ಚಿತ್ರದುರ್ಗ: ಆಕಸ್ಮಿಕವಾಗಿ ಹರಡಿದ ಬೆಂಕಿಗೆ ದಂಪತಿ ಹಾಗೂ ಮಗಳು ಬಲಿಯಾಗಿರುವ ಘಟನೆ ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಖಾಸಗಿ ಬಸ್ ಏಜೆಂಟ್ ಅರುಣ್ (40) ಪತ್ನಿ ಲತಾ (35) ಹಾಗೂ ಪುತ್ರಿ (13) ಮೃತಪಟ್ಟವರು. ಗ್ಯಾಸ್ ಸೋರಿಕೆ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹರಡಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅರುಣ್ ಖಾಸಗಿ ಬಸ್ ಏಜೆಂಟ್ ಕೆಲಸ ಮಾಡುತ್ತಿದ್ದಾರೆ. ಪತ್ನಿ ಲತಾ ಅವರು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಲತಾ ಬೆಳಗ್ಗೆ 6.30 ಯಲ್ಲಿ ಅಂಗಡಿಗೆ ತೆರಳಿ ಹಾಲು ಖರೀದಿಸಿ ಮನೆಗೆ ತೆರಳಿದ್ದರು. ಆದರೆ 7.30ರೊಳಗೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೆ ನೆರೆಯವರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು.
ಬೆಂಕಿ ಹರಡಲು ನಿಖರ ಕಾರಣವನ್ನು ಪೊಲೀಸರು ಹುಡುಕುತ್ತಿದ್ದಾರೆ. ಕೋಟೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಡಿವೈಎಸ್ಪಿ ಪಾಂಡುರಂಗ, ಅಗ್ನಿಶಾಮಕದಳದ ಅಧಿಕಾರಿ ಜಯರಾಮ್ ಭೇಟಿ ಪರಿಶೀಲಿಸಿದರು.