Friday, 16th November 2018  

Vijayavani

Breaking News

ವಾಜಪೇಯಿ ಚಿರಸ್ಥಾಯಿ

Saturday, 18.08.2018, 3:05 AM       No Comments
<< ಸ್ಮೃತಿ ಸ್ಥಳದಲ್ಲಿ ಪಂಚಭೂತಗಳಲ್ಲಿ ಭಾರತರತ್ನ ಲೀನ>>

ಗುರುವಾರ ಸಂಜೆ ಇಹಲೋಕ ತ್ಯಜಿಸಿದ ಅಜಾತಶತ್ರು, ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ, ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಶುಕ್ರವಾರ ಸಾಯಂಕಾಲ ಯಮುನಾ ನದಿ ತೀರದಲ್ಲಿ ಪಂಚಭೂತಗಳಲ್ಲಿ ಲೀನರಾದರು. ರಾಷ್ಟ್ರಪತಿ, ಪ್ರಧಾನಿ ಆದಿಯಾಗಿ ಕೇಂದ್ರ ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳ ಮುಖಂಡರು, ವಿದೇಶಿ ನಾಯಕರೂ ಸೇರಿದಂತೆ ಸಾವಿರಾರು ಗಣ್ಯರ ಸಮ್ಮುಖದಲ್ಲಿ ರಾಜ್​ಘಾಟ್​ನ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೈದಿಕ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು. ವಾಜಪೇಯಿ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಕಣ್ಣೀರ ಬೀಳ್ಕೊಡುಗೆ

ಬಿಜೆಪಿ ಕಚೇರಿಯಿಂದ ರಾಜ್​ಘಾಟ್​ವರೆಗೆ ಸಾಗಿದ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗಿ ಕಣ್ಣೀರ ವಿದಾಯ ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿ ಹಲವು ಗಣ್ಯರು 3.6 ಕಿ.ಮೀ ದೂರದ ಮೆರವಣಿಗೆಯಲ್ಲಿ ನಡೆದೇ ಸಾಗಿದರು.

ಯಾರ್ಯಾರು ಭಾಗಿ

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, 22 ರಾಜ್ಯಗಳ ಮುಖ್ಯಮಂತ್ರಿಗಳು.

ಹರಿದ ಜನಸಾಗರ

ಬೆಳಗ್ಗೆ ಅಟಲ್ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಬಿಜೆಪಿ ಕೇಂದ್ರ ಕಚೇರಿಗೆ ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಗಣ್ಯರು, ಅಭಿಮಾನಿಗಳು ಅಂತಿಮನಮನ ಸಲ್ಲಿಸಿದರು.

ವಿದೇಶಿ ಗಣ್ಯರು

ಪಾಕಿಸ್ತಾನ ಕಾನೂನು ಸಚಿವ ಅಲಿ ಜಫರ್, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ, ಶ್ರೀಲಂಕಾದ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರೇಲಾ ವಾಜಪೇಯಿ ಅವರ ಅಂತಿಮದರ್ಶನ ಪಡೆದರು.

ವಿಶೇಷ ಸ್ಮಾರಕ

ಅಟಲ್ ನೆನಪಿಗಾಗಿ ವಿಶೇಷ ಸ್ಮಾರಕ ನಿರ್ವಿುಸಲು ಚಿಂತನೆ ನಡೆಸಿರುವ ಕೇಂದ್ರ ಸರ್ಕಾರ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.


ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದ ಅಟಲ್

‘ಮೈ ಜೀ ಭರ್ ಜಿಯಾ, ಲೌಟ್​ಕರ್ ಆವುಂಗಾ’(ಸಂತೃಪ್ತಿಯಾಗಿ ಬದುಕಿದ್ದೇನೆ; ಮತ್ತೆ ಹುಟ್ಟಿ ಬರುವೆ) ಎಂದು ಕವಿತೆ ಮೂಲಕ ಹೇಳಿಕೊಂಡಿದ್ದ ಮುತ್ಸದ್ದಿ ರಾಜಕಾರಣಿ, ಕವಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶ ಕಣ್ಣೀರಿನ ವಿದಾಯ ಹೇಳಿದೆ. ‘ಅಟಲ್​ಜಿ ಅಮರ್ ರಹೇ’ ಎಂಬ ಲಕ್ಷಾಂತರ ಜನರ ಉದ್ಘೋಷದ ನಡುವೆ ವಿಜಯ್ಘಾಟ್ ಬಳಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾದರು. ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ ಅವರು ಅಟಲ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಲಕ್ಷಾಂತರ ಅಭಿಮಾನಿಗಳು, ಸಾವಿರಾರು ಗಣ್ಯರ ಸಮ್ಮುಖದಲ್ಲಿ ವೈದಿಕ ಧಾರ್ವಿುಕ ವಿಧಿ-ವಿಧಾನಗಳ ಪ್ರಕಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮ ಸಂಸ್ಕಾರ ನೆರವೇರಿತು. ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ಹಿರಿಯ ರಾಜಕಾರಣಿಗಳು, ಸಚಿವರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸರ್ಕಾರಿ ಗೌರವದೊಂದಿಗೆ ಭಾರತರತ್ನ ಅಟಲ್​ರಿಗೆ ಕೊನೆಯ ಸೆಲ್ಯೂಟ್ ಸಲ್ಲಿಸಲಾಯಿತು. ಭಾರತೀಯ ಸೇನೆಯ ಮೂರೂ ವಿಭಾಗದ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ವಾಜಪೇಯಿ ಆತ್ಮೀಯ ಸ್ನೇಹಿತರಾದ ಎಲ್.ಕೆ. ಆಡ್ವಾಣಿ, ಮುರಳಿಮನೋಹರ್ ಜೋಷಿ, ಎನ್.ಎಂ. ಘಾಟಟೆ ಜತೆಗೆ ದೇಶದ ಕೋಟ್ಯಂತರ ಜನರು ಕಂಬನಿ ಮಿಡಿದರು. ದೇಶದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿ, ಕೊನೆಯ ಬಾರಿ ವಾಜಪೇಯಿ ಪಾರ್ಥಿವ ಶರೀರ ಕಣ್ತುಂಬಿಕೊಳ್ಳಲು ತವಕಿಸುತ್ತಿದ್ದರು.

ರಾಷ್ಟ್ರಧ್ವಜದಲ್ಲಿ ಅಟಲ್ ನೆನಪು

ಏಮ್್ಸ ಆಸ್ಪತ್ರೆಯಲ್ಲಿ ಗುರುವಾರ ಸಂಜೆ 5.05 ಗಂಟೆಗೆ ನಿಧನರಾಗುತ್ತಿದ್ದಂತೆ ಅಟಲ್ ಪಾರ್ಥಿವ ಶರೀರ ಇರಿಸಿದ್ದ ಪೆಟ್ಟಿಗೆಗೆ ರಾಷ್ಟ್ರಧ್ವಜ ಸುತ್ತಲಾಗಿತ್ತು. ಬಳಿಕ ಸುಮಾರು 23 ಗಂಟೆಗಳ ಕಾಲ ಆ ರಾಷ್ಟ್ರಧ್ವಜವು ಲಕ್ಷಾಂತರ ಜನರ ಕಣ್ಣೀರಿನ ಶ್ರದ್ಧಾಂಜಲಿಗೆ ಸಾಕ್ಷಿಯಾಗಿದೆ. ಇಂತಹ ಅವಿಸ್ಮರಣೀಯ ರಾಷ್ಟ್ರಧ್ವಜವನ್ನು ಸೇನೆಯ ಹಿರಿಯ ಅಧಿಕಾರಿಗಳು ವಾಜಪೇಯಿ ಮೊಮ್ಮಗಳು ನಿಹಾರಿಕಾ ಅವರಿಗೆ ಹಸ್ತಾಂತರಿಸಿದರು. ಈ ರಾಷ್ಟ್ರಧ್ವಜ ಪಡೆದು ನಿಹಾರಿಕಾ ಕಣ್ಣೀರಿಟ್ಟರು.

ಸಾರ್ಕ್ ಗಣ್ಯರ ಉಪಸ್ಥಿತಿ

ನೆರೆಹೊರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯಕ್ಕೆ ಶ್ರಮಿಸಿದ್ದ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ಸಾರ್ಕ್ ದೇಶಗಳ ಗಣ್ಯರು ಹಾಗೂ ಭಾರತದಲ್ಲಿನ ಎಲ್ಲ ವಿದೇಶಿ ರಾಯಭಾರಿಗಳು ಬಂದಿದ್ದರು. ಪಾಕಿಸ್ತಾನ ಕಾನೂನು ಸಚಿವರ ತಂಡ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಇವರ ಜತೆಗೆ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಹಾಗೂ ಭೂತಾನ್ ರಾಜ ಕೂಡ ಭಾಗಿಯಾಗಿದ್ದರು.

ಅಟಲ್ ಪಥದಲ್ಲಿ ನಡೆದ ಮೋದಿ!

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರಿಗೆ ಪಕ್ಷ ಮುನ್ನಡೆಸುವುದು ಹಾಗೂ ಆಡಳಿತಕ್ಕೆ ಅಟಲ್ ಬಿಹಾರಿ ವಾಜಪೇಯಿ ಹಾಕಿಕೊಟ್ಟ ಪಥವೇ ಮಾದರಿಯಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಹಿರಿಯ ನಾಯಕರು ಅಟಲ್ ಅಂತಿಮ ಯಾತ್ರೆಯ ಪಥದಲ್ಲಿ ಸಾಗಿದರು. ಬಿಜೆಪಿ ಮುಖ್ಯ ಕಚೇರಿಯಿಂದ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಕಾಲ್ನಡಿಗೆ ಮೂಲಕ ಲಕ್ಷಾಂತರ ಅಭಿಮಾನಿಗಳ ನಡುವೆ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಹೆಜ್ಜೆ ಹಾಕಿದರು. ಭದ್ರತೆಯ ಎಚ್ಚರಿಕೆ ಹಾಗೂ ಎಸ್​ಪಿಜಿ ವಿರೋಧದ ನಡುವೆಯೂ ಸುಮಾರು 4 ಕಿ.ಮೀ ರಸ್ತೆಯಲ್ಲಿ ಕಾಲ್ನಡಿಗೆಯಲ್ಲೇ ಮೋದಿ ಸಾಗಿದರು. ವಾಜಪೇಯಿ ಪಾರ್ಥಿವ ಶರೀರ ಹೊತ್ತಿದ್ದ ವಾಹನದ ಹಿಂದೆ ‘ಅಟಲ್ ಅಮರ್ ರಹೇ’ ಘೋಷಣೆಯೊಂದಿಗೆ ನಡೆದರು. ಮೋದಿ ಹಾಗೂ ಷಾ ಬಹುತೇಕ ಬಿಜೆಪಿ ಮುಖ್ಯಮಂತ್ರಿಗಳು ಹಾಗೂ ಕೆಲ ಕೇಂದ್ರ ಸಚಿವರು ಕೂಡ ಹೆಜ್ಜೆ ಹಾಕಿದರು.

ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಆರಂಭವಾದ ಅಂತಿಮ ಯಾತ್ರೆಯು 4 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳ ತಲುಪಿತು. ಯಾತ್ರೆ ಸಾಗಿಹೋದ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ನಿಂತ ಸ್ಥಳದಿಂದಲೇ ಪ್ರೀತಿಯ ನಾಯಕನಿಗೆ ಪುಷ್ಪನಮನ ಸಲ್ಲಿಸಿದರು. ಬಿಗಿ ಪೊಲೀಸ್ ಹಾಗೂ ಸೇನಾ ಭದ್ರತೆ ನೀಡಲಾಗಿತ್ತು. ಆದರೆ ಯಾವ ಹಂತದಲ್ಲಿಯೂ ನೂಕು ನುಗ್ಗಲು ಅಥವಾ ಗಲಾಟೆ ಆಗದಂತೆ ಪಕ್ಷದ ಕಾರ್ಯಕರ್ತರು ಎಚ್ಚರವಹಿಸಿದ್ದು ವಿಶೇಷವಾಗಿತ್ತು.

ತ್ರಿಸೇನಾ ಗೌರವ

ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾಜಿ ಪ್ರಧಾನಿಗೆ ತ್ರಿಸೇನಾ ಗೌರವದೊಂದಿಗೆ ಅಂತಿಮ ಯಾತ್ರೆ ಹಾಗೂ ಸಂಸ್ಕಾರ ನಡೆಸಲಾಗಿದೆ. ಕೃಷ್ಣ ಮೆನನ್ ಮಾರ್ಗದಲ್ಲಿರುವ ವಾಜಪೇಯಿ ಮನೆಯಿಂದ ಪಾರ್ಥಿವ ಶರೀರವನ್ನು ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗುವಾಗ, ಅಲ್ಲಿಂದ ಸ್ಮೃತಿ ಸ್ಥಳಕ್ಕೆ ಯಾತ್ರೆ ಮೂಲಕ ಹೋಗುವಾಗಲೂ ತ್ರಿಸೇನಾ ಗೌರವ ನೀಡಲಾಯಿತು. ಭೂ, ನೌಕೆ ಹಾಗೂ ವಾಯು ಸೇನೆಯ ಯೋಧರು ಸಂತಾಪ ಸೂಚನ ಮಾರ್ಚಿಂಗ್ ಮೂಲಕ ಯಾತ್ರೆಯಲ್ಲಿ ಸಾಗಿದರು. ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಂತಿಮ ಸಂಸ್ಕಾರ ನಡೆಸುವಾಗಲೂ ಸೇನೆಯ ದಂಡನಾಯಕ ಹಾಗೂ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೂರೂ ಸೇನೆಯ ಮುಖ್ಯಸ್ಥರು ಹಾಜರಿದ್ದು ಸರ್ಕಾರಿ ಗೌರವ ಸಲ್ಲಿಸಿದರು. ವಾಜಪೇಯಿ ದತ್ತುಪುತ್ರಿ ನಮಿತಾ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ 21 ಗನ್ ಸೆಲ್ಯೂಟ್ ಮೂಲಕ ವಿದಾಯ ಹೇಳಲಾಯಿತು.

ಮಳೆಯ ಸಿಂಚನ

ಕಳೆದೊಂದು ದಶಕದಿಂದ ಸಾರ್ವಜನಿಕ ಬದುಕಿನಿಂದ ವಾಜಪೇಯಿ ದೂರವಾಗಿದ್ದರೂ ಜನರು ಮರೆತಿರಲಿಲ್ಲ ಎನ್ನುವುದಕ್ಕೆ ಕಳೆದ 3 ದಿನಗಳಿಂದ ರಾಷ್ಟ್ರದ ಜನ ತೋರುತ್ತಿರುವ ಪ್ರೀತಿ ಸಾಕ್ಷಿಯಾಗಿದೆ. ಸತತ 24 ಗಂಟೆಗಳ ಕಾಲ ದೇಶದ ಜನ ಅಶ್ರುತರ್ಪಣ ಮಾಡಿದರೆ, ಅಂತಿಮ ಸಂಸ್ಕಾರದ ವೇಳೆ ವರುಣ ದೇವ ಕೂಡ ಧರೆಗಿಳಿದು ಸಂತಾಪ ಸೂಚಿಸಿದ. ಚಿತೆಗೆ ಅಗ್ನಿಸ್ಪರ್ಶ ಮಾಡಲು ಸಿದ್ಧವಾಗುತ್ತಿದ್ದಂತೆ ಒಂದಿಷ್ಟು ಹನಿಗಳ ಸಿಂಚನವಾಯಿತು. ಅಂತಿಮ ಕ್ರಿಯೆಗೆ ಎಲ್ಲಿ ಅಡ್ಡಿಯಾಗುತ್ತದೆಯೋ ಎಂದು ಎಲ್ಲರೂ ಆತಂಕಗೊಂಡಿದ್ದರು. ಆದರೆ ಅಜಾತಶತ್ರುವಿನ ಕೊನೆಯ ಕ್ಷಣದಲ್ಲಿ ಶತ್ರುವಾಗಲು ವರುಣನಿಗೂ ಇಷ್ಟವಾಗದೇ ಮಾಯವಾದ.

ಅಂತಿಮ ದರ್ಶನ

ಅಂಧೇರಾ ಜಟೆಗಾ, ಸೂರಜ್ ನಿಖಲೇಗಾ, ಕಮಲ್ ಖಿಲೇಗಾ ಎಂದು ಹೇಳಿದ್ದ ವಾಜಪೇಯಿಗೆ ದೇಶಾದ್ಯಂತ ಬಿಜೆಪಿ ಅಧಿಕಾರ ಹಿಡಿದಿದ್ದು ಹಾಗೂ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸಿದ್ದನ್ನು ಸರಿಯಾಗಿ ನೋಡಲು ಆಗಲಿಲ್ಲ. ಅವರು ಪ್ರಧಾನಿಯಾಗಿದ್ದಾಗಲೇ ಪಕ್ಷದ ಕಚೇರಿ ಸ್ಥಳಾಂತರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕೆಲ ತಿಂಗಳ ಹಿಂದೆ ಬಿಜೆಪಿ ಕೇಂದ್ರ ಕಚೇರಿ ಅಶೋಕ ರಸ್ತೆಯಿಂದ ದೀನದಯಾಳ್ ರಸ್ತೆಗೆ ಸ್ಥಳಾಂತರವಾಗಿದೆ.

ಹಳೆಯ ಕಚೇರಿ ಮಾರ್ಗದ ಮೂಲಕ ಅಟಲ್ ಪಾರ್ಥಿವ ಶರೀರವನ್ನು ಹೊಸ ಕಚೇರಿಗೆ ತರಲಾಗಿತ್ತು. ನರೇಂದ್ರ ಮೋದಿ, ಎಲ್.ಕೆ. ಆಡ್ವಾಣಿ ಸೇರಿ ನೂರಾರು ಬಿಜೆಪಿ ನಾಯಕರು ಗೌರವ ಸಲ್ಲಿಸಿದರು.

ಉ.ಪ್ರದ ಪವಿತ್ರ ನದಿಗಳಿಗೆ ಅಸ್ಥಿ

ಮಾಜಿ ಪ್ರಧಾನಿ ವಾಜಪೇಯಿಗೆ ಮಧ್ಯಪ್ರದೇಶ ಜನ್ಮಭೂಮಿಯಾಗಿದ್ದರೂ, ಉತ್ತರಪ್ರದೇಶ ಕರ್ಮಭೂಮಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಜಪೇಯಿ ಅಸ್ಥಿಯನ್ನು ಉತ್ತರಪ್ರದೇಶದ ಪವಿತ್ರ ನದಿಗಳಾದ ಗಂಗಾ, ಯಮುನಾ ಹಾಗೂ ತಪ್ತಿಯಲ್ಲಿ ವಿಸರ್ಜಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ.

ಅಟಲ್ ಪಥ ನಾಮಕರಣ?

ಬಿಜೆಪಿ ನೂತನ ಕೇಂದ್ರ ಕಚೇರಿಯಿಂದ ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಸುಮಾರು 90 ನಿಮಿಷಗಳ ಅಂತಿಮ ಯಾತ್ರೆ ನಡೆದಿದೆ. ಈ 4 ಕಿ.ಮೀ ರಸ್ತೆಗೆ ಅಟಲ್ ಪಥ ಅಥವಾ ವಿಕಾಸ ಪಥ ಎಂದು ನಾಮಕರಣ ಮಾಡುವ ಸಾಧ್ಯತೆಯಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ವರದಿಯಾಗಿದೆ.

ಸ್ಮಾರಕ ನಿರ್ಮಾಣ

ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ನಿರ್ವಿುಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸದಾಗಿ ಸ್ಮಾರಕ ರಚಿಸಲು ಕಾನೂನು ತಿದ್ದುಪಡಿಯ ಅಗತ್ಯವಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕಾನೂನು ರಚಿಸಿ ಹೊಸ ಸ್ಮಾರಕಕ್ಕೆ ಅವಕಾಶವಿಲ್ಲ ಎಂದು ಆದೇಶಿಸಲಾಗಿತ್ತು. ಆದರೆ ಬಿಜೆಪಿಯ ಪರಮೋಚ್ಚ ನಾಯಕನಿಗೆ ಸ್ಮಾರಕ ಕಟ್ಟಲೇಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಕಾನೂನು ಬದಲಾಯಿಸುವುದು ಖಾತ್ರಿ ಎನ್ನಲಾಗಿದೆ. ಅಲ್ಪಾವಧಿಯಲ್ಲೇ ಅದ್ಧೂರಿಯಾಗಿ ಸ್ಮಾರಕ ಕಟ್ಟುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.

  • 09.50: ವಾಜಪೇಯಿ ನಿವಾಸದಿಂದ ಬಿಜೆಪಿ ಕಚೇರಿಗೆ ಪಾರ್ಥಿವ ಶರೀರದ ಯಾತ್ರೆ
  • 11.09: ಬಿಜೆಪಿ ಕಚೇರಿಗೆ ಪಾರ್ಥಿವ ಶರೀರ ಆಗಮನ, ನಾಯಕರ ಅಂತಿಮ ನಮನ
  • 2.04: ಬಿಜೆಪಿ ಕಚೇರಿಯಿಂದ ಅಂತಿಮ ಯಾತ್ರೆ ಶುರು
  • 4.00: ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಬಂದ ಯಾತ್ರೆ
  • 4.23: ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಅಂತಿಮ ರಾಷ್ಟ್ರೀಯ ಗೌರವ, 1 ನಿಮಿಷ ಮೌನಾಚರಣೆ
  • 4.45: ಅಂತಿಮ ಸಂಸ್ಕಾರದ ಧಾರ್ವಿುಕ ವಿಧಿ ವಿಧಾನ ಆರಂಭ
  • 5.07: ಚಿತೆಗೆ ಅಗ್ನಿಸ್ಪರ್ಶ ಮಾಡಿದ ದತ್ತುಪುತ್ರಿ ನಮಿತಾ

ಕಚೇರಿಗಳಲ್ಲಿ ಧ್ವಜಗೌರವ

ಭಾರತದಲ್ಲಿನ ಎಲ್ಲ ವಿದೇಶಿ ರಾಯಭಾರ ಕಚೇರಿಗಳಲ್ಲಿನ ಆಯಾ ದೇಶಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ರಾಷ್ಟ್ರೀಯ ಸಂತಾಪಕ್ಕೆ ಬೆಂಬಲ ಸೂಚಿಸಲಾಯಿತು. ಹಾಗೆಯೇ ಮಾರಿಷಸ್​ನಲ್ಲಿಯೂ ಅಲ್ಲಿಯ ಸರ್ಕಾರ ಧ್ವಜವನ್ನು ಅರ್ಧಕ್ಕೆ ಹಾರಿಸಿ ಗೌರವ ಸೂಚಿಸಿತು.

Leave a Reply

Your email address will not be published. Required fields are marked *

Back To Top