20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ 2 ಕಾರುಗಳು ವಶ | ಕೋಲಾರ ಪೊಲೀಸರಿಂದ ಕಾರ್ಯಾಚರಣೆ
ಕೋಲಾರ: ಕೋಲಾರ ನಗರ ಸೇರಿದಂತೆ ರಾಜ್ಯಾದ್ಯಂತ ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಭಾಗಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಕೋಲಾರ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ. 20 ಲಕ್ಷ ರೂ. ಮೌಲ್ಯದ 274 ಗ್ರಾಂ ತೂಕದ ಚಿನ್ನ, 507 ಗ್ರಾಂ ತೂಕದ ಬೆಳ್ಳಿ ಹಾಗೂ ಎರಡು ಕಾರುಗಳನ್ನು ವಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಕೊಟ್ಟಂಪಲ್ಲಿ ಗ್ರಾಮದ ಉಮಾಶಂಕರ್ (35), ಅದೇ ಗ್ರಾಮದ ಕೆ.ಎಸ್.ಶ್ರೀನಾಥ್ (31), ತುಮಕೂರು ಜಿಲ್ಲೆಯ ಕೊಡಿಗೇಹಳ್ಳಿಯ ಜಗನ್ನಾಥ್ (32) ಬಂಧಿತರು.
ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಬಂಧಿತರಿಂದ 227 ಗ್ರಾಂ ಚಿನ್ನ, 507 ಗ್ರಾಂ ಬೆಳ್ಳಿ, ಎಲ್ಜಿ ಟಿವಿ, ಚಿನ್ನ ಲೇಪಿತ ವಾಚ್ಗಳನ್ನು ಹಾಗೂ ಕಳವು ಕೃತ್ಯಗಳಿಗೆ ಬಳಸುತ್ತಿದ್ದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ಆರೋಪಿಗಳು ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳವು ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೋಲಾರ ನಗರದ ಕೀಲುಕೋಟೆಯಲ್ಲಿ ಬೀಗ ಹಾಕಿದ್ದ ಮನೆಯೊಂದನ್ನು ಗುರಿಯಾಗಿಸಿಕೊಂಡು ಬೀಗ ಒಡೆದು ಕಳ್ಳತನ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಕೋಲಾರ ನಗರ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬೈರಾ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕ ಆರ್.ಹರೀಶ್ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್.ಪಿ. ಎಂ.ನಾರಾಯಣ್, ಹೆಚ್ಚುವರಿ ಎಸ್.ಪಿ. ಭಾಸ್ಕರ್ ಹಾಗೂ ಡಿ.ವೈ.ಎಸ್.ಪಿ. ಮುರಳೀಧರ್ ನೇತೃತ್ವದಲ್ಲಿ ಸಿಬ್ಬಂದಿ ಸೈಯದ್ ಕಾಸಿಂ, ಆಂಜಿನಪ್ಪ, ಮೋಹನ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
20ಕ್ಕೂ ಹೆಚ್ಚು ಕೇಸು ದಾಖಲು : ಆರೋಪಿಗಳಾದ ಉಮಾಶಂಕರ್ ಮತ್ತು ಜಗನ್ನಾಥ್ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಒಂದು ಪ್ರಕರಣ ಮತ್ತು ಶ್ರೀನಿವಾಸಪುರ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ರಾಜ್ಯದ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಮನೆ ಕಳವು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಶ್ರೀನಾಥ್ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಅತ್ಯಾಚಾರ ಆರೋಪಿ ಶಿಕ್ಷಕನ ಬಂಧನ
ರಾಯಲ್ಪಾಡು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಶ್ರೀನಿವಾಸಪುರ ತಾಲೂಕಿನ ಖಾಸಗಿ ಶಾಲೆಯೊಂದರ ಶಿಕ್ಷಕನನ್ನು ಗೌನಿಪಲ್ಲಿ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಆಂಗ್ಲ ಶಿಕ್ಷಕ ಜಂಗಂಪಲ್ಲಿ ಶಿವಕುಮಾರ್(33)ಬಂಧಿತ. ವಿಚಾರಣೆಯಲ್ಲಿ ಅತ್ಯಾಚಾರ ಎಸಗಿರುವ ಬಗ್ಗೆ ಶಿಕ್ಷಕ ತಪ್ಪೊಪ್ಪಿಕೊಂಡಿರುವುದಾಗಿ ಎಂದು ತಿಳಿದುಬಂದಿದೆ.
ಟನೆ ವಿವರ: ಇದೇ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ತಾಯಿಗೆ ತಿಳಿಸಿದ್ದಾಳೆ. ಪಾಲಕರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಬಾಲಕಿ ಗರ್ಭಿಣಿ ಯಾಗಿರುವುದು ವೈದ್ಯರಿಂದ ತಿಳಿದುಬಂದಿದೆ. ಆತಂಕಗೊಂಡ ಪಾಲಕರು ಈ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾಳೆ. ಮಗಳ ಮಾಹಿತಿಯನ್ನಾಧರಿಸಿ ಪಾಲಕರು ಗೌನಿಪಲ್ಲಿ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿ ಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಶಿಕ್ಷಕ ಶಿವಕುಮಾರ್ ಅಪ್ರಾಪ್ತ ಬಾಲಕಿಯೊಂದಿಗೆ ಎರಡು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ರಾಯಲ್ಪಾಡು ಪೊಲೀಸ್ ವೃತ್ತ ನಿರೀಕ್ಷಕ ಜಯಾನಂದ್ ನೇತೃತ್ವದಲ್ಲಿ ಪಿಎಸ್ಐ ಶ್ರೀನಿವಾಸಗೌಡ ಸಿಬ್ಬಂದಿ ಮಂಜುನಾಥ್, ಲಕ್ಷ್ಮೀ ನಾರಾಯಣ, ಆಂಜಿ, ಸಂತೋಷ್ ಲಂಬಾಣಿ, ಮುನಿರಾಜು ಆರೋಪಿಯನ್ನು ಬಂಧಿಸಿದ್ದಾರೆ.