ಹೈದರಾಬಾದ್: ಡಿ.04ರಂದು ತೆಲುಗು ಚಿತ್ರರಂಗದ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ (Pushpa 2) ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟ ಘಟನೆ ಇಡೀ ಟಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಮೃತ ಮಹಿಳೆಯನ್ನು ಹೈದರಾಬಾದ್‌ನ ದಿಲ್‌ಸುಖ್‌ನಗರ ಮೂಲದ ರೇವತಿ (39) ಎಂದು ಗುರುತಿಸಲಾಗಿದ್ದು, ಕಾಲ್ತುಳಿತದ ವೇಳೆ ರೇವತಿ ಪುತ್ರ ತೇಜ್ (9) ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಗನ ಪರಿಸ್ಥಿತಿ ನೆನೆದು ತಂದೆ ಭಾಸ್ಕರ್ ಕಣ್ಣೀರಿಡುತ್ತಿದ್ದಾರೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸರಿಯಾದ ವ್ಯವಸ್ಥೆ ಇಲ್ಲದಿದ್ದ ಕಾರಣದಿಂದಲೇ ಓರ್ವ ಮಹಿಳೆ ಸಾವಿಗೆ ತುತ್ತಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಇದನ್ನೂ ಓದಿ: ಡಿ.11ಕ್ಕೆ ಗೀತಾ ಜಯಂತಿ, ಓಂ ಯೋಗ ಕೇಂದ್ರದಲ್ಲಿ ಅಖಂಡ ಭಗವದ್ಗೀತೆ ಪಾರಾಯಣ
ರೇವತಿ ಸಾವಿನ ಬೆನ್ನಲ್ಲೇ ಅವರ ಪತಿ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಸ್ತುತ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್ ಮಾಲೀಕ, ಮ್ಯಾನೇಜರ್ ಮತ್ತು ಸೆಕ್ಯುರಿಟಿ ಇಂಚಾರ್ಜ್ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಮೃತ ರೇವತಿ ತನ್ನ ಪತಿ ಭಾಸ್ಕರ್ ಮತ್ತು ಮಕ್ಕಳಾದ ತೇಜ್ (9) ಮತ್ತು ಸಾನ್ವಿಕ್ (7) ಅವರೊಂದಿಗೆ ಸಂಧ್ಯಾ ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ನೋಡಲು ನಾ ಮುಂದು ತಾ ಮುಂದು ಎಂದು ಅಭಿಮಾನಿಗಳು ಮುಗಿಬಿದ್ದ ಕಾರಣ ಚಿತ್ರಮಂದಿರದಲ್ಲಿ ಕಾಲ್ತುಳಿತ ಉಂಟಾಗಿದೆ. ಚಿತ್ರ ನೋಡಲು ಪತಿ ಮತ್ತು ಮಕ್ಕಳೊಂದಿಗಿದ್ದ ರೇವತಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರೆ, ಪುತ್ರ ತೇಜ್ ಚಿಂತಾಜನಕ ಸ್ಥಿತಿ ತಲುಪಿದ್ದಾನೆ. ಘಟನೆಯ ಬೆನ್ನಲ್ಲೇ ಅಲ್ಲು ಅರ್ಜುನ್ ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದು, ವೈಯಕ್ತಿಕವಾಗಿ ಇನ್ನಿತರ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).
24 ವರ್ಷಗಳ ಅಸ್ಸಾದ್ ಆಡಳಿತ ಯುಗಾಂತ್ಯ! ಸಿರಿಯಾದಲ್ಲಿನ ಭಾರತೀಯರು ಸುರಕ್ಷಿತ | Syria Civil War