ಸ್ಪೈಡರ್ಮ್ಯಾನ್ ಸರಣಿಯ ಚಲನಚಿತ್ರಗಳು ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಅಚ್ಚುಮೆಚ್ಚು. ಕೆಲವೊಮ್ಮೆ ಸಿನಿಮಾ, ಟಿ.ವಿ. ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸೋದನ್ನು ನಿಜವೆಂದೇ ನಂಬಿ ಮಕ್ಕಳು ಅನುಸರಿಸಲು ಮುಂದಾಗುತ್ತಾರೆ.
ಅಂತೆಯೇ, ಸ್ಪೈಡರ್ ಮ್ಯಾನ್ನಂತೆಯೇ ತಾವು ಕೂಡ ಅತಿಮಾನುಷ ಶಕ್ತಿಯನ್ನು ಪಡೆಯಬೇಕೆಂದು ಬಯಸಿದ ಮೂವರು ನಿಜಕ್ಕೂ ಅತಂಕಕಾರಿ ಕೃತ್ಯವನ್ನೇ ಎಸಗಿದ್ದಾರೆ. ಎಂಟು, ಹತ್ತು ಹಾಗೂ 12 ವರ್ಷದ ಮೂವರು ಮಕ್ಕಳು ವಿಷಕಾರಿ ಕಪ್ಪು ಜೇಡದಿಂದ ಕಚ್ಚಿಸಿಕೊಂಡಿದ್ದಾರೆ. ಬ್ಲ್ಯಾಕ್ ವಿಡೋ ಎಂದೇ ಕರೆಯಲಾಗುವ ಈ ಜೇಡಗಳು ಸಾಮಾನ್ಯವಾಗಿ ಮನುಷ್ಯರ ತಂಟೆಗೆ ಬರುವುದಿಲ್ಲ. ಸುಮ್ಮನಿದ್ದ ಜೇಡವನ್ನು ಕೋಲಿನಿಂದ ಚುಚ್ಚಿ ಕೆರಳಿಸಿದ ಮಕ್ಕಳು ಅದರಿಂದ ಕಚ್ಚಿಸಿಕೊಂಡಿದ್ದಾರೆ. ಇನ್ನೇನು ತಾವು ಕೂಡ ಸ್ಪೈಡರ್ ಮ್ಯಾನ್ ಆಗಲಿದ್ದೇವೆ ಎಂದು ಕಾದುಕೊಂಡಿದ್ದ ಮಕ್ಕಳಿಗೆ ಸಹಿಸಲಸಾಧ್ಯ ನೋವು, ಬೆವರು ಕಾಣಿಸಿಕೊಂಡಿದೆ. ಜ್ವರವೂ ಕಾಣಿಸಿಕೊಂಡಿದೆ.
ಇದನ್ನೂ ಓದಿ; ಸಾಮೂಹಿಕ ಪ್ರಾರ್ಥನೆ ಬಂದ್, ಪಾಲಕರಿಗೂ ನಿರ್ಬಂಧ, ಮನೆಯೂಟ ಕಡ್ಡಾಯ… ಶಾಲಾರಂಭಕ್ಕೆ ಹೀಗಿರಲಿದೆಯೇ ಮಾರ್ಗಸೂಚಿ?
ಅಷ್ಟರಲ್ಲಿ ಕಟ್ಟಿಗೆ ತರಲು ಹೋಗಿದ್ದ ತಾಯಿ ಮನೆಗೆ ಬಂದಿದ್ದಾಳೆ. ಮಕ್ಕಳ ಸ್ಥಿತಿ ಕಂಡು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಅಲ್ಲಿ ನೀಡಿದ ಚಿಕಿತ್ಸೆಗೆ ಮಕ್ಕಳು ಚೇತರಿಕೆ ಕಂಡಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೂ ಕೂಡ ಚಿಕಿತ್ಸೆ ಫಲಕಾರಿಯಾಗಿಲ್ಲ.
ಬೇರೆ ದಾರಿ ಕಾಣದೇ ಮಕ್ಕಳನ್ನು ರಾಜಧಾನಿಯ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದೇಹದಲ್ಲಿದ್ದ ವಿಷವನ್ನು ಇಳಿಸಲು ಅಲ್ಲಿ ಚಿಕಿತ್ಸೆ ನೀಡಲಾಗಿದೆ. ಐದು ದಿನಗಳ ಬಳಿಕ ಮಕ್ಕಳು ಚೇತರಿಕೆ ಕಂಡಿದ್ದಾರೆ.
ಇದನ್ನೂ ಓದಿ; ಈ ಬಾರಿ ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆ ರಜೆ ಮೊಟಕು; ಡಿಸಿಎಂ ಅಶ್ವತ್ಥನಾರಾಯಣ್ ಮಾಹಿತಿ
ಅಂದ ಹಾಗೇ ಈ ಘಟನೆ ನಡೆದಿದ್ದು, ಬೊಲಿವಿಯಾದ ಚಯಂತಾ ನಗರದಲ್ಲಿ. ಕೋವಿಡ್ ಮಾಹಿತಿ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವೈದ್ಯಾಧಿಕಾರಿಗಳ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕ್ಕಳು ಎಲ್ಲವನ್ನೂ ನಿಜವೆಂದೇ ನಂಬುವುದರಿಂದ ಅವರ ಬಗ್ಗೆ ಕಾಳಜಿ ವಹಿಸಬೇಕು ಎಂದು ವೈದ್ಯರು ಮನವಿ ಮಾಡಿದ್ದಾರೆ.