ಮಟ್ಕಾ ದಂಧೆಕೋರರ ಬಂಧನ

ಹಾನಗಲ್ಲ: ಪಟ್ಟಣದಲ್ಲಿನ ಹೋಟೆಲ್ ಮಾಲೀಕನೊಬ್ಬ ಮಟ್ಕಾ ಬುಕ್ಕಿಯಾಗಿ ಸಾವಿರಾರು ರೂ. ಸಂಗ್ರಹಿಸಿ ನಂತರ ಹಣ ನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ಲ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ.

ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ ವಿವೇಕಾನಂದ ನಗರ ನಿವಾಸಿ ರವೀಶ ಶೆಟ್ಟಿ, ರಾಣೆಬೆನ್ನೂರಿನ ಸ್ಟೀಲ್ ವ್ಯಾಪಾರಿ ರಾಜಶೇಖರಯ್ಯ ವೀರಯ್ಯ ಈರಮ್ಮನವರ ಹಾಗೂ ಕಾರು ಚಾಲಕ ದೇವೇಂದ್ರಪ್ಪನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಕೆ. ಪರಶುರಾಮ ತಿಳಿಸಿದ್ದಾರೆ.

ಪಟ್ಟಣದ ವಿವೇಕಾನಂದ ನಗರ ನಿವಾಸಿ ರವೀಶ ಶೆಟ್ಟಿ ರಾಣೆಬೆನ್ನೂರಿನ ಸ್ಟೀಲ್ ವ್ಯಾಪಾರಿ ರಾಜಶೇಖರಯ್ಯ ವೀರಯ್ಯ ಈರಮ್ಮನವರ ಎಂಬವರಿಂದ ಪ್ರತಿದಿನ ಮಟ್ಕಾ ನಂಬರ್ ಅನ್ನು ವಾಟ್ಸ್ ಆಪ್ ಮೂಲಕ ಸಂಗ್ರಹಿಸಿಕೊಳ್ಳುತ್ತಿದ್ದ. ಹಲವು ತಿಂಗಳಿನಿಂದ ಈ ವ್ಯವಹಾರ ನಡೆದಿತ್ತು. ಆದರೆ, ಈ ವ್ಯವಹಾರ ಸರಿಯಾಗಿ ನಡೆಸಿಕೊಂಡು ಹೋಗಿದ್ದರೆ ಪ್ರಕರಣ ಬೆಳಕಿಗೆ ಬರುತ್ತಿರಲಿಲ್ಲ.

ರಾಜಶೇಖರಯ್ಯ ಮೇ 18ರಂದು 5200 ರೂ. ಅನ್ನು 52ನೇ ನಂಬರಿಗೆ ಆಡುವಂತೆ ತಿಳಿಸಿ, ಹಣ ಕಳುಹಿಸಿದ್ದ. ಆ ದಿನ ಇದೇ ನಂಬರಿಗೆ ಮಟ್ಕಾ ಹಣ ಬಂದಿತ್ತು. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ರವೀಶ, ರಾಜಶೇಖರನಿಗೆ 4.16 ಲಕ್ಷ ರೂ. ನೀಡಬೇಕಾಗಿತ್ತು. ಆದರೆ, ಹಣ ನೀಡದೇ ಒಂದು ತಿಂಗಳಿನಿಂದ ಸತಾಯಿಸುತ್ತಿದ್ದನೆನ್ನಲಾಗಿದೆ. ಹಲವು ಬಾರಿ ಹಣಕ್ಕೆ ಅಲೆದಾಡಿದ್ದ ರಾಜಶೇಖರಯ್ಯ ಪೊಲೀಸರಿಗೆ ದೂರನ್ನೂ ದಾಖಲಿಸಿದ್ದರು. ಒಂದು ದಿನ ಹಾನಗಲ್ಲಿಗೆ ಕಾರಿನಲ್ಲಿ ಆಗಮಿಸಿದ ಅವರು, ರವೀಶ ಶೆಟ್ಟಿಯನ್ನು ಕೃಷ್ಣಭವನ ಹೋಟೆಲ್ ಎದುರಲ್ಲಿಯೇ ವಾಹನದಲ್ಲಿ ತಮ್ಮೂರಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ರವೀಶನ ಸಹೋದರ ಆದರ್ಶ ಶೆಟ್ಟಿ ನನ್ನ ಅಣ್ಣನನ್ನು ಅಪಹರಣ ಮಾಡಿ, ಬಿಡುಗಡೆಗೆ 4 ಲಕ್ಷ ರೂ. ಬೇಡಿಕೆಯಿಟ್ಟಿರುವುದಾಗಿ ಹಾನಗಲ್ಲ ಠಾಣೆಯಲ್ಲಿ ಜೂ. 18ರಂದು ದೂರು ದಾಖಲಿಸಿದ್ದರು. ಈ ದೂರನ್ನು ಬೆನ್ನಟ್ಟಿದ್ದ ಹಾನಗಲ್ಲ ಪಿಎಸ್​ಐ ಆರ್. ವೀರೇಶ ಅವರಿಗೆ ಅಪಹರಣದ ಕಾರಣ ಕೆದಕುತ್ತಿದ್ದಂತೆ ಮಟ್ಕಾ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೆ ರಾಣೆಬೆನ್ನೂರಿಗೆ ತೆರಳಿ ಅಪಹರಣಕಾರ ರಾಜಶೇಖರನನ್ನು ಬಂಧಿಸಿ ಹಾನಗಲ್ಲಿಗೆ ಕರೆತಂದಿದ್ದಾರೆ. ನಂತರ ನಡೆದ ವಿಚಾರಣೆಯಲ್ಲಿ ದಂಧೆಯಲ್ಲಿ ತೊಡಗಿರುವ ಇಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ.

ಓಸಿ-ಇಸ್ಪೀಟ್, ಮನೆಗಳ್ಳತನ ಹೆಚ್ಚಳ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಓಸಿ ಹಾಗೂ ಇಸ್ಪೀಟ್ ಆಟದ ಹಾವಳಿ ಹೆಚ್ಚಾಗುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ. ಕೆಲವು ಪ್ರಕರಣಗಳು ದಾಖಲಾಗದೇ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡಿವೆ ಎಂಬ ಆರೋಪ ಕೇಳಿಬಂದಿವೆ. ಇದರೊಂದಿಗೆ ಕೀಲಿ ಹಾಕಿದ ಮನೆಗಳಲ್ಲಿ ಕಳವು ಪ್ರಕರಣಗಳೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿವೆ. ಒಂದೇ ವಾರದಲ್ಲಿ ಅಕ್ಕಿಆಲೂರು, ಚಿಕ್ಕಾಂಶಿಹೊಸೂರ, ಅಕ್ಕಿವಳ್ಳಿ ಗ್ರಾಮಗಳಲ್ಲಿ ಮನೆಗಳ್ಳತನ ನಡೆದ ಪ್ರಕರಣ ದಾಖಲಾಗಿವೆ. ಆದರೆ, ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಇಂಥ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಮಟ್ಕಾ ದಂಧೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ದಂಧೆಯ ಪ್ರಮುಖ ಆರೋಪಿ ಬಂಧನಕ್ಕೂ ಜಾಲ ಬೀಸಲಾಗಿದೆ. ಜಿಲ್ಲೆಯಲ್ಲಿ ಮಟ್ಖಾ ನಿಯಂತ್ರಣಕ್ಕೆ ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ.
| ಕೆ. ಪರಶುರಾಮ, ಎಸ್​ಪಿ ಹಾವೇರಿLeave a Reply

Your email address will not be published. Required fields are marked *