ಪುತ್ತೂರು/ಈಶ್ವರಮಂಗಲ: ಪುತ್ತೂರು ತಾಲೂಕಿನ ಕುರಿಯ ಗ್ರಾಮ ಅಜಲಾಡಿಯಲ್ಲಿ ಒಂದೇ ಕುಟುಂಬದ ಮೂವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಅಜ್ಜ ಮತ್ತು ಮೊಮ್ಮಗಳು ಮೃತಪಟ್ಟಿದ್ದು, ಅಜ್ಜಿಗೆ ಗಂಭೀರ ಗಾಯಗಳಾಗಿವೆ.
ಕೊಗ್ಗು ಸಾಹೇಬ್ (62), ಮೊಮ್ಮಗಳು ಸಮೀಯಾ (16) ಕೊಲೆಯಾದವರು. ಕೊಗ್ಗ ಸಾಹೇಬ್ ಅವರ ಪತ್ನಿ ಖತೀಜಮ್ಮ ಗಂಭೀರವಾಗಿ ಗಾಯಗೊಂಡವರು. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಪರಿಸ್ಥಿತಿ ಗಂಭೀರವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಜಲಾಡಿಯ ಹೊಸಮಾರು ಎಂಬಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದು, ಮನೆಯಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ಖತೀಜಮ್ಮ ಮತ್ತು ಕೊಗ್ಗು ಸಾಹೇಬರಿಗೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮಗಳಿದ್ದಾಳೆ. ಹತ್ಯೆಯಾಗಿರುವ ಬಾಲಕಿ ಕೊಗ್ಗು ಸಾಹೇಬರ ಮಗಳ ಪುತ್ರಿ. ಒಬ್ಬ ಗಂಡುಮಗ ವಿದೇಶದಲ್ಲಿ ಕೆಲಸದಲ್ಲಿದ್ದರೆ, ರಜಾಕ್ ಎಂಬ ಇನ್ನೊಬ್ಬ ಪುತ್ರ ಪುತ್ತೂರಿನಲ್ಲೇ ಪ್ರತ್ಯೇಕವಾಗಿ ವಾಸವಾಗಿದ್ದಾನೆ. ಈತ ಮಂಗಳವಾರ ಬೆಳಗ್ಗೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.