ಶ್ರೀರಂಗಪಟ್ಟಣ : ತಾಲೂಕಿನ ಅರಕೆರೆ ಗ್ರಾಮದಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಮೂವರು ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಕೆನರಾ ಬ್ಯಾಂಕಿನ ಸಮೀಪದ ಅರಕೆರೆ-ತಡಗವಾಡಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಅಪಘಾತದ ಅಘಾತಕಾರಿ ದೃಶ್ಯ ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿ ನೋಡುವವರ ಎದೆ ನಡುಗಿಸುವಂತಿದೆ.
ತಾಲೂಕಿನ ತಡಗವಾಡಿ ಗ್ರಾಮದ ದೇವೇಗೌಡ (58) ತಮ್ಮ ಪತ್ನಿಯೊಂದಿಗೆ ಅರಕೆರೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ತಮ್ಮ ಮುಂದೆ ಕಿರಿದಾದ ತಿರುವು ರಸ್ತೆಯಲ್ಲಿ ಚಲಿಸುತ್ತಿದ್ದ ಜೆಸಿಬಿ ವಾಹನವನ್ನು ಹಿಂದಿಕ್ಕಿ ಅತಿ ವೇಗದಲ್ಲಿ ಮುನ್ನುಗ್ಗುವ ಭರದಲ್ಲಿದ್ದರು. ಈ ವೇಳೆ ತಡಗವಾಡಿ ಕಡೆಯಿಂದ ಅರಕೆರೆ ಆಗಮಿಸುತ್ತಿದ್ದ ಪೂಜಾರಿ ತಮ್ಮೇಗೌಡ ತಮ್ಮ ಬೈಕನ್ನು ನಿಯಂತ್ರಿಸಲಾಗದೆ ಎದುರಿಗೆ ಆಗಮಿಸಿದ ಬೈಕಿಗೆ ಮುಖಾಮುಖಿ ಡಿಕ್ಕಿಯಾಗಿ ಮೂವರು ರಸ್ತೆಗೆ ಒಮ್ಮೆಲೆ ಅಪ್ಪಳಿಸಿ ಬಿದ್ದರು. ಅಚಾನಕ್ ಹಿಂಬದಿ ಆಗಮಿಸುತ್ತಿದ್ದ ಜೆಸಿಬಿ ವಾಹನ ಏಕಾಏಕಿ ರಸ್ತೆಯಲ್ಲಿ ಬಿದ್ದ ದೇವೇಗೌಡ ಅವರ ತಲೆಯ ಕೂದಲೆಳೆ ಅಂತರದಲ್ಲೇ ಸಾಗಿ ಮುಂದೆ ಹೋಗಿದೆ.
ಅಪಘಾತದಿಂದ ದೇವೇಗೌಡ ರಸ್ತೆಗೆ ಅಪ್ಪಳಿಸಿದ ಬಿದ್ದ ಕಾರಣ ತಲೆಗೆ ಗಂಭೀರ ಪೆಟ್ಟಾಗಿ ನಿತ್ರಾಣಗೊಂಡು ಬಿದ್ದಿದ್ದರು. ಮತ್ತೊಂದು ಬೈಕಿನ ಸವಾರ ತಮ್ಮೇಗೌಡ ಸೇರಿದಂತೆ ಇಬ್ಬರನ್ನು ಸ್ಥಳಿಯರ ನೆರವಿನಿಂದ ಮಂಡ್ಯದ ಮಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದೇವೇಗೌಡ ಅವರ ಪತ್ನಿ ಸಣ್ಣ-ಪುಟ್ಟ ಗಾಯಗಳಿಂದ ಬಚಾವಾಗಿದ್ದು, ಅಪಘಾತದ ತೀವ್ರತೆ ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಘಟನಾ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದರು. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.