ಯಲ್ಲಾಪುರ ಕೆಪಿಎಂಇ ಕಾಯ್ದೆ ನಿಯಮಗಳನ್ನು ಪಾಲಿಸದೇ ವೈದ್ಯಕೀಯ ವೃತ್ತಿಯಲ್ಲಿ ನಿರತವಾಗಿದ್ದ ಕಿರವತ್ತಿಯ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಬೀಗ ಹಾಕಿದ್ದಾರೆ.
ಕಿರವತ್ತಿಯ ಗುರುಪ್ರಸಾದ ಕ್ಲಿನಿಕ್. ಕೀರ್ತಿ ಕ್ಲಿನಿಕ್ ಹಾಗೂ ನೇಮಿಣಿ ಗಲ್ಲಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಖಾಸಗಿ ಆಸ್ಪತ್ರೆಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ.
ಈ ಆಸ್ಪತ್ರೆಗಳಲ್ಲಿ ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡುತ್ತಿರಲಿಲ್ಲ. ಸೂಜಿ, ಸಿರಿಂಜ್, ಕಾಟನ್, ಸಲಾಯಿನ್ ಬಾಟಲ್, ಕೆಥೆಟರ್, ಖಾಲಿ ಆಂಪಲ್ಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಕಸದ ವಾಹನದಲ್ಲಿ ಕಳುಸಹಿಸಲಾಗುತ್ತಿತ್ತು.
ತಾಂತ್ರಿಕ ಪರಿಣತಿ, ನಿಗದಿತ ವಿದ್ಯಾರ್ಹತೆ ಇಲ್ಲದವರನ್ನು ಔಷಧ ವಿತರಣೆ, ಡಯಾಬಿಟಿಸ್ ಹಾಗೂ ಬಿಪಿ ತಪಾಸಣೆಗೆ ಸಿಬ್ಬಂದಿಯಾಗಿ ನೇಮಿಸಿಕೊಳ್ಳಲಾಗಿತ್ತು. ಒಂದು ಆಸ್ಪತ್ರೆ ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗಿರಲಿಲ್ಲ. ಮನೆಯಲ್ಲಿ ನಡೆಸಲಾಗುತ್ತಿದ್ದ ಆಸ್ಪತ್ರೆಯಲ್ಲಿ ವೈದ್ಯನೆಂದು ಹೇಳಿಕೊಂಡವರು ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದರು.
ಈ ಕುರಿತು ದೂರಿನ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ನೇತೃತ್ವದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ ತಾಳಿಕೋಟೆ, ಯು. ಜೋಸೆಫ್, ಪೊಲೀಸ್ ಇಲಾಖೆಯ ರಾಘವೇಂದ್ರ ನಾಯ್ಕ ಅವರ ತಂಡ ದಾಳಿ ನಡೆಸಿ, ಆಸ್ಪತ್ರೆಗಳಿಗೆ ಬೀಗ ಹಾಕಿದೆ.