ಮೇಟಿಕುಪ್ಪೆಯಲ್ಲಿ ಹುಲಿ ದಾಳಿಗೆ ಹಸು ಬಲಿ

ಎಚ್.ಡಿ.ಕೋಟೆ: ತಾಲೂಕಿನ ಮೇಟಿಕುಪ್ಪೆಯ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ.
ಸೋಮವಾರ ರೈತ ಬಸವರಾಜು ಅವರಿಗೆ ಸೇರಿದ ಹಸು ಬಲಿಯಾಗಿದೆ. 35 ಸಾವಿರ ರೂ. ಬೆಲೆಬಾಳುವ ಹಸುವನ್ನು ಕಳೆದ ಮೂರು ದಿನಗಳ ಹಿಂದೆ ಸಾಲ ಮಾಡಿ ತರಲಾಗಿತ್ತು, ಹಸುವಿನಿಂದ ಹಾಲು ಕರೆದು ಹೈನುಗಾರಿಕೆಯಿಂದ ಸಾಲ ತೀರಿಸಲು ಕೈಸಾಲ ಮಾಡಿಕೊಂಡಿದ್ದರು. ಹುಲಿ ದಾಳಿಯಿಂದ ಅವರು ಕಂಗಾಲಾಗಿದ್ದಾರೆ.
ಎರಡು ತಿಂಗಳ ಹಿಂದೆ ಜನಾರ್ದನ್ ಎಂಬುವರ 5 ಹಸುಗಳನ್ನು ನಿರಂತರವಾಗಿ ಎರಡು-ಮೂರು ದಿನಗಳಿಗೆ ಒಂದರಂತೆ ಹುಲಿ ಬಲಿ ಪಡೆದಿದೆ. ಹುಲಿಯನ್ನು ಬೋನಿನಲ್ಲಿ ಸೆರೆ ಹಿಡಿದು ಕಾಡಿಗೆ ಬಿಡಲಾಗಿತ್ತು. ಆದರೂ ಉಪಟಳ ನಿಂತಿಲ್ಲ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.