ದ.ಕ. ಮೂವರಿಗೆ ಶಂಕಿತ ಮಂಗನಕಾಯಿಲೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಮಂಗನ ಕಾಯಿಲೆ ಸಂಬಂಧಿಸಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಲೆನಾಡಿನ ತಪ್ಪಲಿನಲ್ಲಿರುವ ಜಿಲ್ಲೆಯ ಹಳ್ಳಿಗಳಲ್ಲಿ ಇದಕ್ಕಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಮೂವರು ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎ.ಜೆ. ಆಸ್ಪತ್ರೆ, ಾದರ್ ಮುಲ್ಲರ್ ಮತ್ತು ವೆನ್ಲಾಕ್‌ನಲ್ಲಿ ತಲಾ ಒಬ್ಬರು ಶಂಕಿತ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದು ಮಂಗನ ಕಾಯಿಲೆ ಎನ್ನುವುದು ಇನ್ನೂ ದೃಢ ಪಟ್ಟಿಲ್ಲ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಮಂಗನ ಕಾಯಿಲೆ ಶಂಕಿತ ರೋಗಿಗಳು ಚಿಕಿತ್ಸೆ ಪಡೆದರೆ ಇಲಾಖೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಮಂಗನ ಕಾಯಿಲೆ ಉಣ್ಣಿ (ಉಣುಗು) ಹುಳುಗಳಿಂದ ಹರಡುವುದರಿಂದ ಕಾಡಂಚಿನ ಮಂದಿ, ಕಾಡಿಗೆ ಕೆಲಸಕ್ಕಾಗಿ ತೆರಳುವವರು ಜಾಗೃತಿ ವಹಿಸಬೇಕು. ಎಮ್ಮೆ, ಆಕಳು ಮುಂತಾದ ಸಾಕುಪ್ರಾಣಿಗಳನ್ನು ಕಾಡಿಗೆ ಬಿಡುವುದನ್ನು, ಜೇನು ಮತ್ತು ಇನ್ನಿತರ ಕಾಡುತ್ಪತ್ತಿಗಳನ್ನು ಸಂಗ್ರಹಿಸುವುದನ್ನು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಗಿತಗೊಳಿಸಬೇಕು ಎಂದು ಹೇಳಿದರು.

ಕಾಡಿಗೆ ಹೋಗುವುದಾದರೆ ಉಣ್ಣಿ ನಿರೋಧಕ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು. ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನಲ್ಲಿ ಸಾಬೂನು ಹಚ್ಚಿ ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕು. ಮಂಗನ ಕಾಯಿಲೆ ದೃಢ ಪಟ್ಟ ಪ್ರದೇಶಗಳ ನಿವಾಸಿಗಳು ಕೆಎ್ಡಿ ನಿರೋಧಕ ಲಸಿಕೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಆರೋಗ್ಯ ಅಧಿಕಾರಿಗಳಾದ ಡಾ.ಪ್ರವೀಣ್‌ಕುಮಾರ್, ಡಾ.ಅರುಣ್‌ಕುಮಾರ್, ಡಾ. ನವೀನ್, ಡಾ.ಅಶೋಕ್‌ಕುಮಾರ್ ರೈ, ಡಾ. ಕಲಾಮಧು ಸುದ್ದಿಗೋಷ್ಠಿಯಲ್ಲಿದ್ದರು.

ಮಂಗ ಸತ್ತಿದ್ದರೆ ತಿಳಿಸಿ: ಕಾಡಿನಲ್ಲಿ ಮಂಗಗಳು ಸತ್ತಿರುವುದು ಪತ್ತೆಯಾದರೆ ತಕ್ಷಣ ಅರಣ್ಯ, ಪಶು ಸಂಗೋಪನೆ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಸತ್ತ ಮಂಗನಲ್ಲಿ ಕಾಯಿಲೆಯ ವೈರಸ್ ಇದೆಯೇ ಎಂದು ಪತ್ತೆ ಹಚ್ಚಬಹುದು. ಮಂಗದ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲು ಅನುಕೂಲವಾಗುತ್ತದೆ. ಮಂಗ ಸತ್ತ 50 ಮೀ. ಪರಿಧಿಯಲ್ಲಿ ಮೆಲಾಥಿಯನ್ ಎಂಬ ಕೀಟನಾಶಕ ಸಿಂಪಡಿಸಿ ಉಣ್ಣಿಗಳನ್ನು ನಾಶ ಪಡಿಸಬಹುದು ಎಂದರು.

ರೋಗ ಲಕ್ಷಣಗಳು: 8-10 ದಿನ ಬಿಡದೆ ಕಾಡುವ ವಿಪರೀತ ಜ್ವರ, ತಲೆನೋವು, ಕೈಕಾಲು ನೋವು, ಸೊಂಟ ನೋವು, ವಿಪರೀತ ನಿಶ್ಯಕ್ತಿ, ಅತಿಯಾದ ಬಾಯಾರಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ ಬಂದ ಎರಡು ವಾರಗಳ ಬಳಿಕ ಮೂಗು, ಬಾಯಿ ಮತ್ತು ಗುದದ್ವಾರದಿಂದ ರಕ್ತಸ್ರಾವ ಆಗುತ್ತದೆ. ಯಾವುದೇ ಲಕ್ಷಣ ಕಾಣಿಸಿಕೊಂಡರೂ ನಿರ್ಲಕ್ಷೃ ಮಾಡದೇ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಡಾ. ರಾಮಕೃಷ್ಣ ರಾವ್ ವಿನಂತಿಸಿದರು.

ದ.ಕ. ಜಿಲ್ಲೆಯಲ್ಲಿ 2004-05ರಲ್ಲಿ 3, 2005-06ರಲ್ಲಿ 17, 2006-07ರಲ್ಲಿ 54, 2014-15ರಲ್ಲಿ 1 ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದೆ. 2005-06, 2006-07 ಹಾಗೂ 2014-15ರಲ್ಲಿ ತಲಾ ಒಂದು ಸಾವು ಸಂಭವಿಸಿದೆ.