ಮೂವರು ಕಳ್ಳರ ಬಂಧನ

ಮೈಸೂರು: ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ಪದಾರ್ಥ, ವಿದೇಶಿ ನೋಟುಗಳು ಹಾಗೂ ಟಿವಿ ವಶಪಡಿಸಿಕೊಂಡಿದ್ದಾರೆ.

ಶಾಂತಿನಗರದ ಶಾಬಾಜ್ ಖುರೇಶಿ ಅ.ಶಾಬಾಜ್(23), ಉದಯಗಿರಿ ಕೆಎಚ್‌ಬಿ ಕಾಲನಿಯ ಮಹ್ಮದ್ ಅಜರ್ ಅ.ಅಜರ್(23) ಹಾಗೂ ಕಲ್ಯಾಣಗಿರಿಯ ಕೆ.ಎನ್.ಪುರದ ಸೈಯದ್ ಜಾವೀದ್ ಅ. ಜಾವೀದ್ (23) ಬಂಧಿತ ಆರೋಪಿಗಳು.

ನಗರದ ಪುಲಿಕೇಶಿ ರಸ್ತೆಯ ಬಳಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಲ್ಯಾಣಗಿರಿಯ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಘಟಕದ ಪ್ರಭಾರ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಆರ್.ಜಗದೀಶ್, ಎಎಸ್‌ಐ ಚಂದ್ರೇಗೌಡ, ಅಲೆಕ್ಸಾಂಡರ್, ಸಿಬ್ಬಂದಿ ಭಾಗವಹಿಸಿದ್ದರು.