ಬೇತಮಂಗಲ(ಕೆಜಿಎಫ್): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಮ್ಮಸಂದ್ರ ಕೋಟಿಲಿಂಗ ದೇವಾಲಯಕ್ಕೆ 1 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, ದೇವಾಲಯ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕರ್ನಾಟಕ ಅಲ್ಲದೆ ಆಂಧ್ರ-ತಮಿಳುನಾಡುಗಳಿಂದ ಸಹಸ್ರಾರು ಭಕ್ತರು ಕೋಟಿಲಿಂಗಕ್ಕೆ ಬರುತ್ತಾರೆ. ಆದ್ದರಿಂದ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವುದರಿಂದ ಅಹಿತಕರ ಘಟನೆ ನಡೆಯದಂತೆ ಮಂಗಳವಾರ (ಡಿ.31) ಸಂಜೆಯಿಂದಲೇ ಕೆಜಿಎಫ್ ಎಸ್ಪಿ ಮೊಹಮದ್ ಸುಜೀತಾ ನೇತೃತ್ವದಲ್ಲಿ ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, 4 ಸಬ್ ಇನ್ಸ್ಪೆಕ್ಟರ್ ಸೇರಿ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.
ನ್ಯಾಯಾಲಯ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಎಂದಿನಂತೆ ಪ್ರವೇಶ ಶುಲ್ಕ ಮಾತ್ರ ಪಡೆಯಲಾಗುತ್ತದೆ. ಭಕ್ತರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಸಂಸ್ಥಾಪಕ ಧರ್ಮಾಧಿಕಾರಿ ಬದುಕಿದ್ದಾಗ ಪ್ರವಾಸಿಗರ ವಾಹನಗಳಿಗೆ ರ್ಪಾಂಗ್ ಶುಲ್ಕ ಪಡೆಯುತ್ತಿರಲಿಲ್ಲ. ಅದರಂತೆಯೇ ಈ ವರ್ಷವೂ ಪ್ರವಾಸಿಗರ ವಾಹನಗಳಿಗೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ದೇವಾಲಯ ಆಡಳಿತಾಧಿಕಾರಿ ಕೆ.ವಿ.ಕುಮಾರಿ ತಿಳಿಸಿದ್ದಾರೆ.