60 ಅಡಿ ಬಾವಿಗೆ ಬಿದ್ದ ಅಜ್ಜಿ ರಕ್ಷಣೆ

ವಿಜಯಪುರ: ತಿಕೋಟಾ ನೂತನ ತಾಲೂಕು ವ್ಯಾಪ್ತಿಯ ಕಳ್ಳಕವಟಗಿಯಲ್ಲಿ ಅಂದಾಜು 60 ಅಡಿ ಆಳದ ಬಾವಿಗೆ ಆಯತಪ್ಪಿ ಬಿದ್ದ ಅಜ್ಜಿಯನ್ನು ರಕ್ಷಿಸಲಾಗಿದೆ.
ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಶುಕ್ರವಾರ ಬೆಳಗ್ಗೆ 8ರ ಸುಮಾರಿಗೆ ಈ ಘಟನೆ ನಡೆದಿದ್ದು, ತಂಗೆವ್ವಾ ಗದ್ಯಾಳ (85) ಎಂಬುವರೇ ಬಾವಿಗೆ ಬಿದ್ದ ಹಿರಿಯ ಜೀವ. ಇಳಿವಯಸ್ಸಿನಲ್ಲಿ ಅರೆವು ಮರೆವು ಎಂಬಂತೆ ತಂಗೆವ್ವಾ ಮನೆಯಿಂದ ಬಾವಿಯತ್ತ ಯಾತಕ್ಕೆ ಹೋಗಿದ್ದಾರೆಂಬುದು ಗೊತ್ತಿಲ್ಲ. ಸದ್ಯ ಅಜ್ಜಿ ಆರಾಮಾಗಿದ್ದು ಚೇತರಿಸಿಕೊಳ್ಳುತ್ತಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಘಟನೆ ವಿವರ
ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ತಂಗೆವ್ವ ಈರಗೊಂಡ ಗದ್ಯಾಳ ಮನೆಯಲ್ಲಿ ಯಾರೂ ಇಲ್ಲದಾಗ ಬಾವಿ ಹತ್ತಿರ ಹೋಗಿದ್ದಾರೆ. ಏಕಾಏಕಿ ಕಾಲು ಜಾರಿದೆ. ಬಾವಿಯಲ್ಲಿ ದಪ್ಪದೊಂದು ಹಗ್ಗ ಬಿಟ್ಟಿದ್ದು ಅದನ್ನು ಹಿಡಿದುಕೊಂಡಿದ್ದಾರೆ. ಹಗ್ಗ ಜಾರಿ ಮತ್ತಷ್ಟು ಕೆಳಗೆ ಕುಸಿದಿದ್ದಾರೆ. ಬಾವಿಯಲ್ಲಿ 6 ಅಡಿ ನೀರಿರುವ ಕಾರಣಕ್ಕೆ ಪೆಟ್ಟು ಅಷ್ಟಾಗಿ ತಟ್ಟಿಲ್ಲ. ಬಳಿಕ ದಡದಲ್ಲಿರುವ ಪೈಪ್ ಹಿಡಿದು ನಿಂತಿದ್ದಾರೆ. ಸುಮಾರು 1 ಗಂಟೆ ತಂಗೆವ್ವಾ ಬಾವಿಯಲ್ಲೇ ಇದ್ದಾರೆ. ಮನೆಯವರು ಹುಡುಕುತ್ತಾ ಹೋದಾಗ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ.

ಚುರುಕಿನ ಕಾರ್ಯಾಚರಣೆ
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸುತ್ತಮುತ್ತಲಿನ ತೋಟದ ವಸ್ತಿ ನಿವಾಸಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದಾರೆ. 80-10 ಜನ ಸೇರಿ ಹೊರಸು (ಮಲಗಲು ಬಳಸುವ ಹಗ್ಗದ ಪಲ್ಲಂಗ) ಬಳಸಿ ಅದರ ಸಹಾಯದಿಂದ ಅಜ್ಜಿಯನ್ನು ಮೇಲೆತ್ತಿದ್ದಾರೆ. ನಾಲ್ಕಾರು ಜನ ಬಾವಿಗೆ ಇಳಿದು ಹೊರಸಿಗೆ ಹಗ್ಗ ಕಟ್ಟಿ, ಅದರ ಮೇಲೆ ಅಜ್ಜಿಯನ್ನು ಕೂರಿಸಿ ಬಾವಿಯ ಇಕ್ಕೆಲಗಳಿಂದ ಹಗ್ಗವನ್ನು ಮೇಲೆತ್ತುವ ಮೂಲಕ ಅಜ್ಜಿಯನ್ನು ಹೊರತೆಗೆದಿದ್ದು ನಿವಾಸಿಗಳ ಚಾಕಚಕ್ಯತೆಗೆ ಹಿಡಿದ ಕೈಗನ್ನಡಿ. ಯಾವುದೇ ನುರಿತ ತಜ್ಞರ ಸಹಾಯವಿಲ್ಲದೇ ಸುಮಾರು 1 ಗಂಟೆ ಕಾರ್ಯಾಚರಣೆ ನಡೆಸಿ ಅಜ್ಜಿಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಅಜ್ಜಿಯ ಕೈಗೆ ಕೊಂಚ ಗಾಯವಾಗಿದ್ದು ಸುರಕ್ಷಿತವಾಗಿದ್ದಾರೆ.

ಭೀಕರತೆ ಹೆಚ್ಚಿಸುವ ಬಾವಿ
ತಿಕೋಟಾ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ನೀರಿನ ಬವಣೆ ಹೆಚ್ಚಿದ್ದು ರೈತರು ಟ್ಯಾಂಕರ್ ಮೂಲಕ ಬಾವಿ ತುಂಬಿಸುವ ಹುಚ್ಚು ಸಾಹಸಕ್ಕಿಳಿದಿದ್ದಾರೆ. ಶುಕ್ರವಾರ ಬಾವಿಗೆ ಬಿದ್ದಿರುವ ತಂಗೆವ್ವಾಳನ್ನು ಬದುಕಿಸಿದ್ದು ಇದೇ ಟ್ಯಾಂಕರ್ ನೀರು. ಸಮೀಪದ ಖಾಸಗಿ ಬೋರ್‌ವೆಲ್‌ಗಳಿಂದ ರೈತರು ದುಬಾರಿ ಬೆಲೆ ತೆತ್ತು ಟ್ಯಾಂಕರ್ ನೀರು ತರಿಸಿ ಬಾವಿಗೆ ಹಾಕುತ್ತಿದ್ದಾರೆ. ಬಳಿಕ ಆ ನೀರನ್ನು ಬೆಳೆಗೆ ಹಾಗೂ ಕುಡಿಯಲಿಕ್ಕಿ ಬಳಸುತ್ತಿದ್ದಾರೆ. ಸಾಕಷ್ಟು ನೀರಾವರಿ ಯೋಜನೆಗಳಿದ್ದರೂ ಇಲ್ಲಿನ ನಿವಾಸಿಗಳಿಗದು ನಿರುಪಯುಕ್ತ. ಸಮೀಪದ ಹರನಾಳ, ತಿಕೋಟಾಗಳ ಖಾಸಗಿ ಬೋರ್‌ವೆಲ್‌ಗಳಿಗೆ ಸಾವಿರಾರು ರೂ. ಕೊಟ್ಟು ಟ್ಯಾಂಕರ್ ಮೂಲಕ ನೀರು ಖರೀದಿಸುತ್ತಿರುವುದಾಗಿ ರಾಘವೇಂದ್ರ ಗದ್ಯಾಳ ತಿಳಿಸುತ್ತಾರೆ.

ಬಾವಿಗೆ ಟ್ಯಾಂಕರ್ ನೀರು ತುಂಬಿಸಿ ಅಲ್ಲಿಂದ ಎತ್ತಿ ಬೆಳೆಗೆ ಉಣಿಸಲಾಗುತ್ತಿದೆ. ಆಳವಾದ ಬಾವಿಗೆ ಅಜ್ಜಿ ಬಿದ್ದಿದ್ದು ಕಾರಣ ಕೇಳಿದರೆ ನೀರು ನೋಡಲು ಹೋಗಿದ್ದಾಗಿ ಹೇಳುತ್ತಾರೆ. ಸದ್ಯ ಯಾವುದೇ ಅಪಾಯ ಇಲ್ಲ. ಕ್ಷೇಮವಾಗಿದ್ದಾರೆ.
ರಾಘವೇಂದ್ರ ಗದ್ಯಾಳ, ಅಜ್ಜಿಯ ಮೊಮ್ಮಗ

Leave a Reply

Your email address will not be published. Required fields are marked *