ಅಂತರಾತ್ಮವಿರುವವರು ಹಿಂದೂಗಳ ಕ್ಷಮೆ ಕೇಳಲಿ

ನೆಹರು ಮತ್ತು ಎಡಪಂಥೀಯ ಸಾಹಿತಿ-ಚಿಂತಕರು ಒಟ್ಟುಗೂಡಿದ್ದರಿಂದಾಗಿ ಹಿಂದೂ-ವಿರೋಧಿ ನಿಲುವುಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಭಾವಶಾಲಿಯಾಗತೊಡಗಿದವು. ನಂತರದ ಇಂದಿರಾ ಗಾಂಧಿ-ನೂರುಲ್ ಹಸನ್ ಜೋಡಿ ರೂಪಿಸಿದ ಶಿಕ್ಷಣ ವ್ಯವಸ್ಥೆ ಭಾರತೀಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಹಿಂದೂ-ವಿರೋಧಿ ಮನೋಭಾವವನ್ನು ಭದ್ರವಾಗಿ ಪ್ರತಿಷ್ಠಾಪಿಸಿತು. ಈ ನೀತಿ 2004-14ರ ನಡುವಿನ ಯುಪಿಎ ಆಡಳಿತಾವಧಿಯಲ್ಲಿ ಅತ್ಯುಗ್ರವಾಗಿ ಕಾಣಿಸಿಕೊಂಡಿತು.

| ಪ್ರೇಮಶೇಖರ

ಸ್ವಾತಂತ್ರ್ಯದ ಸಮಯದ ಹೊತ್ತಿಗೆ ಹಿಂದೂ-ಭಾರತೀಯ ಮೌಲ್ಯಗಳ ಬಗ್ಗೆ ಕೀಳರಿಮೆಯ ಜತೆಗೆ, ಇಲ್ಲಿನ ‘ಎಲ್ಲ’ ನ್ಯೂನತೆಗಳಿಗೂ ಎಡಪಂಥೀಯ ಚಿಂತನೆಯಲ್ಲಿ ಪರಿಹಾರವಿದೆಯೆಂದು ನಂಬುವಂಥ ಒಂದಷ್ಟು ಸಾಹಿತ್ಯ- ಸಂಸ್ಕೃತಿ ಚಿಂತಕರು ಈ ದೇಶದಲ್ಲಿ ಸೃಷ್ಟಿಯಾಗಿಹೋಗಿದ್ದರು. ಇವರ ಉಪಯೋಗವನ್ನು ಜವಾಹರ್​ಲಾಲ್ ನೆಹರು ಶೀಘ್ರವೇ ಗುರುತಿಸಿದರು. ಬ್ರಿಟಿಷ್ ವಸಾಹತುಶಾಹಿಗಳು ಮತ್ತು ಮುಸ್ಲಿಂ ಲೀಗ್​ನ ಜಂಟಿ ಹುನ್ನಾರ ಮತ್ತದಕ್ಕೆ ನೆಹರುರ ಕಾಂಗ್ರೆಸ್​ನ ಸಮ್ಮತಿಯಿಂದಾದ ದೇಶವಿಭಜನೆಯನ್ನು ವಿರೋಧಿಸಿ ಅಖಂಡ ಭಾರತದ ಪರವಾಗಿ ನಿಂತ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಜವಾಗಿಯೇ ಜನರ ಪ್ರೀತಿಯನ್ನು ಗಳಿಸಿಕೊಂಡಿತ್ತು. ಹೀಗಾಗಿ, ಆರೆಸ್ಸೆಸ್ ಶೀಘ್ರದಲ್ಲೇ ತನ್ನ ಅಧಿಕಾರಕ್ಕೆ ತೊಡಕಾಗಿ ಬೆಳೆಯಬಹುದೆಂದು ಆತಂಕಗೊಂಡ ನೆಹರು ಸಂಘವನ್ನು ಸಮರ್ಥವಾಗಿ ಎದುರಿಸಲು ನೆಚ್ಚಿಕೊಂಡದ್ದು ಎಡಪಂಥೀಯರನ್ನು. ಭಾರತೀಯ ಮೌಲ್ಯಗಳ ನಿಂದಕರೂ, ವಿರೋಧಿಗಳೂ ಆದ ಎಡಪಂಥೀಯರೇ ಸಂಘದ ವಿರುದ್ಧ ಪ್ರಬಲ ಅಸ್ತ್ರವಾಗಬಲ್ಲರೆಂದು ನೆಹರು ರ್ತಸಿದ್ದರಲ್ಲಿ ಅಚ್ಚರಿಯೇನಿಲ್ಲ. ಇದಕ್ಕೆ ಪೂರಕವಾಗಿ, ರಾಷ್ಟ್ರಮಟ್ಟದಲ್ಲಿ ಸ್ವಂತವಾಗಿ ರಾಜಕೀಯ ಅಧಿಕಾರ ಗಳಿಸುವ ಸಾಮರ್ಥ್ಯ ಕಮ್ಯೂನಿಸ್ಟ್ ಪಕ್ಷಕ್ಕಿಲ್ಲವೆಂದರಿತ ಈ ‘ಬುದ್ಧಿವಂತ’ ಎಡ ಸಾಹಿತಿ-ವಿಚಾರವಾದಿಗಳಿಗೆ ಐಹಿಕ ಅನುಕೂಲತೆಗಳ ಗಳಿಕೆ ಮತ್ತು ಸ್ವಾರ್ಥಪರ ಉದ್ದೇಶದ ನೆರವೇರಿಕೆಗೆ ಬೇಕಾಗಿದ್ದದ್ದು ಕಾಂಗ್ರೆಸ್ ಪ್ರಭುತ್ವದ ಕೃಪಾಕಟಾಕ್ಷವೇ. ಹಣ, ಪ್ರಶಸ್ತಿ, ಸ್ಥಾನಮಾನಗಳಂಥ ಐಹಿಕ ಸುಖಭೋಗಗಳನ್ನು ಆಗಾಗ್ಗೆ ನೀಡುವುದರ ಮೂಲಕ ಇವರನ್ನು ತನಗೆ ಬೇಕಾದಂತೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ನೆಹರು ಅರ್ಥಮಾಡಿಕೊಂಡಿದ್ದರು. ‘ಘಾತಕ ಕಾಕ ಮಿಶ್ರಣ’ (ಕಾಂಗ್ರೆಸ್-ಕಮ್ಯುನಿಸ್ಟ್) ತಯಾರಾದದ್ದು ಹೀಗೆ.

ವಸಾಹತುಶಾಹಿ ಶಿಕ್ಷಣ ಕ್ರಮದ ಮೂಸೆಯಲ್ಲಿ ತಯಾರಾದ ಜವಾಹರ್​ಲಾಲ್ ನೆಹರು ಮತ್ತು ಎಡಪಂಥೀಯ ಸಾಹಿತಿ-ಚಿಂತಕರು ಒಟ್ಟುಗೂಡಿದ್ದರಿಂದಾಗಿ ಹಿಂದೂ-ವಿರೋಧಿ ನಿಲುವುಗಳು ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಪ್ರಭಾವಶಾಲಿಯಾಗತೊಡಗಿದವು. ಆದರೆ ಇವರು ಗುರುತಿಸಲು ಸೋತ ಸತ್ಯವೆಂದರೆ, ಹಿಂದೂ ಅವಹೇಳನವನ್ನು ಆಂಗ್ಲರು ನಮಗೆ ಕಲಿಸಿದ್ದು ತಮ್ಮ ಧಾರ್ವಿುಕ ನಂಬುಗೆಗಳನ್ನು ಭದ್ರಗಾಗಿಟ್ಟುಕೊಂಡೇ ಹಾಗೂ ತಮ್ಮ ದೇವರ ಬಗೆಗಿನ ಭಕ್ತಿಯನ್ನು ಇನಿತೂ ಕುಗ್ಗಿಸದೇ ಎನ್ನುವುದು.

ನಂತರದ ಇಂದಿರಾ ಗಾಂಧಿ-ನೂರುಲ್ ಹಸನ್ ಜೋಡಿ ರೂಪಿಸಿದ ಶಿಕ್ಷಣ ವ್ಯವಸ್ಥೆ ಭಾರತೀಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಹಿಂದೂ-ವಿರೋಧಿ ಮನೋಭಾವವನ್ನು ಭದ್ರವಾಗಿ ಪ್ರತಿಷ್ಠಾಪಿಸಿದ್ದಲ್ಲದೆ ಅದನ್ನೊಂದು ಲಾಭದಾಯಕ ಉದ್ಯಮವನ್ನಾಗಿಯೂ ರೂಪಿಸಿತು. ಈ ಹಿಂದೂ-ವಿರೋಧಿ ಸರ್ಕಾರಿ ನೀತಿ 2004-14ರ ನಡುವಿನ ಯುಪಿಎ ಆಡಳಿತಾವಧಿಯಲ್ಲಿ ಅತ್ಯುಗ್ರವಾಗಿ ಕಾಣಿಸಿಕೊಂಡಿತು. ಸೋನಿಯಾ ಗಾಂಧಿ ನೇತೃತ್ವದ ಸರ್ಕಾರ ಈ ಮನೋಭಾವವನ್ನು ಆರುತಿಂಗಳೊಳಗೇ ಪ್ರದರ್ಶಿಸಿತು.

2004ರ ದೀಪಾವಳಿ ದಿನದಂದು ಕಂಚಿ ಶಂಕರಾಚಾರ್ಯರ

ದಸ್ತಗಿರಿಯನ್ನು ತಮಿಳುನಾಡಿನ ಜಯಲಲಿತಾ ಸರ್ಕಾರ ಮಾಡಿದ್ದು

ಕೇಂದ್ರದ ಒತ್ತಡಕ್ಕೆ ಸಿಲುಕಿ ಎಂಬ ಮಾತಿದೆ. ಕಾಶ್ಮೀರದಲ್ಲಿನ ನಿರಂತರ ಮಾರಣಹೋಮದ ಹಿಂದಿರುವ ಪ್ರತ್ಯೇಕತಾವಾದಿಗಳನ್ನು ಐಷಾರಾಮಿ ಗೃಹಬಂಧನದಲ್ಲಿರಿಸಿ ಸಾಕಿದ ಸರ್ಕಾರ ಶಂಕರಾಚಾರ್ಯರಿಗೆ ಕೈಕೋಳ ತೊಡಿಸಿ ಬಂದೀಖಾನೆಯೊಳಗೆ ದೂಡಿತು. ಇದು ಆರಂಭ.

ಮುಂದಿನ ಎರಡೇ ವರ್ಷಗಳಲ್ಲಿ, ಎಲ್​ಇಟಿ ಹಾಗೂ ಅದರ ಭಾರತೀಯ ಸಹವರ್ತಿ ಸಿಮಿ ಎಸಗಿದ ಭಯೋತ್ಪಾದಕ ದಾಳಿಗಳಿಗೆ ಹಿಂದೂಗಳನ್ನು ಜವಾಬ್ದಾರರನ್ನಾಗಿಸಿ ‘ಹಿಂದೂ ಭಯೋತ್ಪಾದನೆ’, ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳುಗಳನ್ನು

ಸೃಷ್ಟಿಸುವ ಕೃತ್ಯವನ್ನು ಆಗಿನ ಸರ್ಕಾರ ಆರಂಭಿಸಿತು. 2007ರಲ್ಲಿ ಘಟಿಸಿದ ಸಂಝೋತಾ ಎಕ್ಸ್​ಪ್ರೆಸ್ ರೈಲು ಸ್ಪೋಟಕ್ಕೆ ಅರೀಫ್ ಖಸ್ಮಾನಿ ಎಂಬ ಎಲ್​ಇಟಿ ಭಯೋತ್ಪಾದಕ ಕಾರಣ ಎಂದು ಅಮೆರಿಕದ ಎಫ್​ಬಿಐ ಸಾಕ್ಷ್ಯಾಧಾರಗಳ ಮೂಲಕ ಹೇಳಿದರೂ ಯುಪಿಎ ಸರ್ಕಾರ ಅದೆಲ್ಲವನ್ನು ಕಡೆಗಣಿಸಿ ಸ್ವಾಮಿ ಅಸೀಮಾನಂದ ಸೇರಿದಂತೆ ಹಲವು ಹಿಂದೂಗಳ ಮೇಲೆ ಆಪಾದನೆ ಹೊರಿಸಿ ಬಂಧಿಸಿತು. ಅದೇ ವರ್ಷ ಹೈದರಾಬಾದ್​ನ ಮಕ್ಕಾ ಮಸೀದಿ ಸ್ಪೋಟಕ್ಕೆ ಜವಾಬ್ದಾರರನ್ನಾಗಿಸಿ ಹನ್ನೊಂದು ಹಿಂದೂಗಳನ್ನು ಬಂಧಿಸಲಾಯಿತು. ಮರುವರ್ಷ ಮಾಲೆಗಾಂವ್ ಸ್ಪೋಟದ ಆರೋಪ ಹೊರಿಸಿ ಭಾರತೀಯ ಸೇನೆಯ ಗುಪ್ತಚರ ಇಲಾಖೆಯ ಅಧಿಕಾರಿ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಮತ್ತು ಸಾಧಿ್ವ ಪ್ರಜ್ಞಾ ಸಿಂಗ್ ಠಾಕೂರ್ ಅವರುಗಳನ್ನು ಬಂಧಿಸಿ ಹಿಂಸಿಸುವ ಮೂಲಕ ಯುಪಿಎ ಸರ್ಕಾರ ‘ಹಿಂದೂ ಭಯೋತ್ಪಾದನೆ ಜನ್ಮತಾಳಿದೆ’ ಎಂದು ಬೊಬ್ಬೆ ಹೊಡೆಯಿತು. ಸಾರ್ವಜನಿಕವಾಗಿ ಈ ಕೂಗು ಹಾಕಿದವರು ಆಗಿನ ಕೇಂದ್ರ ಮಂತ್ರಿಗಳಾದ ಸುಶೀಲ್​ಕುಮಾರ್ ಶಿಂಧೆ ಮತ್ತು ಪಿ. ಚಿದಂಬರಂ. ಆದರೆ, ಪುರೋಹಿತ್​ರನ್ನು ಸಿಕ್ಕಿಸಲು ಆರ್​ಡಿಎಕ್ಸ್ ಅನ್ನು ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳೇ ‘ಪ್ಲಾಂಟ್’ ಮಾಡಿದ್ದನ್ನು ಕಣ್ಣಾರೆ ಕಂಡ ವರಿಷ್ಠ ಐಪಿಎಸ್ ಅಧಿಕಾರಿ ಮೆಹಬೂಬ್ ಮುಝಾವರ್ ಆ ಬಗ್ಗೆ ಪ್ರತಿಭಟಿಸಿ ‘ಹಿಂದೂ ಭಯೋತ್ಪಾದನೆ’ ಎಂಬ ಷಡ್ಯಂತ್ರದ ಬಲೂನ್​ಗೆ ಸೂಜಿ ಚುಚ್ಚಿದರು! ಪರಿಣಾಮ- ಮುಝಾವರ್​ರನ್ನು ಸಸ್ಪೆಂಡ್ ಮಾಡಲಾಯಿತು! ಪುರೋಹಿತ್ ವಿರುದ್ಧ ಸುಳ್ಳುಸಾಕ್ಷ್ಯಗಳನ್ನು ಎಟಿಎಸ್ ಸೃಷ್ಟಿಸಿದ್ದು ‘ಮೇಲಿನವರ’ ಆದೇಶದ ಮೇರೆಗೆ ಎಂದು ಮುಝಾವರ್ ಹೇಳುತ್ತಾರೆ. ಆಗ ‘ಮೇಲಿದ್ದವರು’ ಪಿ. ಚಿದಂಬರಂ, ಅವರ ‘ಮೇಲಿದ್ದವರು’ ಸೋನಿಯಾ ಗಾಂಧಿ.

ಹೀಗೆ, ಇಡೀ ವಿಶ್ವ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಆತಂಕಗೊಂಡಿದ್ದರೆ ಯುಪಿಎ ಸರ್ಕಾರ ‘ಹಿಂದೂ ಭಯೋತ್ಪಾದನೆ’ ಎಂಬ ಕಾಲ್ಪನಿಕ ಭೂತವನ್ನು ಸೃಷ್ಟಿಸಹೊರಟ ಮತ್ತಷ್ಟು ನಿಖರ ಸೂಚನೆ ದೊರೆಯುವುದು 2009 ಜುಲೈ 20ರಂದು. ಅಂದು ಪ್ರಧಾನಿ ಮನಮೋಹನ್ ಸಿಂಗ್ ಆಯೋಜಿಸಿದ ಮಾತುಕತೆ-ಔತಣಕೂಟದಲ್ಲಿ ಅಮೆರಿಕದ ರಾಯಭಾರಿ ಕೇಳಿದ, ‘ಲಷ್ಕರ್-ಎ-ತೋಯ್ಬಾ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬ ಪ್ರಶ್ನೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಎಲ್​ಇಟಿಯಿಂದ ದೊಡ್ಡ ಸಮಸ್ಯೆಯೇನಿಲ್ಲ, ನಾವು ಗಮನ ಹರಿಸಬೇಕಾಗಿರುವುದು ಹಿಂದೂ ಭಯೋತ್ಪಾದಕರ ಬಗ್ಗೆ. ನರೇಂದ್ರ ಮೋದಿ ಅಂತಹವರ ಬಗ್ಗೆ’ ಎಂದು ಉತ್ತರಿಸಿದರು! ಅಂದರೆ, ‘ಹಿಂದೂ ಭಯೋತ್ಪಾದನೆ’ ಎಂಬ ಸುಳ್ಳನ್ನು 2008ರ ಅಕ್ಟೋಬರ್​ನಲ್ಲಿ ಸೃಷ್ಟಿಸಿದ ಸೋನಿಯಾ ಸರ್ಕಾರ 2009 ಜುಲೈನಲ್ಲಿ ಅದನ್ನು ಪ್ರಪಂಚಕ್ಕೆ ಹರಡಲು ಮುಂದಾಯಿತು! ಈ ನಡುವೆ ಎಲ್​ಇಟಿ ಮುಂಬೈ ಮೇಲೆ ಭಯಾನಕ ದಾಳಿ ಎಸಗಿ ದೇಶ-ವಿದೇಶದ 166 ಅಮಾಯಕರನ್ನು ಕೊಂದಿತು ಎನ್ನುವುದನ್ನು ಆ ಸರ್ಕಾರ ತಣ್ಣಗೆ ಮರೆತುಬಿಟ್ಟಿತು! ಒಂದುವೇಳೆ ಅಜ್ಮಲ್ ಕಸಬ್ ಜೀವಂತವಾಗಿ ಸೆರೆಸಿಕ್ಕದೇ ಹೋಗಿದ್ದರೆ ಮುಂಬೈ ದಾಳಿಗಳನ್ನೂ ಹಿಂದೂಗಳ ತಲೆಗೆ ಕಟ್ಟುತ್ತಿತ್ತು ಸರ್ಕಾರ.

ಯುಪಿಎ ಸರ್ಕಾರದ ಮುಂದಿನ ಕರಾಳ ಮುಖ 2011ರಲ್ಲಿ ಬಯಲಾಯಿತು. ಹಿಂದೂ-ವಿರೋಧಿಗಳನ್ನೇ ಆಯ್ದು ಸೋನಿಯಾ ಗಾಂಧಿ ರಚಿಸಿಕೊಂಡಿದ್ದ ‘ನ್ಯಾಷನಲ್ ಆಡ್ವೈಸರಿ ಕೌನ್ಸಿಲ್’ 2011ರಲ್ಲಿ ರೂಪಿಸಿದ ಕೋಮುವಾದಿ ಹಿಂಸೆ ಕುರಿತಾದ ಮಸೂದೆ ಯಾವುದೇ ಕೋಮುಹಿಂಸೆಯಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಮಾತ್ರ ಒತ್ತುಕೊಡುವಂತಹದ್ದಾಗಿತ್ತು. ಅಂದರೆ, ಕೋಮುಹಿಂಸೆಯಲ್ಲಿ ನೊಂದ ಹಿಂದೂಗಳಿಗೆ ಯಾವುದೇ ರಕ್ಷಣೆ, ಪರಿಹಾರ ಇಲ್ಲ. ಅದೆಲ್ಲವೂ ದೊರೆಯುವುದು ಇತರ ಧರ್ವಿುೕಯರಿಗೆ! ಸದ್ಯ ಆ ಕರಾಳ ಮಸೂದೆ ಕಾನೂನಾಗಲಿಲ್ಲ. ಈ ಹಿಂದೂ-ವಿರೋಧಿ ಕುಕೃತ್ಯಗಳ ಸರಣಿ ಇಲ್ಲಿಗೆ ನಿಲ್ಲುವುದಿಲ್ಲ. ಸೇತುಸಮುದ್ರವನ್ನು ಒಡೆಯಲು ಹೊರಟಿದ್ದು, ರಾಮ, ರಾಮಾಯಣ ಎಲ್ಲವೂ ಕಲ್ಪನೆ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಪುರಾತನ ಸರಸ್ವತಿ ನದಿ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದ ‘ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ’ಗೆ ಧನಸಹಾಯ ನಿಲ್ಲಿಸಿದ್ದು, ಹಿಂದೂಗಳನ್ನು ಮತಾಂತರಿಸಲು ವಿದೇಶಿ ಧರ್ಮಪ್ರಚಾರಕರು ನಿರಾತಂಕವಾಗಿ ಇಲ್ಲಿಗೆ ಬರಲು ರೂಪಿಸಿದ ‘ಮಿಷನರಿ ವೀಸಾ ಯೋಜನೆ’… ಪಟ್ಟಿ ದೊಡ್ಡದಿದೆ.

ಇದೆಲ್ಲದರ ಪರಿಣಾಮವೇನಾಯಿತು? ಮಕ್ಕಾ ಮಸೀದಿ ಸ್ಪೋಟದ ಆರೋಪ ಹೊತ್ತ ಹನ್ನೊಂದು ಹಿಂದೂಗಳು ನಿರಪರಾಧಿಗಳು ಎಂದು ನ್ಯಾಯಾಲಯ ಬಿಡುಗಡೆ ಮಾಡಿತು. ಕರ್ನಲ್ ಪುರೋಹಿತ್ ಮತ್ತು ಸಾಧಿ್ವ ಪ್ರಜ್ಞಾರ ಅಮಾಯಕತೆ ಇಂದು ಇಡೀ ದೇಶಕ್ಕೆ ತಿಳಿದುಹೋಗಿದೆ. ಸಂಝೋತಾ ಎಕ್ಸ್​ಪ್ರೆಸ್

ಸ್ಪೋಟದಲ್ಲಿ ಸ್ವಾಮಿ ಅಸೀಮಾನಂದ ನಿದೋಷಿ ಎಂದು ಕಳೆದ ತಿಂಗಳಷ್ಟೇ ನ್ಯಾಯಾಲಯ ಘೊಷಿಸಿದೆ. ಅಂದರೆ ಸತ್ಯದ ಪರೀಕ್ಷೆಯಲ್ಲಿ ಆಗಿನ ಸೋನಿಯಾ ಸರ್ಕಾರ ಸೋತುಹೋಗಿದೆ!

ಈ ಹಿಂದೂ-ವಿರೋಧಿ ನೀತಿಗೆ ಸಹಕಾರಿಯಾಗಿ ‘ಕಾಕ’ ಇತಿಹಾಸಕಾರರು ಮತ್ತು ಮಾಧ್ಯಮಗಳ ಕೃತ್ಯಗಳ ಒಂದೆರಡು ಉದಾಹರಣೆಗಳು ಇಲ್ಲಿ ಅಗತ್ಯ. ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡದ ಸ್ಥಳದಲ್ಲಿ ಪ್ರಾಚೀನ ಹಿಂದೂ ಮಂದಿರವೊಂದು ಇದ್ದುದನ್ನು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್​ಐ) 1975-76ರಲ್ಲಿ ಪತ್ತೆಹಚ್ಚಿತು. 2003ರಲ್ಲಿ ಐವತ್ತೆರಡು ಸ್ಥಂಭಗಳೂ ಸೇರಿದಂತೆ ಹಿಂದೂ ಮಂದಿರಕ್ಕೆ ಸಂಬಂಧಿಸಿದ 263 ವಸ್ತುಗಳು ಪತ್ತೆಯಾದವು. ವೈಜ್ಞಾನಿಕವಾಗಿ ಸಾಬೀತಾದ ವಿವರಗಳ ಬಗ್ಗೆ ಕಾಕ ಇತಿಹಾಸಕಾರರು ಮುಗುಮ್ಮಾಗಿ ಉಳಿದರು. ಅಷ್ಟೇ ಅಲ್ಲ, ವಿವಾದಾಸ್ಪದ ಸ್ಥಳದ ಮೇಲೆ ತನ್ನ ಅಧಿಕಾರವನ್ನು ಮಾನ್ಯ ಮಾಡುವಂತೆ ಸುನ್ನಿ ವಕ್ಪ್ ಬೋರ್ಡ್ ಅಲಹಾಬಾದ್ ಹೈಕೋರ್ಟ್​ನಲ್ಲಿ ದಾವೆ ಹೂಡಿದಾಗ ಅದರ ಪರವಾಗಿ ಸಾಕ್ಷಿ ಹೇಳಿದರು. ಮೂರು ದಶಕಗಳ ಹಿಂದೆಯೇ ಶಾಂತಿಯುತವಾಗಿ ಪರಿಹಾರವಾಗುತ್ತಿದ್ದ ರಾಮಜನ್ಮಭೂಮಿ ವಿವಾದವನ್ನು ರಾಷ್ಟ್ರೀಯ ಸಮಸ್ಯೆಯನ್ನಾಗಿಸಿದ್ದು ಇತಿಹಾಸಕಾರ ಇರ್ಫಾನ್ ಹಬೀಬ್ ಎಂದು ಅಯೋಧ್ಯಾ ಉತ್ಖನನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಾಕ್ತನಶಾಸ್ತ್ರಜ್ಞ ಡಾ. ಕೆ.ಕೆ. ಮಹಮದ್ ಸ್ಪಷ್ಟವಾಗಿ ಹೇಳುತ್ತಾರೆ.

ತಮ್ಮೀ ಕುಕೃತ್ಯಗಳನ್ನು ಕಾಕ ಇತಿಹಾಸಕಾರರು ಮುಂದುವರಿಸಿದ ಉದಾಹರಣೆಯೂ ಎನ್​ಸಿಇಆರ್​ಟಿ ಪಠ್ಯಪುಸ್ತಕಗಳಲ್ಲಿ ದೊರೆಯುತ್ತದೆ. ಎಂಟನೆಯ ತರಗತಿಯ ಪಠ್ಯಪುಸ್ತಕದಲ್ಲಿ ಗೋಧ್ರೋತ್ತರ ಹಿಂಸಾಚಾರವನ್ನು ‘ಈ ಕಾಲದ ಜಗತ್ತಿನ ಯುದ್ಧಗಳಲ್ಲೇ ಅತ್ಯಂತ ಕೆಟ್ಟದಾಗಿತ್ತು’ ಎಂದು ವರ್ಣಿಸುವ ಹಾಗೂ ‘ಇದನ್ನು ಮಾಡಿದವರು ಜಗತ್ತಿನ ಜನಸಂಖ್ಯೆಯಲ್ಲಿ ಐದನೆಯ ಒಂದು ಭಾಗದಷ್ಟಿರುವ ಮೂಲಭೂತವಾದಿ ಹಿಂದೂಗಳು’ ಎನ್ನುವ ಮಾತುಗಳನ್ನು 2007ರಲ್ಲಿ ಸೇರಿಸಲಾಯಿತು. ಎಳೆ ಭಾರತೀಯರಿಗೆ ಕಾಕಗಳಿಂದ ‘ಸೆಕ್ಯೂಲರಿಸಂ’ನ ಬೋಧನೆ ಹೀಗೆ! ಗುಜರಾತ್ ಹಿಂಸಾಚಾರಕ್ಕೆ ಕಾರಣವಾದದ್ದು ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು. ಸಬರ್​ವುತಿ ಎಕ್ಸ್​ಪ್ರೆಸ್ ಟ್ರೇನಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿ ಐವತ್ತಾರು ಹಿಂದೂಗಳನ್ನು ಜೀವಂತ ಸುಟ್ಟ ಅಮಾನುಷ ಪ್ರಕರಣವದು. ಈ ಬಗ್ಗೆ ಕಾಕ ಇತಿಹಾಸಕಾರರು ಬರೆದ ಇತಿಹಾಸ ಪಠ್ಯಪುಸ್ತಕದಲ್ಲಿ ಒಂದಕ್ಷರವೂ ಇಲ್ಲ!

ಕಾಕ ಸಮಾಜವಿಜ್ಞಾನಿಗಳ ಗರಡಿಯಲ್ಲಿ ತಯಾರಾದ, ಕಾಂಗ್ರೆಸ್ ಶಾಸನದ ಫಲಾನುಭವಿಗಳಾದ ಪತ್ರಕರ್ತ-ಪತ್ರಕರ್ತೆಯರು 2002ರ ಗೋಧ್ರೋತ್ತರ ಹಿಂಸಾಚಾರದ ಬಗ್ಗೆ ಏಕಮುಖ ವರದಿಗಳನ್ನು ಮಾಡಿದ್ದು ಈಗ ಜಗಜ್ಜಾಹೀರಾಗಿದೆ. ಭಾರತೀಯ ಮಾಧ್ಯಮಗಳ ಮೇಲಿನ ಸೀಮಿತವಾಗಿದ್ದ ವಿದೇಶಿ ಕ್ರಿಶ್ಚಿಯನ್ ಸಂಸ್ಥೆಗಳ ಹಿಡಿತ ಕಳೆದೆರಡು ದಶಕಗಳಲ್ಲಿ ಅಪಾಯಕಾರಿ ಎನ್ನುವಷ್ಟು ಮಟ್ಟಿಗೆ ವಿಸ್ತಾರಗೊಂಡಿತು. ಹಾಗೆಯೇ ಎಡಪಂಥೀಯ ಸಂಘಟನೆಗಳೂ ತಮ್ಮ ಹಿಡಿತವನ್ನು ಬಲಗೊಳಿಸತೊಡಗಿದವು. ಹೀಗೆ ಕ್ರಿಶ್ಚಿಯನ್ ಮತ್ತು ಎಡಪಂಥದ ಸಂಬಂಧದ ಪರಿಣಾಮವಾಗಿ ಹಿಂದೂ ಹಣಿಯುವಿಕೆ ಎಲ್ಲ ಮಿತಿಗಳನ್ನೂ ದಾಟಿತು.

ಇದರ ಕೆಲವು ಸ್ಯಾಂಪಲ್​ಗಳಿವು-

 • ಗುಜರಾತ್​ನ ಡಾಂಗ್ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಆದಿವಾಸಿಗಳನ್ನು ಮತಾಂತರಿಸಿದ್ದು ಸುದ್ದಿಯಾಗುವುದಿಲ್ಲ. ಅದೇ ಆದಿವಾಸಿಗಳನ್ನು ಹಿಂದೂ ಸಂಘಟನೆಗಳು ಮಾತೃಧರ್ಮಕ್ಕೆ ಕರೆತಂದಿದ್ದು ಸುದ್ದಿಯಾಗುತ್ತದೆ.
 • ಒಡಿಶಾದಲ್ಲಿ ಆಸ್ಟ್ರೇಲಿಯನ್ ಮಿಷನರಿ ಗ್ರಹಾಂ ಸ್ಟೈನ್ ಮತ್ತವನ ಮಕ್ಕಳ ಸಜೀವ ದಹನ (ಇದು ಅಕ್ಷಮ್ಯ ಅಪರಾಧ) ಅಂತಾರಾಷ್ಟ್ರೀಯ ಸುದ್ದಿಯಾಗುತ್ತದೆ. ಆದರೆ ಈ ಕರಾಳ ಕೃತ್ಯಕ್ಕೆ ಪ್ರೇರಣೆಯಾದ ಮತಾಂತರ ಕಾರ್ಯಯೋಜನೆಗಳು ಸುದ್ದಿಯಾಗುವುದಿಲ್ಲ. ಅಷ್ಟೇ ಅಲ್ಲ,
 • ಸ್ಟೈನ್ಸ್ ಹತ್ಯೆಯಲ್ಲಿ ಪ್ರಮುಖನೆಂದು ಹೇಳಲಾಗುವ ದಾರಾ ಸಿಂಗ್​ನನ್ನು ಏಳು ವರ್ಷಗಳ ನಂತರ ಕ್ರಿಶ್ಚಿಯನ್ ಮಿಷನರಿಗಳು ಮತಾಂತರಿಸಿದ್ದು ಸುದ್ದಿಯಾಗುವುದೇ ಇಲ್ಲ.
 • ಸ್ಟೈನ್ಸ್ ದುರಂತ ಸಂಭವಿಸಿದ ಸಮಯದಲ್ಲೇ ಒಡಿಶಾದಲ್ಲಿ ಕ್ರಿಶ್ಚಿಯನ್ ಯುವತಿ ಅತ್ಯಾಚಾರಕ್ಕೀಡಾದ ಪ್ರಕರಣ ದೊಡ್ಡದಾಗಿ ವರದಿಯಾಯಿತು. ಸ್ಟೈನ್ಸ್ ಹತ್ಯೆ ಮಾಡಿದವರೇ ಇದರಲ್ಲೂ ಭಾಗಿಯಾಗಿರಬಹುದೆಂದು ಮಾಧ್ಯಮಗಳು ಪೈಪೋಟಿಯಲ್ಲಿ ಊಹಾಪೋಹ ಹಬ್ಬಿಸತೊಡಗಿದವು. ಆದರೆ ಅತ್ಯಾಚಾರಿ ಆ ಯುವತಿಯ ಸೋದರಮಾವನೇ ಎನ್ನುವುದು ಎರಡೇ ದಿನಗಳಲ್ಲಿ ಬಯಲಾಯಿತು. ಇದು ಒಳಪುಟದಲ್ಲೆಲ್ಲೋ ಮೂರು ಸಾಲಿನ ಸುದ್ದಿಯಾಯಿತಷ್ಟೇ.
 • ಕರ್ನಾಟಕ ಮತ್ತು ಗೋವಾದಲ್ಲಿ ಚರ್ಚ್​ಗಳ ಮೇಲೆ ದಾಳಿಗಳಾದವು. ಅವುಗಳನ್ನು ಎಸಗಿದವರು ‘ಹಿಂದೂ ಸಂಘಟನೆಗಳು’ ಎಂದು ಮಾಧ್ಯಮಗಳು ಹೇಳಿದವು. ಆದರೆ ಅವುಗಳ ಹಿಂದೆ ಇದ್ದದ್ದು ಪಾಕ್ ಪರ ಮುಸ್ಲಿಂ ಉಗ್ರಗಾಮಿಗಳು ಎಂಬ ಸತ್ಯ ತನಿಖೆಯಿಂದ ಹೊರಬಂತು. ಅದು ಸುದ್ದಿಯಾಗಲೇ ಇಲ್ಲ.
 • 2015ರಲ್ಲಿ ಪಶ್ಚಿಮ ಬಂಗಾಳದಲ್ಲಿ 74 ವರ್ಷದ ಕ್ರಿಶ್ಚಿಯನ್ ಸಂನ್ಯಾಸಿನಿ ಮೇಲೆ ಅತ್ಯಾಚಾರವಾಯಿತು. ಅದನ್ನು ‘ಮತಾಂತರ-ವಿರೋಧಿ’ ಹಿಂದೂಗಳ ಮೇಲೆ ಹೊರಿಸಿ ಕೆಲ ಮಾಧ್ಯಮಗಳು ಕೂಗಿದ್ದೇ ಕೂಗಿದ್ದು. ಆದರೆ, ಅತ್ಯಾಚಾರಿ ಮಹಮದ್ ಸಲೀಮ್ ಎಂಬ ಬಾಂಗ್ಲಾದೇಶಿ ಎಂಬ ಸತ್ಯ ತನಿಖೆಯಿಂದ ಹೊರಬರುತ್ತಿದ್ದಂತೇ ಎಲ್ಲವೂ ಗಪ್​ಚುಪ್!
 • 2016ರ ದೀಪಾವಳಿ ಸಂದರ್ಭದಲ್ಲಿ ದೆಹಲಿಯಲ್ಲಿ ಜುನೈದ್ ಎಂಬ ಯುವಕ ಗೋಮಾಂಸ ಹೊಂದಿದ್ದಕ್ಕಾಗಿ ಅವನನ್ನು ಚಲಿಸುತ್ತಿದ್ದ ರೈಲಿನಲ್ಲಿ ಕೊಲ್ಲಲಾಯಿತು ಎಂದು ಮಾಧ್ಯಮ ಕೂಗುಹಾಕಿತು. ತನಿಖೆಯಲ್ಲಿ ತಿಳಿದದ್ದು ಜುನೈದ್ ಹತ್ಯೆಯಾದದ್ದು ಬೋಗಿಯಲ್ಲಿ ಸೀಟ್​ಗಾಗಿ ನಡೆದ ಜಗಳ ವಿಕೋಪಕ್ಕೆ ಹೋದದ್ದರಿಂದಾಗಿ.
 • ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜಧಾನಿಯ ಹಲವಾರು ಚರ್ಚ್​ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ, ಕಳ್ಳತನವಾಗುತ್ತದೆ. ಹಿಂದೂ ಸಂಘಟನೆಗಳ ಮೇಲೆ ಅಪವಾದಗಳ ಸುರಿಮಳೆಯಾಗುತ್ತದೆ. ತನಿಖೆ ನಂತರ ತಿಳಿಯುವುದೇನೆಂದರೆ, ಚರ್ಚ್​ಗಳಲ್ಲಿನ ದುಷ್ಕೃತ್ಯಗಳ ಹಿಂದಿದ್ದದ್ದು ಒಳಗಿನ ಅತೃಪ್ತ ಆತ್ಮಗಳೇ. ಅಷ್ಟೇ ಅಲ್ಲ, ಗುರುದ್ವಾರ, ಮಸೀದಿ, ಮಂದಿರಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ, ಕಳ್ಳತನಗಳಾಗಿವೆ. ಅವೂ ಸುದ್ದಿಯಾಗಲಿಲ್ಲ. ಒಟ್ಟಿನಲ್ಲಿ, ಸೋನಿಯಾರ ಸರ್ಕಾರವಾಗಲೀ, ಕಾಕ ಇತಿಹಾಸಕಾರರಾಗಲೀ ಹಿಂದೂಗಳ ಬಗ್ಗೆ ಇದುವರೆಗೆ ಮಾಡಿದ ಒಂದು ಆಪಾದನೆಯೂ ತನಿಖೆಯಲ್ಲಿ, ನ್ಯಾಯಾಲಯ ನಡೆಸಿದ ಸತ್ಯದ ಪರೀಕ್ಷೆಯಲ್ಲಿ ಜಯ ಗಳಿಸಿಲ್ಲ. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಮಂತ್ರಿಯ ಸ್ಥಾನ ಕಳೆದುಕೊಂಡದ್ದಕ್ಕೆ ನಿಜವಾದ ಕಾರಣ ಪೌರತ್ವದ ಪ್ರಶ್ನೆ. ಆದರೆ ‘ಅಂತರಾತ್ಮ’ದ ಮಾತು ಕೇಳಿ ತಾವಾಗಿಯೇ ಅಧಿಕಾರ ತ್ಯಜಿಸಿದ್ದಾಗಿ ಸೋನಿಯಾ ಹೇಳಿಕೊಂಡರು. ಆ ‘ಅಂತರಾತ್ಮ’ ಇನ್ನೂ ಕಿಂಚಿತ್ತಾದರೂ ಜೀವ ಉಳಿಸಿಕೊಂಡಿದ್ದರೆ ಕಾಂಗ್ರೆಸ್ ನಾಯಕಿ ಇಂದು ಇಡೀ ಹಿಂದೂ ಸಮಾಜದ ಮುಂದೆ ಕ್ಷಮಾಪಣೆ ಕೇಳಬೇಕು, ಅವರನ್ನು ಕಾಕ ಇತಿಹಾಸಕಾರರು, ಸಾಹಿತಿಗಳು, ವಿಚಾರವಾದಿಗಳು ಮತ್ತು ಪತ್ರಕರ್ತರು ಅನುಸರಿಸಬೇಕು.

(ಈ ಲೇಖನ ಸರಣಿ ಇಲ್ಲಿಗೆ ಮುಕ್ತಾಯ)

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

4 Replies to “ಅಂತರಾತ್ಮವಿರುವವರು ಹಿಂದೂಗಳ ಕ್ಷಮೆ ಕೇಳಲಿ”

 1. Congee party always target hindus because of mentally retarded presidents of congress.thats the reason they got 44 seats in all over India.karma always follows you.

 2. Can you please tell me how to refer 1,2 & 3 series… I have read 4th and this is 5th… please

 3. ಹೌದು ಅವರು ಸದಾ ನಮ್ಮನ್ನು ಅವಮಾನ ಮಾಡುತ್ತಲೇ ಬಂದಿರುವ ಮುಟ್ಟಾಳರು .

 4. A well written article about Hindus and its down vfall by Islamic supported false Gandhis wolf in disguise. To preserve Hinduism and Hindus all should raise above caste and support Modi the protector of Hindus . I vote Modi. Do you want to vote against dynasty rule then vote Modi because you don’t have to worry for five years after voting Modi. Hindustani vote Hinduism

Comments are closed.