ಶಾಲಾ ಬಸ್​ ಸಿಬ್ಬಂದಿಯಿಂದಲೇ ಮೂರೂವರೆ ವರ್ಷದ ಬಾಲಕಿ ಮೇಲೆ ನಿರಂತರ ಅತ್ಯಾಚಾರ

ನೈನಿತಾಲ್​: ಮೂರೂವರೆ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಶಾಲಾ ಬಸ್​ನ ಚಾಲಕ ಮತ್ತು ಕಂಡಕ್ಟರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ನೈನಿತಾಲ್​ ಜಿಲ್ಲೆಯ ಕಥ್​ಹೋದಾಮ್​ನಲ್ಲಿ ಈ ಘಟನೆ ನಡೆದಿದ್ದು ಆರೋಪಿಗಳಾದ ರತನ್​ ಸಿಂಗ್​ ಮತ್ತು ಪ್ರದೀಪ್​ ಜೋಶಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್​ 354 ಮತ್ತು ಪೊಕ್ಸೊ ಕಾಯ್ದೆಯಲ್ಲಿ ದೂರು ದಾಖಲಿಸಲಾಗಿದೆ.

ಸೆ.17ರಂದು ಬಾಲಕಿಗೆ ತನ್ನ ಖಾಸಗಿ ಭಾಗದಲ್ಲಿ ನೋವು ಕಾಣಿಸಿಕೊಂಡಾಗ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾಳೆ. ಪಾಲಕರು ಮಗುವನ್ನು ವೈದ್ಯರ ಬಳಿ ಕರೆದುಕಂಡು ಹೋಗಿದ್ದಾರೆ. ಆಗ ಮಗಳ ಮೇಲೆ ಅತ್ಯಾಚಾರವಾಗಿರುವುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಅನೇಕ ದಿನಗಳಿಂದ ಬಾಲಕಿ ಮೇಲೆ ಆರೋಪಿಗಳು ಈ ಪೈಶಾಚಿಕ ಕೃತ್ಯ ಎಸಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಎಂದು ಹಲ್ದ್​ವಾನಿ ಎಸ್​ಪಿ ಅಮಿತ್​ ಶ್ರೀವಾಸ್ತವ ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಕಾಪ್ಟನ್​ ಅನಿಲ್​ ಗುಪ್ತ ಅವರಿಗೆ ಈ ವಿಷಯ ತಿಳಿದ ನಂತರ ಶಾಲೆಯಲ್ಲಿ ವಿಚಾರಣೆ ನಡೆಸಿ ನಂತರ ಶಾಲಾ ಬಸ್​ನ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು ಮಹಿಳಾ ಸಬ್​ ಇನ್​ಸ್ಪೆಕ್ಟರ್​ ಲತಾ ಬಿಶ್ತ್​ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಅವರು ಮಗುವಿನ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದರು.

ಇತ್ತೀಚೆಗಷ್ಟೆ ಡೆಹ್ರಾಡೂನ್​ ವಸತಿ ಶಾಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಹಪಾಠಿಗಳೇ ಅತ್ಯಾಚಾರ ಮಾಡಿದ್ದು,ಪಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. (ಏಜೆನ್ಸೀಸ್​)