ಎನ್​ಕೌಂಟರ್​: ಪುಲ್ವಾಮಾ ದಾಳಿಯ ಮಾಸ್ಟರ್​ಮೈಂಡ್​ ಸೇರಿ ಮೂವರು ಉಗ್ರರ ಹತ್ಯೆ

ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದ ಜೈಷ್​ ಎ ಮೊಹಮ್ಮದ್​ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಭಾರತೀಯ ಸೇನೆ ಬಾಂಬ್​ ದಾಳಿಯ ಮಾಸ್ಟರ್​ಮೈಂಡ್​ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಎನ್​ಕೌಂಟರ್​ನಲ್ಲಿ ನಾಲ್ವರು ಯೋಧರು ಮತ್ತು ಓರ್ವ ಪೊಲೀಸ್​ ಪೇದೆ ಹುತಾತ್ಮರಾಗಿದ್ದಾರೆ.

ಬಾಂಬ್​ ದಾಳಿ ನಡೆದ ಸ್ಥಳದಿಂದ ಕೇವಲ 12 ಕಿ.ಮೀ. ದೂರದಲ್ಲಿ ಇರುವ ಪುಲ್ವಾಮಾದ ಪಿಂಗಲನ್​ ಪ್ರದೇಶದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರು ಮತ್ತು ಸೇನೆಯ ನಡುವೆ 16 ಗಂಟೆಗಳ ಕಾಲ ನಿರಂತರವಾಗಿ ನಡೆದ ಗುಂಡಿನ ಚಕಮಕಿ ಸೋಮವಾರ ಸಂಜೆ ಅಂತ್ಯಗೊಂಡಿದೆ.

ಗುಂಡಿನ ಚಕಮಕಿಯಲ್ಲಿ ಸೇನೆಯ ಮೇಜರ್​ ವಿಭೂತಿ ಶಂಕರ್​, ಯೋಧರಾದ ಶಿವರಾಮ್​, ಅಜಯ್​ ಕುಮಾರ್​ ಮತ್ತು ಹರಿ ಸಿಂಗ್​ ಹುತಾತ್ಮರಾಗಿದ್ದಾರೆ. ಉಗ್ರರ ಗುಂಡಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್​ನ ಪೇದೆಯೊಬ್ಬರು ಹುತಾತ್ಮರಾಗಿದ್ದರೆ, ಓರ್ವ ನಾಗರಿಕ ಮೃತಪಟ್ಟಿದ್ದಾರೆ.

ಸೇನೆಯ ಗುಂಡೇಟಿಗೆ ಪಾಕಿಸ್ತಾನ ಪ್ರಜೆ ಜೈಷ್​ ಎ ಮೊಹಮ್ಮದ್​ನ ಕಮಾಂಡರ್​ ಕಮ್ರಾನ್​, ಉಗ್ರ ಸಂಘಟನೆಗಳಿಗೆ ಸ್ಥಳೀಯ ಯುವಕರನ್ನು ಸೇರ್ಪಡೆ ಮಾಡುತ್ತಿದ್ದ ಹಿಲಾಲ್​ ಅಹಮದ್​ ಮತ್ತು ಗುರುತು ಪತ್ತೆಯಾಗದ ಮತ್ತೋರ್ವ ಉಗ್ರ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಸೇನೆಯ ಬ್ರಿಗೇಡ್​ ಮಾಂಡರ್​, ಲೆಫ್ಟಿನೆಂಟ್​ ಕರ್ನಲ್​ ಮತ್ತು ಜಮ್ಮು ಕಾಶ್ಮೀರ ಪೊಲೀಸ್​ನ ಡಿಐಜಿ ಅಮಿತ್​ ಕುಮಾರ್​ ಸೇರಿದಂತೆ 9 ಯೋಧರು ಗಾಯಗೊಂಡಿದ್ದಾರೆ. (ಏಜೆನ್ಸೀಸ್​)