ಶಿಶಿಲ ದೇವರ ಮೀನುಗಳಿಗೆ ಅಪಾಯ

ಮನೋಹರ್ ಬಳಂಜ ಬೆಳ್ತಂಗಡಿ
ತಿಂಗಳ ಹಿಂದೆ ಭಾರಿ ಮಳೆಗೆ ತುಂಬಿ ಹರಿದ ಕಪಿಲಾ ನದಿ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಂಗಣಕ್ಕೂ ನೀರು ಬಂದು ಜಲಾವೃತಗೊಂಡಿತ್ತು. ಆದರೆ ಈಗ ನದಿಯಲ್ಲಿ ನೀರು ಹರಿವು ಕ್ಷೀಣಗೊಂಡಿದ್ದ್ದು, ಹೂಳು ಕಾಣಿಸುತ್ತಿದೆ. ಬಿಸಿಲಿನ ಝಳಕ್ಕೆ ನೀರಿನ ಉಷ್ಣತೆ ಏರಿಕೆಯಾಗಿ ಮೀನುಗಳು ಚಡಪಡಿಸುತ್ತಿವೆ.
ಈ ಹಿಂದೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮಾತ್ರ ಇಂಥ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ನೀರು ನೀರು ಕಡಿಮೆಯಾಗಿರುವುದರಿಂದ ಭಕ್ತರು ಆತಂಕಗೊಂಡಿದ್ದಾರೆ. ಈ ವಾರ ಕೆಲವು ದಿನ ಮಳೆಯಾದರೂ ನದಿನೀರಿನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಇಲ್ಲಿ ಪ್ರಮುಖವಾಗಿ ಮತ್ಸೃಗಳನ್ನೇ ಪೂಜಿಸಲಾಗುತ್ತಿದೆ. ಎಷ್ಟು ಮಳೆ ಬಂದರೂ ನೀರು ತುಂಬಿ ಹರಿದರೂ ದೇವರ ಗುಂಡಿಯಲ್ಲಿರುವ ಮತ್ಸೃಗಳು ಮಾತ್ರ ಇಲ್ಲಿಯೇ ಇರುತ್ತಿದ್ದು, ಶಕ್ತಿಯ ತಾಣವಾಗಿದೆ. ಪೆರುವೊಲು ಜಾತಿಯ ಮೀನುಗಳು ಇಲ್ಲಿವೆ.
ಮೀನುಗಳ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುವ ಅಗತ್ಯವಿದೆ. ತಡೆಗೋಡೆ ನಿರ್ಮಿಸುವುದು, ಇಲ್ಲಿ ಮರಳುಗಾರಿಕೆ ತಡೆಯುವುದು ಅಲ್ಲದೆ ನದಿಯ ಹೂಳು ತೆಗೆದು ಮೀನುಗಳಿಗೆ ನೀರು ತುಂಬುವಂತೆ ಮಾಡಬೇಕಾಗಿದೆ. ಈ ಹಿಂದೆಯೂ ಮೀನುಗಳಿಗೆ ನೀರಿನ ಕೊರತೆಯಾದಾಗ ಜಿಲ್ಲಾಡಳಿತ ಮುಂದಾಗಬೇಕು ಎಂಬ ಆಗ್ರಹ ಭಕ್ತರಿಂದ ಕೇಳಿಬಂದಿತ್ತು.

 

ಶಿಶಿಲದ ಕಪಿಲಾ ನದಿ ಬತ್ತಿರುವುದು ಅಪಾಯ ಎದುರಾಗುತ್ತಿದೆ. ಬಿಸಿಲಿನ ತಾಪಕ್ಕೆ ದೇವರ ಮೀನುಗಳು ಅಪಾಯದಲ್ಲಿವೆ. ಕೂಡಲೆ ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆ, ಸ್ಥಳೀಯ ಗ್ರಾ.ಪಂ, ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. 5 ವರ್ಷಕ್ಕೊಮ್ಮೆ ಈ ಮೀನಿನ ಗುಂಡಿಯಲ್ಲಿ ಹೂಳು ತುಂಬುತ್ತಿದ್ದು, ಈ ಹಿಂದೆ ಮೀನುಗಳಿಗೆ ತೊಂದರೆಯಾಗದಂತೆ ಹೂಳು ತೆಗೆಯುವ ಕಾರ್ಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.
ಜಯರಾಮ ನೆಲ್ಲಿತ್ತಾಯ, ನಿಕಟಪೂರ್ವ ಅಧ್ಯಕ್ಷರು, ಶಿಶಿಲೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ

 

ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳಿರುವ ಗುಂಡಿಯಲ್ಲಿ ನೀರು ಕಡಿಮೆಯಾಗಿ ಮೀನುಗಳಿಗೆ ತೊಂದರೆಯಾಗುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಶಾಸಕರ ನಿಧಿಯಿಂದ ಹೂಳೆತ್ತುವ ಕಾರ್ಯ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಿ ತಕ್ಷಣ ಸ್ಪಂದಿಸುವಂತೆ ವಿನಂತಿಸುತ್ತೇನೆ.
ಹರೀಶ್ ಪೂಂಜ, ಶಾಸಕ

 

ಶಿಶಿಲೇಶ್ವರ ನದಿಯಲ್ಲಿ ನೀರು ಕಡಿಮೆಯಾಗಿ ದೇವರ ಮೀನುಗಳಿಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಕಳೆದ ಎರಡು ದಿನಗಳಿಂದ ಮಳೆ ಬರುವ ಲಕ್ಷಣಗಳು ಬರುತ್ತಿದೆ. ಮಳೆ ಬಾರದಿದ್ದಲ್ಲಿ ಸೂಕ್ತ ಪರಿಹಾರ ಒದಗಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು.
ಕೊರಗಪ್ಪ ನಾಯ್ಕ, ಜಿ.ಪಂ ಸದಸ್ಯ