ಗುಜರಾತ್​, ಮುಜಾಫರ್​ ನಗರ ಗಲಭೆ ಹಿಂದಿನ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕು: ಕೇಜ್ರಿವಾಲ್​

ನವದೆಹಲಿ: 1984ರ ಸಿಖ್​​ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಮುಖಂಡ ಸಜ್ಜನ್​ ಕುಮಾರ್​ ವಿರುದ್ಧ ಹೈಕೋರ್ಟ್​ ನೀಡಿದ ತೀರ್ಪನ್ನು ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಅವರು ಸ್ವಾಗತಿಸಿದ್ದು, 2002ರ ಗುಜರಾತ್​ ಹಾಗೂ 2013ರ ಮುಜಾಫರ್​ ನಗರ ಗಲಭೆ ಹಿಂದಿರುವ ದುಷ್ಕರ್ಮಿಗಳಿಗೂ ಶಿಕ್ಷೆಯಾಗಬೇಕೆಂದು ತಿಳಿಸಿದ್ದಾರೆ.

ತೀರ್ಪಿನ ಬಗ್ಗೆ ಮಂಗಳವಾರ ಮಾತನಾಡಿ, 34 ವರ್ಷದ ನಂತರ ಸಿಖ್​ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ. ಗಲಭೆಯಲ್ಲಿ ತೊಡಗಿಕೊಂಡಿದ್ದ ಇತರೆ ಪ್ರಭಾವಿ ವ್ಯಕ್ತಿಗಳಿಗೂ, ಗುಜರಾತ್​ ಮತ್ತು ಮುಜಾಫರ್​ ನಗರ ಗಲಭೆ ಹಿಂದಿನ ದುಷ್ಕರ್ಮಿಗಳಿಗೂ ಶಿಕ್ಷೆ ಆಗುತ್ತದೆ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಸೋಮವಾರ ತೀರ್ಪು ಹೊರ ಬೀಳುತ್ತಿದ್ದಂತೆ ಕೇಜ್ರಿವಾಲ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಅಧಿಕಾರದಲ್ಲಿದ್ದವರಿಂದ ಕೊಲ್ಲಲ್ಪಟ್ಟ ಮುಗ್ಧ ಬಲಿಪಶುಗಳಿಗೆ ಇದೊಂದು ಬಹಳ ದೀರ್ಘವಾದ ನೋವಿನ ನಿರೀಕ್ಷೆಯಾಗಿದೆ ಎಂದು ತೀರ್ಪನ್ನು ಸ್ವಾಗತಿಸಿದ್ದರು. ಅಲ್ಲದೆ, ಗಲಭೆಯಲ್ಲಿ ತೊಡಗಿಸಿಕೊಳ್ಳದ ಯಾವುದೇ ವ್ಯಕ್ತಿಯು ತಪ್ಪಿಸಿಕೊಳ್ಳಲು ಅನುಮತಿ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಿಖ್​ ಗಲಭೆ ಪ್ರಕರಣದಲ್ಲಿ ದೆಹಲಿ ಕೋರ್ಟ್​ ಸಜ್ಜನ್​ ಕುಮಾರ್​ರನ್ನು ತಪ್ಪಿತಸ್ಥ ಎಂದು ನಿರ್ಣಯಿಸಿ ಅಪರಾಧಿಗೆ ಜೀವವಾಧಿ ಶಿಕ್ಷೆಯನ್ನು ವಿಧಿಸಿದೆ. ಇತರೆ ಇಬ್ಬರು ಅಪರಾಧಿಗಳಿಗೂ 3 ವರ್ಷದಿಂದ 10 ವರ್ಷಗಳವರೆಗೆ ಶಿಕ್ಷೆಯನ್ನು ವಿಸ್ತರಿಸಿದೆ. (ಏಜೆನ್ಸೀಸ್​)

ಕಾಂಗ್ರೆಸ್​ಗೆ ದಂಗೆ ಕಳಂಕ

ಸಿಖ್​ ವಿರೋಧಿ ಗಲಭೆ ಪ್ರಕರಣ: ಕಾಂಗ್ರೆಸ್​ ಮುಖಂಡ ಸಜ್ಜನ್​ಕುಮಾರ್​ಗೆ ಜೀವಾವಧಿ ಶಿಕ್ಷೆ