ಅಯೋಧ್ಯೆ ವಿವಾದ: ಸುಪ್ರೀಂ​ಗೆ ಮಧ್ಯಂತರ ವರದಿ ಸಲ್ಲಿಸಿದ ಸಮಿತಿ, ಅಂತಿಮ ವರದಿಗೆ ಆ.15ರವರೆಗೆ ಕಾಲಾವಕಾಶ

ನವದೆಹಲಿ: ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಕೋರ್ಟ್​ನಿಂದ ಹೊರಗೆ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ ನೇಮಿಸಿರುವ ಮೂವರು ಸದಸ್ಯರ ಸಂಧಾನಕಾರರ ಸಮಿತಿ ಸುಪ್ರೀಂಕೋರ್ಟ್​ಗೆ ಮಧ್ಯಂತರ ವರದಿ ಸಲ್ಲಿಸಿದೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ನ್ಯಾಯಮೂರ್ತಿಗಳಾದ ಎಸ್​.ಎ. ಬಾಬ್ಡೆ, ಎಸ್​.ಎ. ನಜೀರ್​, ಅಶೋಕ್​ ಭೂಷಣ್​ ಮತ್ತು ಡಿ.ವೈ. ಚಂದ್ರಚೂಡ್​ ಅವರಿರುವ ಐವರು ಸದಸ್ಯರ ನ್ಯಾಯಪೀಠ ಅಯೋಧ್ಯ ವಿವಾದ ಕುರಿತು ಶುಕ್ರವಾರ ವಿಚಾರಣೆ ಮುಂದುವರಿಸಿತು.

ಈ ಸಂದರ್ಭದಲ್ಲಿ ಸಂಧಾನಕಾರರ ಸಮಿತಿ ಮಧ್ಯಂತರ ವರದಿ ಸಲ್ಲಿಸಿತು. ಆ ವರದಿಯನ್ನು ಸ್ವೀಕರಿಸಿದ ನ್ಯಾಯಪೀಠ ಅಂತಿಮ ವರದಿ ಸಲ್ಲಿಸಲು ಆಗಸ್ಟ್​ 15ರ ವರೆಗೆ ಸಮಯಾವಕಾಶ ನೀಡಿತು. ಸಂಧಾನಕಾರರ ಸಮಿತಿ ವರದಿ ಸಲ್ಲಿಸಿದೆ. ಅದರಲ್ಲಿನ ಅಂಶಗಳು ತುಂಬಾ ಗೌಪ್ಯ ಸಂಗತಿಗಳಾಗಿರುವುದರಿಂದ ಅದರ ಬಗ್ಗೆ ಏನೊಂದು ಹೇಳುವುದಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​, ವಿಚಾರಣೆಯನ್ನು ಮುಂದೂಡಿದರು.

ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಅಂತಿಮ ವರದಿ ಸಲ್ಲಿಸಲು ಸ್ವಲ್ಪ ಸಮಯಾವಕಾಶ ಬೇಕು. ಸಂಧಾನ ಮಾತುಕತೆ ಪ್ರಕ್ರಿಯೆಯಲ್ಲಿನ ಹಲವು ದಾಖಲಾತಿಗಳನ್ನು ಅನುವಾದಿಸುವ ಅವಶ್ಯಕತೆ ಇದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸಮಿತಿ ಸದಸ್ಯರು ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದನ್ನು ನ್ಯಾಯಪೀಠ ಕೂಡ ಒಪ್ಪಿಕೊಂಡಿದ್ದು, ಅದಕ್ಕಾಗಿ ಆಗಸ್ಟ್​ 15ರವರೆಗೆ ಸಮಯಾವಕಾಶ ನೀಡಿದೆ. (ಏಜೆನ್ಸೀಸ್​)