ವಿಜೃಂಭಣೆಯ ನೇಮಿನಾಥಸ್ವಾಮಿ ರಥೋತ್ಸವ

ಶ್ರವಣಬೆಳಗೊಳ: ಪಟ್ಟಣದಲ್ಲಿ 22ನೇ ತೀರ್ಥಂಕರ ಭಗವಾನ್ ನೇಮಿನಾಥ ಸ್ವಾಮಿ ಮತ್ತು ಯಕ್ಷಿ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿ ದೇವಿಯ ಮಹಾರಥೋತ್ಸವ ಶುಕ್ರವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಈ ರಥೋತ್ಸವ ಸಮವಸರಣದ ಪ್ರತೀಕವಾಗಿದ್ದು, ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಲ್ಲಿನ ಜೈನ ಮಠದ ಮುಂಭಾಗದಲ್ಲಿ ಮಹಾರಥಕ್ಕೆ ಈಡುಗಾಯಿ ಹೊಡೆಯುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಧಾರ್ಮಿಕ ವಿಧಿವಿಧಾನಗಳು ಭಂಡಾರ ಬಸದಿಯಲ್ಲಿ ಬೆಳಗ್ಗೆಯಿಂದಲೇ ಭಗವಾನ್ ನೇಮಿನಾಥ ತೀರ್ಥಂಕರರಿಗೆ, ಯಕ್ಷಿ ಕೂಷ್ಮಾಂಡಿನಿ ದೇವಿ ಮತ್ತು ಸರ್ವಾಹ್ಣ ಯಕ್ಷದೇವರಿಗೆ ನೆರವೇರಿಸಲಾಯಿತು. ನಂತರ ಅಲಂಕೃತಗೊಂಡು ಸಿದ್ಧವಾಗಿದ್ದ ಮಹಾರಥಕ್ಕೆ 3 ಬಾರಿ ಮಂಗಳ ವಾದ್ಯಗಳೊಂದಿಗೆ ಪ್ರದಕ್ಷಿಣೆ ಹಾಕಿದ ನಂತರ ರಥದ ಒಳಗಡೆ ಪ್ರತಿಷ್ಠಾಪಿಸಲಾಯಿತು. ಪೂಜೆಯ ನೇತೃತ್ವವನ್ನು ಪ್ರತಿಷ್ಠಾಚಾರ್ಯರಾದ ಎಸ್.ಪಿ.ಉದಯಕುಮಾರ್, ಎಸ್.ಡಿ.ನಂದಕುಮಾರ್ ದಿನೇಶ್ ವಹಿಸಿದ್ದರು.

ಕ್ಷೇತ್ರದ ಪರಂಪರೆಯಂತೆ ಸ್ಥಳೀಯ ಮತ್ತು ಹೊರಗಡೆಯಿಂದ ಬಂದಂತಹ ಗಣ್ಯರು ಮತ್ತು ಭಕ್ತರಿಗೆ ಚಾರುಕೀರ್ತಿ ಶ್ರೀಗಳು ಶ್ರೀಫಲ ನೀಡಿ ಆಶೀರ್ವದಿಸಿದರು.

ಪಟ್ಟಣದ ಜನರು ಮಹಾರಥಕ್ಕೆ ಬೆಳಗ್ಗೆ ಭಂಡಾರ ಬಸದಿಯ ಸುತ್ತ ಎಳೆದು ಅರ್ಧಕ್ಕೆ ಸಾಗಿದ ನಂತರ ನಿಲ್ಲಿಸಲಾಯಿತು. ಮಧ್ಯಾಹ್ನ 4 ಗಂಟೆಯ ನಂತರ ಸುತ್ತಮುತ್ತಲ ಗ್ರಾಮಗಳ ಜನರು ರಥವನ್ನು ಎಳೆದು ಮಠದ ಮುಂಭಾಗದ ಸ್ವಸ್ಥಾನಕ್ಕೆ ತಂದರು. ಪ್ರತಿಯೊಬ್ಬರೂ ತೆಂಗಿನಕಾಯಿ, ಹೂ ಹಣ್ಣು ದವನದಿಂದ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಯುವಕ ಯುವತಿಯರು ರಥದ ಕಳಶಕ್ಕೆ ಬಾಳೆ ಹಣ್ಣು ದವನ ತೂರಿದರು. ಮೈಸೂರಿನ ಬ್ಯಾಂಡ್‌ಸೆಟ್‌ಗೆ ಯುವಕ ಯುವತಿಯರು, ಭಕ್ತರೂ ಸೇರಿ ನೃತ್ಯ ಮಾಡುತ್ತ ನೇಮಿನಾಥ ಭಗವಾನ್‌ಕೀ ಜೈ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಅಹಿಂಸಾ ಪರಮೋ ಧರ್ಮ ಮತ್ತು ಬಾಹುಬಲಿ ಸ್ವಾಮೀ ಕೀ ಎಂಬ ನಾಮಫಲಕದೊಂದಿಗೆ ಮಂಗಳವಾದ್ಯಗಳು, ಕಲಾ ತಂಡಗಳು ಸಾಗಿದವು. ಈ ರಥ ಯಾತ್ರೆಯಲ್ಲಿ ಗಣಿನಿ ಆರ್ಯಿಕಾ ವಿಶಾಶ್ರೀ ಮಾತಾಜಿ ಮತ್ತು ಸಂಘಸ್ಥ ತ್ಯಾಗಿಗಳು, ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ತಮಿಳುನಾಡಿನ ಅರಹಂತ ಗಿರಿಯ ಧವಲಕೀರ್ತಿ ಸ್ವಾಮೀಜಿ, ನರಸಿಂಹರಾಜ ಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಸ್ವಾಮೀಜಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *