ವಿಜೃಂಭಣೆಯ ಕಂಠೇಶ್ವರಸ್ವಾಮಿ ತೆಪ್ಪೋತ್ಸವ

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದಲ್ಲಿ ಗೌತಮ ಪಂಚಮಹಾರಥೋತ್ಸವದ ಅಂಗವಾಗಿ ಕಪಿಲಾನದಿ ಸ್ನಾನಘಟ್ಟದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ದೀಪಾಲಂಕೃತ ಉತ್ಸವಮೂರ್ತಿಯ ತೆಪ್ಪೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ದೇವಾಲಯದ ಒಳ ಆವರಣದಲ್ಲಿ ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿಗೆ ಪುಷ್ಪಾಲಂಕಾರ ಮಾಡಿ ಸಕಲ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಪ್ರಧಾನ ಅರ್ಚಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು.ನಂತರ ಉತ್ಸವಮೂರ್ತಿಯನ್ನು ಮಂಗ ವಾದ್ಯಗೋಷ್ಠಿಯೊಂದಿಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಕಪಿಲಾ ಸ್ನಾನಘಟ್ಟಕ್ಕೆ ಹೊತ್ತು ತರಲಾಯಿತು. ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗಾರ ಮಾಡಲಾಗಿದ್ದ ತೇಲುವ ತೆಪ್ಪದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಕುಮಾರಸ್ವಾಮಿ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಕಪಿಲಾ ಸ್ನಾನಘಟ್ಟದಿಂದ ಒಂದು ಬಾರಿ ಪ್ರದಕ್ಷಿಣೆ ಹಾಕಿದ ತೆಪ್ಪೋತ್ಸವ ಸ್ವಸ್ಥಾನಕ್ಕೆ ಮರಳಿತು. ತೆಪ್ಪವನ್ನು ಭದ್ರತಾ ಪೊಲೀಸ್ ಪಡೆ ಹಿಂಬಾಲಿಸಿ ರಕ್ಷಣೆ ನೀಡಿತು. ತೆಪ್ಪೋತ್ಸವ ಸಾಗುತ್ತಿದ್ದಂತೆ ಶ್ರೀಕಂಠಪ್ಪನಿಗೆ ಉಘೇ, ಉಘೇ ಎಂಬ ಹರ್ಷೋದ್ಗಾರ ಮೊಳಗಿತು.ತೆಪ್ಪೋತ್ಸವದ ಬಳಿಕ ಕಪಿಲಾ ತಟದಲ್ಲಿ ಬಾಣ ಬಿರುಸುಗಳ ಪ್ರದರ್ಶನ ನಡೆಯಿತು.

ರಾತ್ರಿ ವೇಳೆ ತೆಪ್ಪೋತ್ಸವ ವೀಕ್ಷಣೆಗೆ ಜನಸಾಗರವೇ ನೆರೆದಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು.

ಮಾ.12ರಿಂದ ಆರಂಭವಾಗಿದ್ದ ಗೌತಮ ಪಂಚ ಮಹಾರಥೋತ್ಸವವು ವರ್ಣರಂಜಿತ ತೆಪ್ಪೋತ್ಸವಕ್ಕೆದೊಂದಿಗೆ ಅಂತಿಮ ಘಟ್ಟಕ್ಕೆ ತಲುಪಿದೆ. ಮಾ.22ರಂದು ಕೈಲಾಸ ಯಾನಾರೋಹಣೋತ್ಸವ, ಮಾ.23ರಂದು ನಂದಿ ವಾಹನೋತ್ಸವದೊಂದಿಗೆ ದೊಡ್ಡ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.