ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಚಾಲನೆ

ಮೂಡಿಗೆರೆ: ಪಟ್ಟಣದ ಮಾರ್ಕೆಟ್ ರಸ್ತೆಯ ಶ್ರೀ ಲೋಕದ ಮಾರಮ್ಮನ ಮೂರು ದಿನಗಳ ಕರಗ ಮಹೋತ್ಸವಕ್ಕೆ ಶುಕ್ರವಾರ ವಿಜೃಂಭಣೆಯ ಚಾಲನೆ ನೀಡಲಾಯಿತು.

ಸುಂಡೆಕೆರೆ ಹೊಳೆ ಬದಿಯಲ್ಲಿ ಶಾಸ್ತ್ರೋಕ್ತವಾಗಿ ಹೂವಿನಿಂದ ನಿರ್ವಿುಸಿದ ಕರಗ ದೇವರನ್ನು ಅರಿಶಿಣದ ವಸ್ತ್ರ ಧರಿಸಿದ್ದ ಕಂಕಣಧಾರಿಗಳು ಹೊತ್ತು ಬೆಳಗಿನ ಜಾವ ಪುರಪ್ರವೇಶ ಮಾಡಿದರು. ದೇವರನ್ನು ಪಟ್ಟಣದ ಪರಿಮಳಮ್ಮ ದೇವಿ ದೇವಾಲಯದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಬರ ಮಾಡಿಕೊಂಡರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾರ್ಕೆಟ್ ರಸ್ತೆಯಲ್ಲಿ ನಿರ್ವಿುಸಿರುವ ಪೆಂಡಾಲ್​ನಲ್ಲಿ ಲೋಕದ ಮಾರಮ್ಮ ದೇವಿ ಕರಗವನ್ನು ಪ್ರತಿಷ್ಠಾಪಿಸಲಾಯಿತು.

ಇದಕ್ಕೂ ಮುನ್ನ ಪರಿಮಳಮ್ಮ ದೇವಿ ದೇವಾಲಯದಿಂದ ಪೆಂಡಾಲ್​ವರೆಗೆ ನಡೆದ ದೇವಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು. ಕರಗವನ್ನು ತಲೆ ಮೇಲೆ ಹೊತ್ತು ಮೇಗಲಪೇಟೆ, ದೊಡ್ಡಿಬೀದಿ, ಸಂತೆ ಮೈದಾನ ಮತ್ತಿತರ ಕಡೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಏ.27ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಪ್ರಮುಖ ಬಡಾವಣೆಗಳಲ್ಲಿ ಕರಗ ಮೆರವಣಿಗೆ ನಡೆಯಲಿದೆ. 28ರಂದು ಛತ್ರ ಮೈದಾನ ಭಾಗದಲ್ಲಿ ಕರಗ ಸಂಚಾರವಾಗಲಿದೆ. ಈ ವೇಳೆ ಭಕ್ತರು, ತಮ್ಮ ಮನೆಯಂಗಳಕ್ಕೆ ಆಗಮಿಸುವ ಕರಗವನ್ನು ಪೂಜಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ.

ಉತ್ಸವಕ್ಕೆ ನಾಳೆ ತೆರೆ: ಮಾರ್ಕೆಟ್ ರಸ್ತೆಯಲ್ಲಿ ಕರಗ ಮಹೋತ್ಸವದ ಅಂಗವಾಗಿ ಏ.28ರಂದು ವಿಶೇಷ ಪೂಜಾ ವಿಧಿಗಳು ನೆರವೇರಲಿವೆ. ಸಂಜೆ ದೇವಿಗೆ ರಾಗಿ ಅಂಬಲಿ ಸೇವೆ ನಡೆಯಲಿದೆ. ನೂರಾರು ಮಹಿಳೆಯರು ರಾಗಿ ಅಂಬಲಿ ಹಾಗೂ ಮೊಸರನ್ನ ತಯಾರಿಸಿ ತಂದು ದೇವಿಗೆ ನೇವೇದ್ಯ ಅರ್ಪಿಸಲಿದ್ದಾರೆ. ರಾತ್ರಿ ಸಾಮೂಹಿಕ ಅನ್ನಸಂತರ್ಪಣೆ ಬಳಿಕ ಶ್ರೀ ಲೋಕದ ಮಾರಮ್ಮ ದೇವಿಯನ್ನು ಗಡಿದಾಟಿಸುವ ಮೂಲಕ ಮೂರು ದಿನಗಳ ಉತ್ಸವ ಸಂಪನ್ನವಾಗಲಿದೆ.

ಲೋಕ ಕಲ್ಯಾಣಾರ್ಥ ಉತ್ಸವ: ಲೋಕ ಕಲ್ಯಾಣಾರ್ಥ ಮಾರಮ್ಮನ ದೇವಿ ಕರಗ ಮಹೋತ್ಸವವನ್ನು ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕಾಲಕಾಲಕ್ಕೆ ಮಳೆ, ಬೆಳೆ ಬಂದು ಜನ, ಜಾನುವಾರುಗಳು ಸಮೃದ್ಧಿಯಾಗಿರಬೇಕು. ಜನರಿಗೆ ರೋಗ-ರುಜಿನಗಳು ಕಾಡಬಾರದು. ಸಕಲ ಜೀವರಾಶಿಗೂ ಒಳಿತಾಗಲೆಂದು ಪ್ರಾರ್ಥಿಸಿ ಪ್ರತಿ ವರ್ಷ ಮೂರು ದಿನಗಳ ಕಾಲ ಕರಗ ಮಹೋತ್ಸವ ಆಚರಿಸಲಾಗುತ್ತದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಉತ್ಸವಕ್ಕೆ ಸಹಕಾರ ನೀಡುತ್ತಾರೆ.