ಸಿಇಟಿ ಪರೀಕ್ಷೆಗೆ 2058 ವಿದ್ಯಾರ್ಥಿಗಳು ನೋಂದಣಿ

ಚಿಕ್ಕಮಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಏ.29 ಹಾಗೂ 30ರಂದು ನಡೆಯುವ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯಲ್ಲಿ 2058 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ನಗರದ 3 ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ. ಏ.29 ಹಾಗೂ 30ರಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೊಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಿದೆ.

ಎಲೆಕ್ಟ್ರಾನಿಕ್ ಉಪಕರಣ ನಿಷೇಧ: ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಕೈಗಡಿಯಾರ ಧರಿಸುವಂತಿಲ್ಲ. ಮೊಬೈಲ್ ಸೇರಿ ಇತರೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯುವುದನ್ನು ನಿಷೇಧಿಸಲಾಗಿದೆ. ಸಿಇಟಿ-2019ರ ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಯು ದ್ವಿತೀಯ ಪಿಯು ಪ್ರವೇಶ ಪತ್ರ, ಕಾಲೇಜಿನ ಬಸ್​ಪಾಸ್, ವಾಹನ ಚಾಲನಾ ಪರವಾನಗಿ, ಪಾಸ್​ಪೋರ್ಟ್, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಪೈಕಿ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಬೇಕು.

ಅಂಗವಿಕಲ ಅಭ್ಯರ್ಥಿಗಳು ಸಂಬಂಧಿಸಿದ ದಾಖಲಾತಿಗಳನ್ನು ಹಾಜರುಪಡಿಸಬೇಕು. ಅವರ ಪರವಾಗಿ ಪರೀಕ್ಷೆ ಬರೆಯುವವರು ಪರೀಕ್ಷೆ ಬರೆಯುವ ವಿದ್ಯಾರ್ಥಿಗಿಂತ ಕಡಿಮೆ ವಿದ್ಯಾರ್ಹತೆ ಉಳ್ಳವರಾಗಿರಬೇಕು. ಅಂಗವಿಕಲರಿಗೆ 10 ನಿಮಿಷ ಹೆಚ್ಚುವರಿ ಸಮಯ ನೀಡಲಾಗುವುದು. ಸೆರೆಬ್ರಲ್ ಪಾಲ್ಸಿಯಿಂದ ತೊಂದರೆಗೊಳಗಾಗಿರುವ ವಿದ್ಯಾರ್ಥಿಗಳಿಗೆ 20 ನಿಮಿಷ ಹೆಚ್ಚು ಕಾಲಾವಕಾಶ ಪರೀಕ್ಷಾ ಮಂಡಳಿ ನೀಡಲಿದೆ.