ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದವರು ಮತ ಚಲಾಯಿಸಬಹುದು: ಸಿಇಒ

ನವದೆಹಲಿ: ಅಸ್ಸಾಂ ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ಬಿಡುಗಡೆ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ನಂತರ ಚುನಾವಣೆ ಆಯುಕ್ತ ಒ.ಪಿ.ರಾವತ್‌ ಇದೀಗ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಸ್ಸಾಂ ನಾಗರಿಕರ ಪಟ್ಟಿಯಿಂದ ಹೊರಗುಳಿದವರು ಕೂಡ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ ಮತ ಚಲಾಯಿಸಬಹುದು. ಅಲ್ಲದೆ ಮುಂಬರುವ ಜನವರಿಯಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಅಂತಿಮ ಎನ್‌ಆರ್‌ಸಿ ಪಟ್ಟಿಗೆ ಕಾಯುವ ಅಗತ್ಯವಿಲ್ಲ ಎಂದಿದ್ದಾರೆ.

ಸೋಮವಾರವಷ್ಟೇ ಎನ್ಆರ್​ಸಿಯ ಎರಡನೇ ಮತ್ತು ಅಂತಿಮ ಕರಡು ಪ್ರಕಟವಾಗಿದ್ದು, ಅಸ್ಸಾಂನ 3.29 ಕೋಟಿ ಅರ್ಜಿಗಳಲ್ಲಿ 2.89 ಕೋಟಿ ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಿ ಪ್ರಕಟಿಸಲಾಗಿತ್ತು. ಉಳಿದಂತೆ ಸುಮಾರು 40.07 ಲಕ್ಷ ಅಭ್ಯರ್ಥಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಕುರಿತಂತೆ ಭಾರಿ ಚರ್ಚೆಗೂ ಕಾರಣವಾಗಿತ್ತು. ವಿಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಮತಕ್ಕಾಗಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದವು. (ಏಜೆನ್ಸೀಸ್)