ್ದು! ಜತೆಗೆ, 250 ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ವಣವಾಯಿತು. ಆದ್ದರಿಂದ ಈ ಆಪ್ ಬಳಕೆದಾರರ ಮೇಲೆ ಕಣ್ಣಿಡುವುದಾಗಿ ಕಂಪನಿ ಕೋರ್ಟ್ಗೆ ವಾಗ್ದಾನ ಮಾಡಿದ ಮೇಲೆ ಬ್ಯಾನ್ ಸದ್ಯ ತೆರವುಗೊಳಿಸಲಾಗಿದೆ.
ಖಾತೆ ರದ್ದಾದರೆ…
ಟಿಕ್ಟಾಕ್ ಖಾತೆಯನ್ನು ಒಮ್ಮೆ ಕಂಪನಿ ರದ್ದು ಮಾಡಿದರೆ, ಬಳಕೆದಾರರು ಲಾಗಿನ್ ಆಗಲು ಸಾಧ್ಯವಿಲ್ಲ. ಹೊಸದಾಗಿ ಆಪ್ ಡೌನ್ಲೋಡ್ ಮಾಡಿಕೊಳ್ಳುವುದೂ ಕಷ್ಟ. ಜತೆಗೆ, ಅಂಥ ಬಳಕೆದಾರರ ಮೇಲೆ ಕಾನೂನು ಕ್ರಮ ಕೂಡ ಕೈಗೊಳ್ಳುವ ಸಾಧ್ಯತೆ ಇರುತ್ತದೆ.
ಡಬ್ಸ್ಮಾ್ಯಷ್ನಿಂದ ಟಿಕ್ಟಾಕ್ವರೆಗೆ…
2014ರಲ್ಲಿ ಜರ್ಮನಿಯ ಕಂಪನಿಯೊಂದು ಡಬ್ಸ್ಮಾ್ಯಷ್ ಆಪ್ ಆರಂಭಿಸಿತು. ನಟ-ನಟಿಯರ ಧ್ವನಿಗೆ ತಮ್ಮ ಧ್ವನಿ ನೀಡಿ ಅವರಂತೆಯೇ ಅಭಿನಯಿಸಲು ಶುರುವಿಟ್ಟುಕೊಂಡ ಯುವಜನರು, ತಮ್ಮೊಳಗೆ ಆ ನಟ-ನಟಿಯನ್ನು ಆವಾಹಿಸಿಕೊಂಡು ಖುಷಿಪಟ್ಟರು. ವರ್ಷದಲ್ಲಿಯೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಈ ಆಪ್ ಡೌನ್ಲೋಡ್ ಮಾಡಿಕೊಂಡರು.
ಇದರ ಪ್ರಭಾವ ಗಮನಿಸಿದ ಚೀನಾದ ಅಲೆಕ್ಸ್ ಝುೂ, ‘ಮ್ಯೂಸಿಕಲಿ’ ಎಂಬ ಆಪ್ ಶುರು ಮಾಡಿದ. ಇದರ ಅಪ್ಡೇಟೆಡ್ ವರ್ಷನ್ನೇ ಟಿಕ್ಟಾಕ್. ಚೀನಾದ ‘ಬೈಟ್ ಡಾನ್ಸ್ ಟೆಕ್ನಾಲಜಿ’ ಕಂಪನಿಯ ಒಡೆತನದಲ್ಲಿದೆ ಈ ಆಪ್.
ಡಬ್ಸ್ಮಾ್ಯಷ್ ಆಪ್ಗಿಂತ ಮೂರು ಪಟ್ಟು ಹೆಚ್ಚು ಜನರು ಟಿಕ್ಟಾಕ್ ಆಪ್ ಡೌನ್ಲೋಡ್ ಮಾಡಿಕೊಂಡರು. ಯುವ ಸಮುದಾಯದಲ್ಲಂತೂ ಇದು ಹೊಸ ಅಲೆಯನ್ನೇ ಸೃಷ್ಟಿಸಿಬಿಟ್ಟಿತು. ತಮ್ಮ ನಟನಾ ಸಾಮರ್ಥ್ಯ ತೋರಿಸಲು ಇದೊಂದು ವೇದಿಕೆ ಸಿಕ್ಕಂತಾಯಿತು ಎಂದು ಆರಂಭದ ದಿನಗಳಲ್ಲಿ ಖುಷಿಪಟ್ಟ ಮಂದಿ, ಬರಬರುತ್ತಾ ಅದರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದರು. ತಮಾಷೆಯ ಪ್ರಸಂಗಗಳನ್ನು ರೆಕಾರ್ಡ್ ಮಾಡುವುದು, ಡ್ಯಾನ್ಸ್ ಮಾಡುವುದು, ಟ್ರೋಲ್ ಮಾಡುವುದು… ಹೀಗೆ ಚಿಕ್ಕಪುಟ್ಟ ವಿಡಿಯೋ ಮಾಡಿ ಖುಷಿ ಪಡುತ್ತಿದ್ದವರು ನಂತರ ಅದರಲ್ಲಿಯೇ ಚಾಲೆಂಜಿಂಗ್ ಶುರು ಹಚ್ಚಿಕೊಂಡರು.
ಅಲ್ಲಿಂದಲೇ ಶುರುವಾಗಿದ್ದು ಸಾವಿನ ಸರಣಿ. ಎತ್ತರದ ಬಿಲ್ಡಿಂಗ್ ತುದಿಯಲ್ಲಿ ನಿಂತೋ, ನದಿಗೆ ಇಳಿದೋ, ಬೆಂಕಿಯ ಸಮೀಪ ನಿಂತೋ, ಬೆಟ್ಟದ ಮೇಲೆ ಹೋಗಿಯೋ… ಹೀಗೆ ಡಾನ್ಸ್ ಮಾಡುತ್ತಾ ವಿಡಿಯೋ ತೆಗೆದು ಅದನ್ನು ಹರಿಬಿಟ್ಟು ಇತರರಿಗೂ ಚಾಲೆಂಜ್ ಮಾಡುವುದು ಶುರುವಾಯಿತು.
ಹರಿಯಾಣದ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡು ಸತ್ತ ಘಟನೆಯೂ ನಡೆಯಿತು.
ಹೊರಗೆ ಬರುವುದು ಹೇಗೆ?
ಬಾಲ್ಯದ ನೋವು, ಅವಹೇಳನ, ತಮ್ಮೊಳಗಿನ ಕೀಳರಿಮೆಯನ್ನು ಹೊರಕ್ಕೆ ಹಾಕದೇ ಪರದಾಡುವುದು ಇತ್ಯಾದಿಗಳೇ ಟಿಕ್ಟಾಕ್ನಂಥ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ತನ್ನನ್ನು ತಾನು ತಿಳಿದುಕೊಳ್ಳಲು ಆಗದೇ, ಸಂಕಟದಿಂದ ಹೊರಕ್ಕೆ ಬರಲು ಒದ್ದಾಡುತ್ತಾ, ಒಳಗೊಳಗೇ ಕುಗ್ಗುವವರು ಇಂಥ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂಥ ಸಣ್ಣಸಣ್ಣ ನೆಗೆಟಿವ್ ಖುಷಿಗಳಿಂದಲೇ ಸಮಾಧಾನ ಪಟ್ಟುಕೊಳ್ಳುವ ಪ್ರವೃತ್ತಿ ಇಂಥವರದ್ದು. ಇನ್ನು ಕೆಲವರಿಗೆ ಹೊಸಹೊಸ ಆಪ್, ಗೆಜೆಟ್ಗಳ ಮೇಲೆ ಪ್ರಯೋಗ ಮಾಡುವ ಹುಚ್ಚು. ಇಂಥವರು ‘ಅತಿ ಬುದ್ಧಿವಂತರು’ ಆಗಿರುವ ಕಾರಣ, ಇದೊಂದು ರೀತಿಯಲ್ಲಿ ವ್ಯಸನ ಎಂದು ಅವರಿಗೆ ಎನ್ನಿಸುವುದೇ ಇಲ್ಲ. ಇವರನ್ನು ಗೀಳಿನಿಂದ ಹೊರಕ್ಕೆ ತರುವುದು ಸ್ವಲ್ಪ ಕಷ್ಟವೇ. ತಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎನ್ನುವುದನ್ನು ಅರಿತರೆ ಮಾತ್ರ ಈ ಗೀಳಿನಿಂದ ಹೊರಕ್ಕೆ ಬರಬಹುದು. ಮಾದಕ ದ್ರವ್ಯ ವ್ಯಸನಿಗಳಿಗೆ ಡಿ-ಅಡಿಕ್ಷನ್ ಸೆಂಟರ್ ಇರುವಂತೆ, ಗೆಜೆಟ್ ವ್ಯಸನದಿಂದ ಹೊರಕ್ಕೆ ಬರುವವರಿಗೆ ನಿಮ್ಹಾನ್ಸ್ನಲ್ಲಿ ಶಟ್ (ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ) ಎಂಬ ಕ್ಲಿನಿಕ್ ಆರಂಭಿಸಲಾಗಿದೆ. ಇಂಥ ಗೀಳಿನಿಂದ ಹೊರಬರಬಯಸುವವರು ಇಲ್ಲಿ ಸಂರ್ಪಸಬಹುದು. ಶಟ್ ಕ್ಲಿನಿಕ್ ಸಂಪರ್ಕಕ್ಕೆ: 080- 26685948.
| ಶಾಂತಾ ನಾಗರಾಜ್ ಆಪ್ತ ಸಮಾಲೋಚಕರು
ಪ್ರತಿಕ್ರಿಯಿಸಿ: [email protected]