ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರೈತರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ರಾಯಚೂರು-ಲಿಂಗಸೂಗುರು ಮಾರ್ಗದಲ್ಲಿ ವಾಹನ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹಲವು ದಿನಗಳಿಂದ ನಾಲೆ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯದ ಕಾರಣ ಬೆಳೆಗಳು ಒಣಗುತ್ತಿದ್ದು, ಇದರಿಂದ ರೈತರಿಗೆ ನಷ್ಟದ ಭೀತಿ ಎದುರಾಗಿದೆ. ಪ್ರತಿ ವರ್ಷ ಈ ಭಾಗದ ರೈತರು ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪ್ರಸ್ತುತ ಆಡಳಿತದಲ್ಲಿ ಇರುವವರು ಕಳೆದ ವರ್ಷ ನೀರಿಗಾಗಿ ರಸ್ತೆ ಮಧ್ಯೆ ಕುಳಿತು ಹೋರಾಟ ಮಾಡಿ ಇದೀಗ ಕಾರಿನಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ನಾಲೆ ಕೊನೆಯ ಭಾಗಕ್ಕೆ ನೀರು ತಲುಪಿಲ್ಲ ಎಂಬ ಮಾಹಿತಿ ಇದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ವೆಂಕಟೇಶ ಜಾಲಪೂರ ಕ್ಯಾಂಪ್, ಪ್ರಮುಖರಾದ ರಾಜಪ್ಪಗೌಡ ಗಣದಿನ್ನಿ, ಮಲ್ಲಪ್ಪ ಸಾಹುಕಾರ್ ಅರಕೇರಿ, ರಾಮಯ್ಯ ಬೈನೇರ್, ರಾಘವೇಂದ್ರ ಖಾಜನಗೌಡ, ಎಚ್.ಕೆ.ಅಮರೇಶ, ನಾಗರಾಜ, ಹನುಮಂತ ಆಟೋ ಇತರರಿದ್ದರು.
ಬಂದ್ ಎಚ್ಚರಿಕೆ: ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಭಾಗಕ್ಕೆ ಗುರುವಾರ ಸಮರ್ಪಕವಾಗಿ ನೀರು ಬರದಿದ್ದರೆ ಶುಕ್ರವಾರ ಸಿರವಾರ ಬಂದ್ ಗೆ ಕರೆ ನೀಡಲಾಗುವುದು ಎಂದು ಬಿಜೆಪಿ ಮಾನ್ವಿ ಮಂಡಲ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಎಚ್ಚರಿಸಿದರು.