ಬೆಂಗಳೂರು: ನಗರದಲ್ಲಿ ನಡೆದ ಮೂರು ಪ್ರತ್ಯೇಕ ಅಪಘಾತದಲ್ಲಿ ನಿವೃತ್ತ ತಹಶಿಲ್ದಾರ್ ಸೇರಿ ಮೂವರು ಮೃತಪಟ್ಟಿದ್ದಾರೆ.
ಲಘು ಸರಕು ಸಾಗಣೆ ವಾಹನ ಡಿಕ್ಕಿಯಾಗಿ ಪಾದಚಾರಿ ನಿವೃತ್ತ ತಹಶಿಲ್ದಾರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಗ್ಗೆರೆ ನಿವಾಸಿ ಮಾಗಡಪ್ಪ(೭೫) ಮೃತ ನಿವೃತ್ತ ತಹಶಿಲ್ದಾರ್. ಸೋಮವಾರ ಬೆಳಗ್ಗೆ ೯.೩೦ಕ್ಕೆ ಲಗ್ಗೆರೆ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಚಾಲಕ ಹರ್ಷನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಗಡಪ್ಪ ಅವರು ಬೆಳಗ್ಗೆ ಕಾರ್ಯ ನಿಮಿತ್ತ ಲಗ್ಗೆರೆ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಘು ಸರಕು ಸಾಗಣೆ ವಾಹನ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಗರಿ ರಸ್ತೆಗೆ ಬಿದ್ದ ಮಾಗಡಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಸಂಬಂಧ ಲಘು ಸರಕು ಸಾಗಣೆ ವಾಹನದ ಚಾಲಕ ಹರ್ಷನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸವಾರ ಸಾವು, ಹಿಂಬದಿ ಸವಾರನಿಗೆ ಗಾಯ:
ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿದ್ದಾರೆ.
ಗೊಟ್ಟಿಗೆರೆ ವೀವರ್ಸ್ ಕಾಲನಿ ನಿವಾಸಿ ಚೇತನ್(೨೪) ಮೃತ ಸವಾರ. ಹಿಂಬದಿ ಸವಾರ ಜಯರಾಮ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ೯.೧೫ಕ್ಕೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೇತನ್ ಮತ್ತು ಆತನ ಸ್ನೇಹಿತ ಜಯರಾಮ್ ಭಾನುವಾರ ದ್ವಿಚಕ್ರ ವಾಹನದಲ್ಲಿ ಸಾಕು ನಾಯಿ ಕೂರಿಸಿಕೊಂಡು ತುಮಕೂರು ಸಮೀಪದ ದೇವಸ್ಥಾನಕ್ಕೆ ತೆರಳಿದ್ದರು. ರಾತ್ರಿ ದೇವಸ್ಥಾನದಿಂದ ಮನೆಗೆ ವಾಪಾಸ್ ಬರುವಾಗ ಮಾರ್ಗ ಮಧ್ಯೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ಚೇತನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಾಕು ನಾಯಿ ಸಮೇತ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಇಬ್ಬರು ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಸವಾರ ಚೇತನ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಹಿಂಬದಿ ಸವಾರ ಜಯರಾಮ್ ಸಣ್ಣ ಪ್ರಮಾಣದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಚೇತನ್ನ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮತ್ತೊಂದು ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲೇ ಸವಾರ ಸಾವು:
ಮತ್ತೊಂದು ಪ್ರಕರಣದಲ್ಲಿ ಟೆಂಪೋ ಟ್ರಾವೆಲರ್ ವಾಹನವೊಂದು ಎಲೆಕ್ಟ್ರಿಕ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಾಚೇನಹಳ್ಳಿ ನಿವಾಸಿ ಕಿರಣ್ ಕುಮಾರ್(೩೬) ಮೃತ ಸವಾರ. ಸೋಮವಾರ ಮುಂಜಾನೆ ೧.೩೦ಕ್ಕೆ ಯಲಹಂಕ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕಿರಣ್ ಕುಮಾರ್ ಭಾನುವಾರ ರಾತ್ರಿ ಹುಣಸಮಾರನಹಳ್ಳಿಯಲ್ಲಿ ಸ್ನೇಹಿತರನ್ನು ಭೇಟಿಯಾಗಿದ್ದರು. ಬಳಿಕ ಮುಂಜಾನೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬಾಗಲೂರು ಕಡೆಯಿಂದ ಕೋಗಿಲು ಕ್ರಾಸ್ ಮಾರ್ಗವಾಗಿ ಯಲಹಂಕ ಸರ್ವಿಸ್ ರಸ್ತೆಯಲ್ಲಿ ಮನೆ ಕಡೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ವಾಹನವೊಂದು ಏಕಾಏಕಿ ಎಲೆಕ್ಟ್ರಿಕ್ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಕಿರಣ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಬಳಿಕ ಟೆಂಪೋ ಟ್ರಾವೆಲರ್ ವಾಹನದ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ಪರಿಶೀಲಿಸಿ, ಚಾಲಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.