ವರ್ಷಾಂತ್ಯಕ್ಕೆ ಸಾವಿರ ಕಿಂಡಿ ಅಣೆಕಟ್ಟು

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಾವಿರ ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ ಹೊಂದಲಾಗಿದ್ದು, ಈ ಪೈಕಿ 458 ಪೂರ್ಣಗೊಂಡಿದೆ. ವರ್ಷಾಂತ್ಯದಲ್ಲಿ ಉಳಿದ ಕಿಂಡಿ ಅಣೆಕಟ್ಟುಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಆದ್ಯತೆ ನೀಡಲಾಗುವುದು. ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾ.ಪಂ.ನೆಡ್ಯಾಲಿನಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ವೀಕ್ಷಿಸಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ದ.ಕ.ಜಿಲ್ಲೆಯಲ್ಲಿ ಅತಿ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಿಸಲು ಅವಕಾಶವಿದೆ. ಅಂತರ್ಜಲ ವೃದ್ಧಿಗಾಗಿ ಇವುಗಳ ಅವಶ್ಯಕತೆಯೂ ಇದೆ ಎಂದರು.
ಕಲ್ಲಡ್ಕ ತ್ಯಾಜ್ಯ ನೀರು ಸಂಸ್ಕರಣಾ ಘಟಕ ವೀಕ್ಷಿಸಿದ ಸಚಿವರು ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಶೌಚಗೃಹದಲ್ಲಿ ಬಳಕೆಯಾದ ನೀರಿನ ಸಂಸ್ಕರಣೆಗೂ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಸದ್ಯ ಕಲ್ಲಡ್ಕ ಪೇಟೆಯ 55 ಮನೆ, 7 ಹೋಟೆಲ್, ಒಂದು ಹಾಲ್ ಮತ್ತು ಮೂರು ಚಿಕನ್ ಸ್ಟಾಲ್‌ಗಳ ತ್ಯಾಜ್ಯ ನೀರು ಘಟಕದಲ್ಲಿ ಸಂಸ್ಕರಣೆಯಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ರಾಜೇಶ್ ನಾಕ್, ಜಿಪಂ ಸಿಇ ಡಾ.ಎಂ.ಆರ್.ರವಿ ಮೊದಲಾದವರು ಉಪಸ್ಥಿತರಿದ್ದರು.

ನರೇಗಾ ಸದ್ಬಳಕೆಗೆ ಸೂಚನೆ:  ಸಾವಿರ ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿ ಸಾಲದು. ಒಂದು ಗ್ರಾ.ಪಂ.ವ್ಯಾಪ್ತಿಯಲ್ಲಿ 20ರಿಂದ 25 ಕಿಂಡಿ ಅಣೆಕಟ್ಟು ನಿರ್ಮಿಸಬೇಕು. ಕಿಂಡಿ ಅಣೆಕಟ್ಟು ಕಾಲುಸಂಕವಾಗಿಯೂ ಬಳಕೆಯಾಗುತ್ತದೆ. ಸರ್ಕಾರದಿಂದ ಒಂದೇ ವರ್ಷದಲ್ಲಿ ಕೋಟ್ಯಂತರ ರೂ. ಅನುದಾನ ಒದಗಿಸಲು ಸಾಧ್ಯವಿಲ್ಲ. ಆದರೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ)ಸಾಕಷ್ಟು ಅನುದಾನವಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲು ಇಲ್ಲಿ ಅವಕಾಶವಿದೆ. ತಡೆಗೋಡೆಯೂ ನಿರ್ಮಿಸಬಹುದು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ನರೇಗಾ ಅನುದಾನದ ಸದ್ಬಳಕೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕೃಷ್ಣಭೈರೇಗೌಡ ಸೂಚಿಸಿದರು.

ತ್ಯಾಜ್ಯ ವಿಂಗಡಣೆಗೆ ಮನಸ್ಸು ಮಾಡಿ: ಗೋಳ್ತಮಜಲು ಗ್ರಾಮದ ಚಿಮಣಿಗುರಿಯ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ವಹಣೆ ಮಾಹಿತಿ ಪಡೆದ ಸಚಿವ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ನೀಡಲು ಜನರಲ್ಲಿ ಅರಿವು ಮೂಡಿಸಬೇಕು. ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿಂಗಡಣೆ ಸರಿಯಲ್ಲ, ಸಾಧ್ಯವೂ ಇಲ್ಲ. ಉಡುಪಿ ಜಿಲ್ಲೆಯ 13 ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆಯಲ್ಲೇ ತ್ಯಾಜ್ಯ ವಿಂಗಡಣೆ ಶೇ.85ರಷ್ಟು ಯಶಸ್ವಿಯಾಗಿದೆ. ಅಧಿಕಾರಿಗಳು ಪ್ರಯತ್ನಿಸಿದರೆ ದ.ಕ. ಜಿಲ್ಲೆಯಲ್ಲೂ ಇದು ಸಾಧ್ಯ ಎಂದರು.

ವಿದ್ಯುತ್ ಸಂಪರ್ಕ ಹಾಗೂ ಅಡುಗೆ ಅನಿಲ ಲಭ್ಯ ಇರುವ ಕಾರಣ ಇನ್ನು ಬಯೋಗ್ಯಾಸ್ ಘಟಕ ನಿರ್ಮಾಣ ಅನಗತ್ಯ. ಹಸಿ ಕಸದಿಂದ ಗೊಬ್ಬರ ತಯಾರಿಗೆ ಆದ್ಯತೆ ನೀಡಬೇಕು. ಕಾಂಪೋಸ್ಟ್ ಗೊಬ್ಬರಕ್ಕೆ ಬೇಡಿಕೆ ಇದೆ. ಗ್ರಾ.ಪಂ.ಗೆ ಆದಾಯವೂ ಬರುತ್ತದೆ.
– ಕೃಷ್ಣ ಭೈರೇಗೌಡ, ರಾಜ್ಯ ಸಚಿವ