ಸಾವಿರ ಬಾರ್ ಹೈವೇಗೆ ವಾಪಸ್

ಬೆಂಗಳೂರು: ಅಪಘಾತ ಹೆಚ್ಚಳದ ಕಾರಣಕ್ಕಾಗಿ ಸುಪ್ರೀಂಕೋರ್ಟ್ ಆದೇಶದಿಂದ ಬಾಗಿಲು ಮುಚ್ಚಿದ್ದ ರಾಜ್ಯದ ಹೆದ್ದಾರಿ ಬದಿಯ ಒಂದು ಸಾವಿರ ಮದ್ಯದಂಗಡಿಗಳು ಮತ್ತೆ ಕಿಕ್ ಏರಿಸಲು ಅಣಿಯಾಗುತ್ತಿವೆ. ನ್ಯಾಯಾಲಯವೇ ಕೊಟ್ಟ ಮಾರ್ಪಾಡು ತೀರ್ಪಿನನ್ವಯ, ಐದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯ ಮದ್ಯದಂಗಡಿಗಳು ಶೀಘ್ರ ಮರಳಿ ಬಾಗಿಲು ತೆರೆಯಲಿವೆ. ಸುಪ್ರೀಂಕೋರ್ಟ್ ಆದೇಶದಂತೆ ಈ ಮೊದಲಿದ್ದ ಜಾಗದಲ್ಲೇ ಬಾರ್​ಗಳನ್ನು ಮತ್ತೆ ಆರಂಭಿಸಲು ಅನುಮತಿ ಕೊಟ್ಟು ರಾಜ್ಯ ಸರ್ಕಾರ ಲಿಖಿತ ಆದೇಶ ಹೊರಡಿಸಿದೆ.

ಮದ್ಯಪಾನದಿಂದ ಹೈವೇಯಲ್ಲಿ ಅಪಘಾತ ಹೆಚ್ಚುತ್ತಿದೆ ಎಂದು ಪಂಜಾಬ್ ಮೂಲದ ಎನ್​ಜಿಒ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಹೆದ್ದಾರಿ ಬದಿಯ 220 ಮೀಟರ್ ಅಂತರ ಒಳಗಿರುವ ಬಾರ್​ಗಳನ್ನು ಬಂದ್ ಮಾಡುವಂತೆ ತೀರ್ಪು ಹೊರಡಿಸಿತ್ತು. ಇದರಿಂದಾಗಿ ರಾಜ್ಯದ 10,297 ಮದ್ಯದಂಗಡಿಗಳ ಪೈಕಿ 1,200 ಬಾರ್ ಮಾಲೀಕರಿಗೆ ಆತಂಕ ಉಂಟಾಗಿತ್ತು. ಕೆಲ ಬಾರ್​ಗಳು ಬೇರೆಡೆ ಸ್ಥಳಾಂತರಗೊಂಡರೆ ಮತ್ತೆ ಕೆಲವು ಬಾರ್ ಮಾಲೀಕರು ಜಾಗ ಸಿಗದ್ದರಿಂದ ಲೈಸೆನ್ಸ್ ನವೀಕರಿಸದೆ ಸುಮ್ಮನಾಗಿದ್ದರು. 2016ರ ಡಿ.12ರ ತನ್ನ ತೀರ್ಪನ್ನು ಮರುಪರಿಶೀಲಿಸಿದ ಸುಪ್ರೀಂಕೋರ್ಟ್ 2017ರ ಮಾ.3ರಂದು ತೀರ್ಪಿನಲ್ಲಿ ಕೆಲವು ಬದಲಾವಣೆ ಮಾಡಿ, ಹೈವೇ ಪಕ್ಕದ ಮದ್ಯದಂಗಡಿ ಲೈಸೆನ್ಸ್ ನವೀಕರಣಗೊಳಿಸಿ ಮೂಲಸ್ಥಳಕ್ಕೆ ವರ್ಗಾಯಿಸಿಕೊಳ್ಳಬಹುದು ಎಂದು ಆದೇಶ ನೀಡಿತ್ತು.

ಒಂದು ಸಾವಿರ ಬಾರ್ ಮಾಲೀಕರು ನಿರಾಳ

ಸಿಎಲ್-2 (ರಿಟೇಲ್ ಶಾಪ್) ಮತ್ತು ಸಿಎಲ್-9 (ಬಾರ್ ಆಂಡ್ ರೆಸ್ಟೋರೆಂಟ್) ಮದ್ಯದಂಗಡಿ ಹೊಂದಿರುವ 178 ಗ್ರಾ.ಪಂ. ವ್ಯಾಪ್ತಿಯ ಅಂದಾಜು 1 ಸಾವಿರ ಮಾಲೀಕರಿಗೆ ರಿಲೀಫ್ ಸಿಕ್ಕಿದೆ.

ಮೂಲಸ್ಥಳಕ್ಕೆ ಸ್ಥಳಾಂತರ ಅವಕಾಶ

ಹೈವೇ ಪಕ್ಕದಲ್ಲಿರುವ ಮದ್ಯದಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಕಟ್ಟಡದ ಬಾಡಿಗೆ, ಲೈಸೆನ್ಸ್ ಮರು ನವೀಕರಣ ಮತ್ತು ಇತ್ಯಾದಿಗೆ 50 ಲಕ್ಷ ರೂ. ಖರ್ಚಾಗಿದೆ. ಇದೀಗ ರಾಜ್ಯ ಸರ್ಕಾರ ನೀಡಿರುವ ಸುತ್ತೋಲೆಯಿಂದ ಬಾರ್ ಮಾಲೀಕರು ಮೂಲ ಸ್ಥಳಕ್ಕೆ ಹೋಗಬಹುದು ಅಥವಾ ಈಗ ಇರುವ ಸ್ಥಳದಲ್ಲೇ ವ್ಯಾಪಾರ ನಡೆಸಬಹುದು.