ಕೃಷಿಗೆ ತುಂಬೆ ಡ್ಯಾಂ ನೀರು ನಿರ್ಬಂಧ

<<ಒಂದೆರಡು ದಿನದಲ್ಲಿ ಜಿಲ್ಲಾಧಿಕಾರಿ ಆದೇಶ * ಮಳೆಯಾಗದಿದ್ದರೆ ಮೇ ತಿಂಗಳಿಂದ ನಗರಕ್ಕೆ ನೀರು ರೇಷನಿಂಗ್>>

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಾರ್ಚ್‌ನ ಬಿಸಿಲಝಳ ಏರಿಕೆಯಾಗಿ ತುಂಬೆಯಲ್ಲಿ ನೀರು ಕ್ಷಿಪ್ರವಾಗಿ ಆವಿಯಾಗುತ್ತಿರುವ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕಾಯ್ದಿಡಲು ಕೃಷಿಕರಿಗೆ ನೀರು ಎತ್ತುವುದಕ್ಕೆ ನಿರ್ಬಂಧ ಹೇರಲು ಜಿಲ್ಲಾಡಳಿತ ತೀರ್ಮಾನಿಸಿದೆ.
ತುಂಬೆ ಅಣೆಕಟ್ಟೆಯ ಮೇಲ್ಭಾಗದಲ್ಲಿ ನೀರು ಬಳಕೆ ಮಾಡುವ ಕೃಷಿಕರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅವರ ವಿದ್ಯುತ್ ಸಂಪರ್ಕ ಕಡಿತ ಮಾಡುವುದಕ್ಕೆ ಮೆಸ್ಕಾಂಗೆ ಸೂಚನೆ ಸೋಮವಾರವೇ ಹೋಗುವ ಸಾಧ್ಯತೆ ಇದೆ.
ಪ್ರತಿವರ್ಷವೂ ಬೇಸಿಗೆಯ ಹೊತ್ತಿನಲ್ಲಿ ಜಿಲ್ಲಾಡಳಿತ ತುಂಬೆ ಡ್ಯಾಂ ಬಳಿಯ ಕೃಷಿಕರ ವಿರುದ್ಧ ಈ ಕ್ರಮಕ್ಕೆ ಮುಂದಾಗುತ್ತದೆ. ಈ ವರ್ಷ ಇದುವರೆಗೆ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಒಳಹರಿವು ಬತ್ತಿಹೋಗಿದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತದೆ, ಕಳೆದ ವರ್ಷವೂ ಆಗಿತ್ತು. ಆದರೆ ಈ ವರ್ಷ ಮಾರ್ಚ್ ಮಳೆಯಾಗದಿರುವುದು ಸಮಸ್ಯೆಗೆ ಕಾರಣ.

ಎಎಂಆರ್‌ನಿಂದ ನೀರು: ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಇದೇ ಮೊದಲ ಬಾರಿಗೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿದೆ.
ಐದು ಮೀಟರ್‌ಗೆ ಇಳಿದಿದ್ದೆ ತುಂಬೆ ಡ್ಯಾಮ್ ನೀರು ಸಂಗ್ರಹ ಎಎಂಆರ್‌ನಿಂದ ಬಂದ ನೀರು ಸೇರಿಕೊಂಡ ಹಿನ್ನೆಲೆಯಲ್ಲಿ 6 ಮೀಟರ್‌ಗೆ ಏರಿಕೆಯಾಗಿದೆ. ಇದರಿಂದ 40 ದಿನಗಳಿಗೆ ಆಗುವಷ್ಟು ನೀರು ಸಂಗ್ರಹ ಇದೆ ಎಂದು ಲೆಕ್ಕಾಚಾರ ಹಾಕಬಹುದಾದರೂ ನೀರು ಆವಿಯಾಗುವ ಪ್ರಮಾಣ ಬಿರುಬೇಸಿಗೆಯಲ್ಲಿ ಹೆಚ್ಚು. ಹಾಗಾಗಿ ಮುಂದೆಯೂ ಎಎಆಂಆರ್ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿಯವರ ಆದೇಶದಂತೆ ಮಾರ್ಚ್ 21ರಂದು ಶಂಭೂರು ಡ್ಯಾಂನಿಂದ ನೀರು ಬಿಡುಗಡೆ ಮಾಡಲಾಗಿದ್ದು, ತುಂಬೆ ಅಣೆಕಟ್ಟು ತುಂಬಿದ ಹಿನ್ನೆಲೆಯಲ್ಲಿ 22ರಂದು ರಾತ್ರಿ 8ಕ್ಕೆ ಸ್ಥಗಿತ ಮಾಡಲಾಗಿತ್ತು.

ಎಂಆರ್‌ಪಿಎಲ್ ಷಟ್‌ಡೌನ್:  ಏಪ್ರಿಲ್ 15ರಿಂದ ಎಂಆರ್‌ಪಿಎಲ್ ವಾರ್ಷಿಕ ಷಟ್‌ಡೌನ್ ಮಾಡಲಿದ್ದು, ಇದರಿಂದಾಗಿ ಅವರ ನೀರಿನ ಬೇಡಿಕೆ ಅರ್ಧದಷ್ಟು ಕಡಿಮೆಯಾಗಲಿದೆ. ಸದ್ಯ ಪ್ರತಿದಿನ ಎಂಆರ್‌ಪಿಎಲ್-ಎಸ್‌ಇಝಡ್‌ಗೆ ನೇತ್ರಾವತಿಯಿಂದ 30-40 ಎಂಎಲ್‌ಡಿಯಷ್ಟು ನೀರು ಪೂರೈಕೆಯಾಗುತ್ತದೆ. ಏಪ್ರಿಲ್ 15ರಿಂದ ಇದು ಅರ್ಧಕ್ಕೆ ಇಳಿಯಲಿದೆ.

ಸದ್ಯಕ್ಕಿಲ್ಲ ನೀರು ಪೂರೈಕೆ ಕಡಿತ:  ಸದ್ಯಕ್ಕಂತೂ ಮಂಗಳೂರು ನಗರಕ್ಕೆ ನಿರಂತರ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ. ಎಎಂಆರ್‌ನಿಂದ ನೀರು ಹರಿಸಿದ ಕಾರಣ 6 ಮೀಟರ್‌ಗೆ ಮತ್ತೆ ನೀರು ತುಂಬಿದ್ದು ಇನ್ನೂ 10-15 ದಿನಕ್ಕೆ ಮತ್ತೆ ನೀರು ಹರಿಸಬೇಕಿಲ್ಲ, ಒಮ್ಮೆ ತುಂಬಿದರೆ ಪೂರ್ತಿ ನೀರು 40 ದಿನಕ್ಕೆ ಸಾಕಾಗಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಏನಿದ್ದರೂ ಏಪ್ರಿಲ್ ಅಂತ್ಯದ ವರೆಗೆ ನೀರು ನಿಯಂತ್ರಣ ಮಾಡಬೇಕಾಗಿಲ್ಲ. ಅಷ್ಟರವರೆಗೂ ಮಳೆಯಾಗದಿದ್ದರೆ, ನೀರಿನ ಸಮಸ್ಯೆಯಾದರೆ ಮೇ ತಿಂಗಳಿಂದ ನೀರು ಪೂರೈಕೆ ಕಡಿತ ಮಾಡಬೇಕಾಗಬಹುದು.

ಮಾರ್ಚ್ ಮಳೆಯಾಗದೆ ನೀರು ಒಳಹರಿವು ನಿಂತಿದೆ, ಆವಿಯಾಗಿ ನೀರು ಸಾಕಷ್ಟು ಪ್ರಮಾಣದಲ್ಲಿ ಹೋಗುತ್ತಿದೆ, ತುಂಬೆ ಡ್ಯಾಂನಿಂದ ಕೃಷಿಕರಿಗೆ ನೀರು ಬಳಕೆಗೆ ನಿಷೇಧ ಹಾಕಲಿದ್ದೇವೆ, ಸದ್ಯಕ್ಕೆ ನೀರು ರೇಷನಿಂಗ್ ಮಾಡುವುದಿಲ್ಲ, ಏನಿದ್ದರೂ ಮೇ ತಿಂಗಳಲ್ಲಿ ದಿನ ಬಿಟ್ಟು ದಿನ ನೀರು ಕೊಡುವ ಬಗ್ಗೆ ಯೋಚಿಸುತ್ತೇವೆ. ಮಳೆ ಬಂದರೆ ನೀರಿಗೆ ಯಾವುದೇ ಸಮಸ್ಯೆಯಾಗದು.
-ಶಶಿಕಾಂತ್ ಸೆಂಥಿಲ್, ದ.ಕ ಜಿಲ್ಲಾಧಿಕಾರಿ