ಪಿಯು ವಿದ್ಯಾರ್ಥಿ ಹತ್ಯೆ

ಕಡೂರು: ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡು ಎಂಬ ಬುದ್ಧಿಮಾತನ್ನು ತಿರಸ್ಕರಿಸಿದ ಬೀರೂರಿನ ಪ್ರಥಮ ಪಿಯು ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಡೂರು ವರಪ್ರದ ಕಾಲೇಜಿನ ವಿದ್ಯಾರ್ಥಿ ರೋಹನ್ (16) ಹತ್ಯೆಗೀಡಾದ ಯುವಕ. ಜೀವನ್ ಮತ್ತು ಅಶ್ವಿನ್ ಎಂಬುವರು ಸೇರಿ ಕೊಲೆ ಮಾಡಿದ್ದು, ರೋಹನ್ ಸ್ನೇಹಿತ್​ನ ಸ್ನೇಹಿತ ಅಮಿತ್​ನನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.

ಬೀರೂರಿನ ವಿದ್ಯಾರ್ಥಿಯೋರ್ವಳನ್ನು ರೋಹನ್ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರೋಹನ್ ಬೀರೂರಿನ ಓರ್ವ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದು, ಈ ವಿಷಯ ಜೀವನ್ ಮತ್ತು ಅಶ್ವಿನ್ ಅವರಿಗೆ ತಿಳಿದಿತ್ತು. ಈ ಪ್ರೀತಿಯನ್ನು ಮರೆತುಬಿಡು ಎಂದು ಹಲವು ಬಾರಿ ಹೇಳಿದರೂ ರೋಹನ್ ಅವರ ಮಾತನ್ನು ಪರಿಗಣಿಸಿರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ರೋಹಿನ್ ಬಳಿ ಮಾತನಾಡಬೇಕಿದ್ದು, ಆತನನ್ನು ಕರೆದುಕೊಂಡು ಬಾ ಎಂದು ಅವನ ಸ್ನೇಹಿತ ಅಮಿತ್​ಗೆ ಜೀವನ್ ಮತ್ತು ಅಶ್ವಿನ್ ಹೇಳಿದ್ದರು.

ರೋಹನ್ ಕಾಲೇಜಿನಿಂದ ಬರುತ್ತಿದ್ದಂತೆ ಜೀವನ್ ಮತ್ತು ಅಮಿತ್ ಅವರು ಕೈನೆಟಿಕ್ ಹೋಂಡಾದಲ್ಲಿ ಕರೆದುಕೊಂಡು ಕಡೂರಿನ ಹೊಸಹಳ್ಳಿ ರಸ್ತೆಗೆ ಕರೆದೊಯ್ದರು. ಇದೇ ಸಮಯಕ್ಕೆ ಅಶ್ವಿನ್ ಮಾರುತಿ ಕಾರಿನಲ್ಲಿ ಅಲ್ಲಿಗೆ ಬಂದಿದ್ದು, ರೋಹನ್​ನನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಹಿರಿಯಂಗಳ ರಸ್ತೆಗೆ ಕರೆದೊಯ್ದಿದ್ದಾರೆ.

ರೋಹನ್ ಸ್ನೇಹಿತ ಅಮಿತ್ ಕೈನೆಟಿಕ್ ಹೋಂಡಾದಲ್ಲಿ ಕಾರನ್ನು ಹಿಂಬಾಲಿಸಿದ್ದಾನೆ. ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡು ಎಂದು ಅಶ್ವಿನ್ ಮತ್ತು ಜೀವನ್ ಅವರು ರೋಹನ್​ಗೆ ತಿಳಿಸಿದ್ದು, ಈ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಅವರ ಸಲಹೆಯನ್ನು ರೋಹನ್ ತಿರಸ್ಕರಿಸಿದಾಗ ವೇಲ್​ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದ್ದು, ಶವವನ್ನು ಚೀಲದಲ್ಲಿ ಕಟ್ಟಿ ಲಿಂಗದಹಳ್ಳಿ ಚಿಕ್ಕಮಗಳೂರು ರಸ್ತೆ ಘಾಟಿಯ ಮೂರನೇ ತಿರುವಿನಲ್ಲಿ ಎಸೆದು ಬಂದಿದ್ದಾರೆ.

ಕಡೂರು ಸಿಪಿಐ ಸತ್ಯನಾರಾಯಣ, ಕಡೂರು ಪಿಎಸ್​ವೈ ರಾಕೇಶ್, ಬೀರೂರು ಪಿಎಸ್​ಐ ವಿನುತ್ ಮತ್ತು ಸಿಬ್ಬಂದಿಗಳಾದ ಹೇಮಂತ್​ಕುಮಾರ್, ಶಿವಕುಮಾರ್, ಶಿವಾನಂದ್, ವಸಂತಕುಮಾರ್, ಗಿರೀಶ್,ವೇದಮೂರ್ತಿ, ಮೋಹನ್, ರಾಮಪ್ಪ, ಮಧು ನಾಯಕ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲು ಯಶಸ್ವಿಯಾಗಿದೆ.