ಕರಾವಳಿಯಲ್ಲಿ ಬಿರುಗಾಳಿ, ಸಿಡಿಲು ಸಾಧ್ಯತೆ

ಕಾಸರಗೋಡು: ಕೇರಳದ ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಬಿರುಸಿನ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಈ ದಿನಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕಿಳಿಯಬಾರದು. ಈಗಾಗಲೇ ಸಮುದ್ರಕ್ಕೆ ತೆರಳಿದ ಮಂದಿ ತಕ್ಷಣ ವಾಪಸಾಗುವಂತೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಮುನ್ಸೂಚನೆ ನೀಡಿದ್ದಾರೆ.
ಮೀನುಗಾರಿಕಾ ವಲಯಗಳ ಆರಾಧನಾಲಯಗಳಲ್ಲಿ, ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಈ ಸಂಬಂಧ ಎಚ್ಚರಿಕೆ ಘೋಷಣೆ ಮೊಳಗಿಸುವಂತೆ ತಿಳಿಸಲಾಗಿದೆ. ಈ ಅವಧಿಯಲ್ಲಿ 1.5 ಮೀಟರ್‌ನಿಂದ 2.2 ಮೀಟರ್‌ವರೆಗಿನ ಎತ್ತರದಲ್ಲಿ ತೆರೆ ಅಪ್ಪಳಿಸುವುದರ ಜತೆಗೆ ಸಮುದ್ರ ಕೊರೆತ ಭೀತಿಯಿದೆ. ಹಿಂದು ಮಹಾಸಾಗರದ ಭೂಮಧ್ಯೆ ರೇಖೆ ಪ್ರದೇಶದಲ್ಲಿ ಪೂರ್ವ, ಪಶ್ಚಿಮ ಬಂಗಾಳ ಒಳಸಮುದ್ರ, ಶ್ರೀಲಂಕಾದ ತೆಂಕಣ ಮತ್ತು ಪೂರ್ವದಲ್ಲಿ 25ರಷ್ಟು ಶೂನ್ಯ ಒತ್ತಡ ರಚನೆಗೊಳ್ಳಲಿದ್ದು, ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಏ.26ರಂದು ಗಾಳಿಯ ವೇಗ ಗಂಟೆಗೆ 40ರಿಂದ 50 ಕಿ.ಮೀ ವರೆಗೆ ಹೆಚ್ಚಳಗೊಳ್ಳುವ ಸಾಧ್ಯತೆಯಿದ್ದು, ಇದು ಏ.27ರಂದು ಗಂಟೆಗೆ 60ರಿಂದ 70 ಕಿ.ಮೀ ಆಗಿ ತಲೆದೋರುವ ಸಾಧ್ಯತೆಯಿದೆ. ಏ.28ರಂದು ರಾಜ್ಯ ಕರಾವಳಿಯಲ್ಲಿ ಗಂಟೆಗೆ 80ರಿಂದ 90 ಕಿ.ಮೀ, ತಮಿಳುನಾಡು ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಮೀನುಗಾರರು ಏ.27ರಿಂದ ಹಿಂದು ಮಹಾಸಾಗರದ ಭೂಮಧ್ಯೆ ರೇಖೆ ಪ್ರದೇಶ, ಅದರ ಬಳಿ ಪೂರ್ವ-ಪಶ್ಚಿಮ ಬಂಗಾಳ ಒಳಕಡಲು, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳದಿರುವಂತೆ ಸೂಚನೆ ನೀಡಲಾಗಿದೆ. ಆಳಸಮುದ್ರಕ್ಕೆ ಈಗಾಗಲೇ ತೆರಳಿದವರು ಏ.27ರಂದು ಮಧ್ಯರಾತ್ರಿ 12 ಗಂಟೆಗೆ ಸಮೀಪದ ಯಾವುದಾದರೂ ದಡ ಸೇರುವಂತೆ ಸಲಹೆ ನೀಡಲಾಗಿದೆ.

ಸಿಡಿಲು, ಮಿಂಚು- ಎಚ್ಚರಿಕೆ: ರಾಜ್ಯದಲ್ಲಿ ಯಾವುದೇ ದಿನ ಮಧ್ಯಾಹ್ನ 2ರಿಂದ ರಾತ್ರಿ 8ರ ಅವಧಿಯಲ್ಲಿ ಭಾರಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿವಾರಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಈ ಅವಧಿಯಲ್ಲಿ ಆಘಾತದಿಂದ ಪಾರಾಗಲು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮಂಗಳೂರು, ಉಡುಪಿ ಮೀನುಗಾರರಿಗೆ ಎಚ್ಚರಿಕೆ: ಮಂಗಳೂರು/ಉಡುಪಿ: ಲಕ್ಷದ್ವೀಪ, ಕೇರಳ ಕರಾವಳಿ ಸಮುದ್ರದಲ್ಲಿ ಏ.29ರವರೆಗೆ ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದು, ಆ ಭಾಗಕ್ಕೆ ಮೀನುಗಾರಿಕೆಗೆ ತೆರಳಿರುವ ಕರ್ನಾಟಕ ಕರಾವಳಿಯ ಮೀನುಗಾರರೂ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಕರಾವಳಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರು ಏ.28ಕ್ಕೆ ಮೊದಲು ಹಿಂತಿರುಗುವಂತೆ ಸೂಚನೆ ರವಾನಿಸಿದೆ.

ಸದ್ಯ ಕರ್ನಾಟಕ ಕರಾವಳಿಯಲ್ಲಿ ಮಳೆ ಬರುವ ಲಕ್ಷಣಗಳಿಲ್ಲ. ಹಿಂದು ಮಹಾಸಾಗರ, ಆಗ್ನೇಯ ಬಂಗಾಳಕೊಲ್ಲಿಯಲ್ಲಿ ನಿಮ್ನೊತ್ತಡ ಪ್ರದೇಶ ನಿರ್ಮಾಣವಾಗಿರುವುದರಿಂದ, ಇದು ಸೈಕ್ಲೋನ್ ಆಗಿ ಪರಿವರ್ತನೆಗೊಂಡು ಏ.28ರ ಬಳಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಕರ್ನಾಟಕ ಕರಾವಳಿಯಲ್ಲಿ ಯಾವುದೇ ಸಮಸ್ಯೆಯಾಗದು. ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಲಿದೆ. ಕೇರಳ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ಸಿಡಿಲು-ಮಿಂಚು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಉಡುಪಿ ಜಿಲ್ಲೆಯಲ್ಲಿ ಏ.27 ಮತ್ತು 28ಕ್ಕೆ ಮೋಡ ಕವಿದ ವಾತಾವರಣ ಇರಲಿದ್ದು, 29 ಮತ್ತು 30ರಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಬ್ರಹ್ಮಾವರ ಕೃಷಿ ಮತ್ತು ವಿಜ್ಞಾನ ಕೇಂದ್ರ ತಾಂತ್ರಿಕ ಅಧಿಕಾರಿ ರಂಜಿತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಗುರುವಾರ 36.6 ಡಿ.ಸೆ. ಗರಿಷ್ಠ ಮತ್ತು 25.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.

Leave a Reply

Your email address will not be published. Required fields are marked *