ಕೇವಲ ಏಳು ಸ್ಥಾನಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್​ನ ವರಿಷ್ಠ ದೇವೇಗೌಡರಿಗೆ ಪ್ರಧಾನಿ ಹುದ್ದೆ ಕನಸು: ಬಿಎಸ್​ವೈ

ಶಿವಮೊಗ್ಗ: ಕೇವಲ 7 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಿರುವ ಜಾತ್ಯಾತೀತ ಜನತಾದಳದ (ಜೆಡಿಎಸ್​) ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಪ್ರಧಾನಿಯಾಗಲು ಸಾಧ್ಯವಾಗಿದ್ದರೂ, ಪ್ರಧಾನಿ ಹುದ್ದೆಯಲ್ಲಿರುವವರಿಗೆ ಸಲಹೆಗಾರರಾಗುವ ಬಯಕೆ ಅವರದ್ದಾಗಿದೆ ಎಂದು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಟೀಕಿಸಿದ್ದಾರೆ.

ಎಎನ್​ಐ ಸುದ್ದಿಸಂಸ್ಥೆಗೆ ಶುಕ್ರವಾರ ಸಂದರ್ಶನ ನೀಡಿದ್ದ ಎಚ್​.ಡಿ. ದೇವೇಗೌಡ, ಬಿಜೆಪಿಯ ಎಲ್​.ಕೆ. ಅಡ್ವಾಣಿ ಅವರಂತೆ ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗುವುದಿಲ್ಲ. ರಾಹುಲ್​ ಗಾಂಧಿ ಪ್ರಧಾನಿಯಾದರೆ, ತಾವು ಅವರ ಪಕ್ಕದಲ್ಲಿದ್ದ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು. ಇದೀಗ ಶನಿವಾರ ಅದೇ ಸುದ್ದಿ ಸಂಸ್ಥೆಗೆ ತಾವು ನೀಡಿರುವ ಸಂದರ್ಶನದಲ್ಲಿ ದೇವೇಗೌಡರ ಇಂಗಿತವನ್ನು ಯಡಿಯೂರಪ್ಪ ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಯಡಿಯೂರಪ್ಪ, ಕಾಂಗ್ರೆಸ್​ನ ವಿಭಜನಾಕಾರಿ ರಾಜಕೀಯದ ಹೊರತಾಗಿಯೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗಳಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಕೂಡ ಬಿಜೆಪಿ ಉತ್ತಮ ಸಾಧನೆ ತೋರುವ ವಿಶ್ವಾಸ ನಮಗಿದೆ. ಶಿವಮೊಗ್ಗ ಕ್ಷೇತ್ರವನ್ನು ಭಾರಿ ಅಂತರದಿಂದ ಗೆಲ್ಲುವ ಜತೆಗೆ ಎಲ್ಲ 22 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್​)