ಮನೆ ತಲುಪದ ನೀರು

>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಎರಡು ದಿನಗಳ ಬ್ರೇಕ್ ಬಳಿಕ ತುಂಬೆ ಅಣೆಕಟ್ಟಿನಿಂದ ಶನಿವಾರ ಬೆಳಗ್ಗೆ ನೀರಿನ ಪಂಪಿಂಗ್ ಪುನಾರಂಭವಾಗಿದೆ. ಆದರೆ, ಖಾಲಿ ಪೈಪ್‌ಲೈನ್ ತುಂಬಿಕೊಂಡು ಮನೆಮನೆಗಳಿಗೆ ತಲಪುವಾಗ ಮತ್ತೂ ಒಂದು ದಿನ ತಡವಾಗಿದೆ.
ಪೂರೈಕೆಯಾದ ನೀರಿನ ಪ್ರಮಾಣ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ನೆಲದಡಿಯಲ್ಲಿ ಬೃಹತ್ ಟ್ಯಾಂಕಿಗಳನ್ನು ನಿರ್ಮಿಸಿಕೊಂಡವರು ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರೆ, ಎತ್ತರ ಪ್ರದೇಶದಲ್ಲಷ್ಟೇ ಅಲ್ಲ ತಗ್ಗು ಪ್ರದೇಶಗಳಲ್ಲಿ ಇರುವವರು ಹಾಗೂ ವೈಜ್ಞಾನಿಕ ರೀತಿ ಟ್ಯಾಂಕಿ ನಿರ್ಮಿಸಿಕೊಂಡಿರದ ಜನರು ನೀರಿನ ಸಮಸ್ಯೆಯಿಂದ ಇನ್ನೂ ತತ್ತರಿಸುತ್ತಿದ್ದಾರೆ.

ಹಳೇ ಕಾಲದ ವ್ಯವಸ್ಥೆ: ನಗರದಲ್ಲಿರುವ ಹಳೇ ಕಾಲದ ವಿತರಣ ವ್ಯವಸ್ಥೆಯಲ್ಲಿರುವ ದೋಷ ಹಾಗೂ ಭೌಗೋಳಿಕವಾಗಿ ಇರುವ ಹೆಚ್ಚಿನ ವ್ಯತ್ಯಾಸಗಳಿಂದ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ತುಂಬೆ ನೂತನ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಶನಿಂಗ್ ಆರಂಭಿಸಲಾಗಿತ್ತು. ನಾಲ್ಕು ದಿನ ನೀರು ಸರಬರಾಜು ಮಾಡಿ ಎರಡು ದಿನ ನೀರು ಸ್ಥಗಿತಗೊಳಿಸುವುದು ರೇಷನಿಂಗ್ ನಿಯಮವಾಗಿದೆ. ಏ.13ರಿಂದ 17ರ ವರೆಗೆ ನಗರದಲ್ಲಿ ನೀರು ಸರಬರಾಜು ಮಾಡಲಾಗಿದೆ. ರೇಶನಿಂಗ್ ಪ್ರಕಾರ ಏ.18 ಮತ್ತು 19ರಂದು ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಏ.19 ರಂದು ಮತ್ತೆ ನೀರಿನ ವಿತರಣೆ ಆರಂಭಿಸಬೇಕಾಗಿದ್ದರೂ ಅದು ಸಾಧ್ಯವಾದದ್ದು 20 ರಂದು.

ಫ್ಲಾಟ್‌ಗಳಿಗಿದೆ, ಇತರರಿಗಿಲ್ಲ:  ಪಾಂಡೇಶ್ವರ, ಮಂಗಳಾದೇವಿ ಮುಖ್ಯರಸ್ತೆ ಇಕ್ಕೆಲ, ಹೊಗೆಬಜಾರ್, ಬೋಳಾರ, ಮಾರ್ನೆಮಿಕಟ್ಟೆ, ಸುಭಾಷ್ ನಗರ, ಪಡೀಲ್ ಸ್ಥಾವರದಿಂದ ನೀರು ವಿತರಣೆಯಾಗುವ ಪ್ರದೇಶಗಳು, ಶಿರ್ಲಪಡ್ಪು, ಬೋಳೂರು, ಉರ್ವಸ್ಟೋರ್ ಮಾರುಕಟ್ಟೆ ಹಿಂಭಾಗ, ಜಾರಂದಾಯ ದೈವಸ್ಥಾನ ಸಹಿತ ಅನೇಕ ಪ್ರದೇಶಗಳಿಗೆ ಸರಿಯಾದ ರೀತಿಯಲ್ಲಿ ನೀರು ಪೂರೈಕೆಯಾಗಿಲ್ಲ ಎನ್ನುವ ಕುರಿತು ದೂರುಗಳು ಬಂದಿವೆ. ಅನೇಕ ಪ್ರದೇಶಗಳಲ್ಲಿ ಅತ್ಯಂತ ಸಪುರವಾಗಿ ನೀರು ಬಂದಿದೆ. ನಗರದ ಬಹುತೇಕ ಫ್ಲಾೃಟ್‌ಗಳು ಎಂಟು ಲಕ್ಷ ಲೀಟರ್ ತನಕ ನೀರು ಸಂಗ್ರಹಿಸಿಡುವ ಬೃಹತ್ ಟ್ಯಾಂಕ್ ನೆಲದಡಿಯಲ್ಲಿ ಹೊಂದಿದ್ದು, ಮಧ್ಯಮ ಹಾಗೂ ಸಾಮಾನ್ಯ ವರ್ಗದ ಜನರ ಮನೆಗಳಿಗೆ ನೀರು ತಲುಪುವುದು ಕಷ್ಟವಾಗಿದೆ. ಜನಸಾಮಾನ್ಯರು ಹತ್ತಿರದ ಬಂಧುಗಳನ್ನು ಕೂಡ ಒಂದೆರಡು ದಿನ ಮನೆಗಳಲ್ಲಿ ಉಳಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಕೆಲ ಮನೆಗಳಲ್ಲಿ ಅಡುಗೆ ಮಾಡದೆ ಹೊಟೇಲ್‌ನಲ್ಲಿಯೇ ತಿಂದು ಮನೆಗೆ ಬರುವ ಪರಿಸ್ಥಿತಿ ಇದೆ.

ಅಧಿಕಾರಿಗಳ ಸಮರ್ಥನೆ: ಶೇ.90 ಭಾಗ ನೀರು ಪೂರೈಕೆಯಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಕೆಲ ಭಾಗದ ಮನೆಗಳಿಗಷ್ಟೇ ಸ್ವಲ್ಪ ಮಟ್ಟಿನ ಸಮಸ್ಯೆಯಾಗಿದೆ ಎನ್ನುವುದು ಅಧಿಕಾರಿ ವರ್ಗದ ಸಮರ್ಥನೆ. ಆದರೆ, ಪಾಲಿಕೆ ವ್ಯಾಪ್ತಿಯ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ನಗರ ನಡುವಿನ ಕುದ್ಮಲ್ ರಂಗರಾವ್ ಪುರಭವನ ಮುಂಭಾಗದ ಪೊಲೀಸ್ ಲೇನ್‌ನಲ್ಲಿಯೇ ಕಳೆದ ನಾಲ್ಕು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ.

Leave a Reply

Your email address will not be published. Required fields are marked *