ಅಥಣಿ/ಅಥಣಿ ಗ್ರಾಮೀಣ: ಅಥಣಿ ಪಟ್ಟಣ ಹೊರವಲಯದ ಸಂಕೇಶ್ವರ- ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ಸರಣಿ ಅಪಘಾತವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಕಾರ್ ಚಾಲಕ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ ತಾಲೂಕಿನ ಕವಲಾಪುರ ಗ್ರಾಮದ ಸಚಿನ ವಿಲಾಸ ಮಾಳಿ (42), ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಗಣೇಶವಾಡಿಯ ಮಹೇಶ ಸುಭಾಷ ಗಾತಾಡೆ (30), ಶಿರೋಳ ತಾಲೂಕಿನ ಕುಟವಾಡ ಗ್ರಾಮದ ಶುಭಂ ಯುವರಾಜ ಚವ್ಹಾಣ (24) ಮೃತಪಟ್ಟವರು.
ಅಥಣಿ ಪಟ್ಟಣದ ಅಮೃತ ಗಜಾನನ ಸುತಾರ (35), ಅಕ್ಷಯ ನಾಗಪ್ಪ ಬಡಿಗೇರ (27), ಮಹಾರಾಷ್ಟ್ರದ ಕವಲಾಪುರದ ಸದಾಶಿವ ಸಿದ್ದರಾಮ ಮಾಳಿ (55) ಹಾಗೂ ರಮೇಶ ಭಗವಾನ ಮಾಳಿ (50) ಗಂಭೀರ ಗಾಯಗೊಂಡಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ರಕ್ಷಿಸಲು ಬಂದವನೂ ಸಾವು: ಅಥಣಿ ಕಡೆಯಿಂದ ಮುರುಗುಂಡಿ ಗ್ರಾಮದ ಕಡೆಗೆ ಹೋಗುತ್ತಿದ್ದ ಟ್ರಕ್ ಎದುರಿಗೆ ಬರುತ್ತಿದ್ದ ಪಿಕಪ್ ವಾಹನ ನಡುವೆ ಅಪಘಾತವಾಗಿದೆ. ಪಿಕಪ್ ವಾಹನದಲ್ಲಿದ್ದ ಚಾಲಕ ಹಾಗೂ ಪಕ್ಕದವ ಗಂಭೀರ ಗಾಯಗೊಂಡು ಚೀರಾಡುತ್ತಿದ್ದಾಗ ಆ ವಾಹನದ ವಾಹನ ಬಾಗಿಲು ತೆರೆದು ರಕ್ಷಿಸಲು ಕಾರ್ ಚಾಲಕ ಸಚಿನ ಮುಂದಾಗಿದ್ದಾನೆ. ಆಗ ಮತ್ತೊಂದು ಕಾರ್ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಕ್ಷಿಸಲು ಹೋದ ಕಾರ್ ಚಾಲಕ ಸಚಿನ, ಪಿಕಪ್ ವಾಹನದಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಅಥಣಿ ಡಿವೈಎಸ್‌ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ, ತನಿಖಾ ಸಹಾಯಕ ಭೀಮಸೇನ ಮನ್ನಾಪುರ ಭೇಟಿ ನೀಡಿ ಪರಿಶೀಲಿಸಿದರು.