Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಸಾವಿರಾರು ಎಕರೆ ಅರಣ್ಯ ಕೇರಳಿಗರಿಗೆ ಮಂಜೂರು!

Thursday, 12.07.2018, 3:03 AM       No Comments

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ರಬ್ಬರ್ ಕೃಷಿಗೆ ಗುತ್ತಿಗೆ ಆಧಾರದಲ್ಲಿ ಶತಮಾನದ ಹಿಂದೆ ನೀಡಲಾಗಿದ್ದ ಅರಣ್ಯ ಜಾಗವನ್ನು ಕೇರಳ ಮೂಲದ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ ಕಂದಾಯ ಇಲಾಖೆ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.

ವಿರಾಜಪೇಟೆ ತಾಲೂಕಿನ ಕೆಲಭಾಗಗಳನ್ನು 1909ರ ಜೂನ್ 24ರ (ಕೊಡಗು ರಾಜ್ಯ ಸರ್ಕಾರ) ಕೂರ್ಗ್ ಡಿಸ್ಟ್ರಿಕ್ಟ್ ಗೆಜೆಟ್ ನೋಟಿಫಿಕೇಷನ್ ಸಂಖ್ಯೆ 58ರ ಪ್ರಕಾರ ಕೆರ್​ಟಿ ಮೀಸಲು ಅರಣ್ಯ ಎಂದು ಘೊಷಿಸಿತ್ತು. 1913ರ ಅಕ್ಟೋಬರ್ 6ರಲ್ಲಿ ಕೆರ್​ಟಿ ಮೀಸಲು ಅರಣ್ಯದ 1288.75 ಎಕರೆ ಜಮೀನನ್ನು ಲಂಡನ್ ಮೂಲದ ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿಗೆ ರಬ್ಬರ್ ಕೃಷಿಗೆ ಗುತ್ತಿಗೆ ನೀಡಲಾಗಿತ್ತು.

1936ರಲ್ಲಿ ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿಯು 1288.75 ಎಕರೆಯ ಗುತ್ತಿಗೆ ಹಕ್ಕನ್ನು ಎ.ವಿ. ಥೋಮಸ್ ಕೂರ್ಗ್ ರಬ್ಬರ್ ಕಂಪನಿಗೆ ವರ್ಗಾಯಿಸಿತ್ತು. 1944ರ ಜೂನ್ 20ರಲ್ಲಿ ಎ.ವಿ. ಥೋಮಸ್ ಕೂರ್ಗ್ ರಬ್ಬರ್ ಕಂಪನಿಯು ಎ.ಕೆ. ಗೋಪಾಲ್ ಪಿಳ್ಳೆ ಮಾಲೀಕತ್ವದ ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್ ಕಂಪನಿಗೆ ಗುತ್ತಿಗೆ ಹಕ್ಕನ್ನು ವರ್ಗಾಯಿಸಿತ್ತು.

1980ರ ನಂತರ ಪೋರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್​ನವರು ಈ ಜಮೀನನ್ನು ಹಲವಾರು ಭಾಗಗಳಾಗಿ ವಿಭಜಿಸಿ ಬೇರೆ ಬೇರೆ ವ್ಯಕ್ತಿಗಳಿಗೆ ವರ್ಗಾಯಿಸಿದ್ದಾರೆ. ಇದು ಅರಣ್ಯ ಜಮೀನು ಎಂದು ಗೊತ್ತಿದ್ದರೂ ಕಂದಾಯ ಇಲಾಖೆ ಕಾನೂನುಬಾಹಿರವಾಗಿ ಖಾತೆ ಮಾಡಿದೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿ ನಂತರವೂ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಅರಣ್ಯ ಜಮೀನಿನ ಸ್ವರೂಪದಲ್ಲಿ ಬದಲಾವಣೆ ಮಾಡಿರುವುದು, ಆ ಜಮೀನನ್ನು ಕಂದಾಯಕ್ಕೆ ಒಳಪಡಿಸಿರುವುದು ಕಾನೂನುಬಾಹಿರ. ರಬ್ಬರ್ ಕೃಷಿಗೆ ಗುತ್ತಿಗೆ ನೀಡಿದ್ದರೂ, ಅದೇ ಜಮೀನನ್ನು ಇತರ ಬೆಳೆಗಳ ಕೃಷಿಗೆ, ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದರೂ ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳದಿರುವುದು ಅಚ್ಚರಿಯ ವಿಚಾರ.

ಗುತ್ತಿಗೆ ನೀಡಲಾದ ಅರಣ್ಯ ಪ್ರದೇಶವನ್ನು ಗುತ್ತಿಗೆ ಕರಾರು ಉಲ್ಲಂಘಿಸಿ ಮಾರಾಟ ಮಾಡಿರುವುದು, ಕಂದಾಯ ಇಲಾಖೆ ಈ ಜಮೀನಿಗೆ ಖಾತೆ ಮಾಡಿರುವುದು ಕಾನೂನುಬಾಹಿರ. ಅರಣ್ಯ ಪ್ರದೇಶದಲ್ಲಿ ಗುತ್ತಿಗೆ ಷರತ್ತು ಉಲ್ಲಂಘಿಸಿ ಅಡಕೆ, ಬಾಳೆ, ಗೇರು, ತೆಂಗು, ಕಾಳುಮೆಣಸು, ಕಾಫಿ ಕೃಷಿಗೆ ಒಳಪಟ್ಟ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಬೇಕಾಗಿದೆ.

ಗುತ್ತಿಗೆ ಷರತ್ತು ಉಲ್ಲಂಘಿಸಿದ್ದರಿಂದ ಜಾಗ ವಶಕ್ಕೆ ಪಡೆಯಬೇಕು. ಇದು ಸಾಧ್ಯವಾಗದಿದ್ದಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ 1 ಎಕರೆಗೆ 50 ಲಕ್ಷ ರೂ. ವಸೂಲಿ ಮಾಡಬೇಕು.

| ಪಿ.ಎ. ಮುತ್ತಣ್ಣ ಪರಿಸರವಾದಿ

ಕಾನೂನುಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ ಡಿಸಿ, ಸಿಸಿಎಫ್​ಗೆ ದಾಖಲೆ ಸಹಿತ ದೂರು ನೀಡಲಾಗಿದೆ. ತಕ್ಷಣ ಖಾತೆ ರದ್ದು ಪಡಿಸಿ, ಜಾಗ ವಶಕ್ಕೆ ತೆಗೆದುಕೊಳ್ಳಬೇಕು. ಅಕ್ರಮದಲ್ಲಿ ಶಾಮೀಲಾಗಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

| ಬಲ್ಲಚಂಡ ರಂಜನ್ ಬಿದ್ದಪ್ಪ ಸಾಮಾಜಿಕ ಕಾರ್ಯಕರ್ತ

ರಬ್ಬರ್ ಕೃಷಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಭೂಮಿಗೆ ಖಾತೆ ಮಾಡಿಕೊಟ್ಟಿರುವ ವಿಷಯ ಗಮನಕ್ಕೆ ಬಂದಿದೆ. ಯಾವ ಆಧಾರದಲ್ಲಿ, ಹೇಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಪರಿಶೀಲಿಸಲಾಗುವುದು. ತಪ್ಪಿದ್ದಲ್ಲಿ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

| ಡಾ. ನಂಜುಂಡೇಗೌಡ ಉಪವಿಭಾಗಾಧಿಕಾರಿ, ಮಡಿಕೇರಿ ವಿಭಾಗ

Leave a Reply

Your email address will not be published. Required fields are marked *

Back To Top