ಲಾಸ್ ಏಂಜಲಿಸ್: ಎರಡು ವಾರಕ್ಕೂ ಹೆಚ್ಚು ಕಾಲ ಗುಹೆಯೊಳಗೆ ಸಿಲುಕಿದ್ದ ‘ವೈಲ್ಡ್ ಬೋರ್ ’ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಒಬ್ಬ ತರಬೇತುದಾರನನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರಕ್ಕೆ ಕರೆ ತಂದ ರೋಚಕ ಕಾರ್ಯಾಚರಣೆಯನ್ನು ಆಧಾರವಾಗಿಟ್ಟುಕೊಂಡು ಸಂಪೂರ್ಣ ಘಟನಾವಳಿಯನ್ನು ಆಧರಿಸಿ ಚಿತ್ರ ನಿರ್ಮಿಸಲು ಹಾಲಿವುಡ್ ನಿರ್ಮಾಪಕರು ಸಿದ್ಧತೆ ನಡೆಸುತ್ತಿದ್ದಾರೆ.
ಹೌದು ನೈಜ ಘಟನೆಗಳನ್ನು ಆಧರಿಸಿ ಚಿತ್ರ ನಿರ್ಮಿಸುವುದರಲ್ಲಿ ಪಳಗಿರುವ ಕೆಲವು ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಥಾಯ್ಲೆಂಡ್ ಗುಹೆಯೊಳಗೆ ಸಿಲುಕಿದ್ದವರ ರಕ್ಷಣೆಯ ಕಥೆಯನ್ನು ತೆರೆಯ ಮೇಲೆ ತರಲು ಈಗಾಗಲೇ ಯೋಜನೆ ರೂಪಿಸಿದ್ದಾರೆ. ಕೌಟುಂಬಿಕ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿರುವ Pure Flix ಎಂಬ ನಿರ್ಮಾಣ ಸಂಸ್ಥೆ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದ್ದವರಿಂದ ಮಾಹಿತಿ ಕಲೆ ಹಾಕುತ್ತಿದೆ.
ಈ ಘಟನೆ ನನ್ನನ್ನು ಸಂಪೂರ್ಣವಾಗಿ ಆವರಿಸಿದೆ. ಜತೆಗೆ ರಕ್ಷಣಾ ಕಾರ್ಯಾಚರಣೆ ವೇಳೆ ವೃತಪಟ್ಟ ಥಾಯ್ ನೇವಿ ಸೀಲ್ನ ಡೈವರ್ನೊಂದಿಗೆ ನನ್ನ ಪತ್ನಿ ಆಡಿ ಬೆಳೆದಿದ್ದಳು. ಹಾಗಾಗಿ ಈ ಘಟನೆಯ ಕುರಿತು ಚಿತ್ರ ನಿರ್ಮಿಸುವ ಕುರಿತು ಚಿಂತಿಸುತ್ತಿದ್ದೇನೆ ಎಂದು ಪ್ರಸ್ತುತ ಥಾಯ್ಲೆಂಡ್ನಲ್ಲಿ ವಾಸಿಸುತ್ತಿರುವ Pure Flix ನಿರ್ಮಾಣ ಕಂಪನಿಯ ಸಹ ಸಂಸ್ಥಾಪಕ ಮೈಕಲ್ ಸ್ಕಾಟ್ ತಿಳಿಸಿದ್ದಾರೆ.
2010ರಲ್ಲಿ ಚಿಲಿಯ ಗಣಿಯೊಂದರಲ್ಲಿ 33 ಕಾರ್ಮಿಕರು ಸಿಲುಕಿದ್ದರು. ಅವರನ್ನು 69 ದಿನಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ರಕ್ಷಿಸಲಾಗಿತ್ತು. ಈ ಘಟನೆಯನ್ನು ಆಧರಿಸಿ 2015ರಲ್ಲಿ ಹಾಲಿವುಡ್ನಲ್ಲಿ The 33 ಎಂಬ ಚಿತ್ರ ನಿರ್ಮಾಣವಾಗಿತ್ತು. (ಏಜೆನ್ಸೀಸ್)