ಕುಖ್ಯಾತ ಚೋರರ ಬಂಧನ

ಮಂಗಳೂರು/ಮೂಲ್ಕಿ: ವಾಹನ, ಮನೆ ಹಾಗೂ ದೈವಸ್ಥಾನಗಳಲ್ಲಿ ಕಳವು ನಡೆಸುತ್ತಿದ್ದ ಅಂತಾರಾಜ್ಯ ಕಳ್ಳರ ತಂಡದ ಇಬ್ಬರನ್ನು ಮೂಲ್ಕಿ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ ೪೦ ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಕಾರ್ನಾಡು ಗ್ರಾಮದ ಕೊಳ್ನಾಡು ಕೆ.ಎಸ್ ರಾವ್ ನಗರದ ಸವಾದ್ ಯಾನೆ ಚವ್ಚಾ ಕರಿಮಣಿ(೨೪) ಹಾಗೂ ತೋಕೂರು ಗ್ರಾಮ ಸುಬ್ರಹ್ಮಣ್ಯ ದೇವಸ್ಥಾನ ಬಳಿ ನಿವಾಸಿ ಮೊಹಮ್ಮದ್ ಸಿನಾನ್(೧೯) ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿರುವ ಕಾರ್ನಾಡು ನಿವಾಸಿ ಹಿಯಾಜ್ ಸೇರಿದಂತೆ ಇತರರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಆರೋಪಿಗಳಿಂದ ಗೋವಾದಲ್ಲಿ ಕಳವು ಮಾಡಿದ ನೋಂದಣಿ ಸಂಖ್ಯೆ ಅಳವಡಿಸದ ಪಾರ್ಚುನರ್ ಕಾರು, ಎರಡು ಬುಲೆಟ್ ಬೈಕ್ ಹಾಗೂ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕದಿಕೆ, ಸಂತೆಕಟ್ಟೆ ಕಡೆಗಳಲ್ಲಿ ಮನೆ ಹಾಗೂ ದೈವಸ್ಥಾನ ಕಳ್ಳತನ ಮಾಡಿದ ಚಿಲ್ಲರೆ ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಪಿಕ್‌ಅಪ್ ವಾಹನ, ಎರಡು ಬೈಕ್, ಮೂರು ಮೊಬೈಲ್‌ಗಳನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.

ಐಷಾರಾಮಿ ಜೀವನ: ಆರೋಪಿಗಳು ಕಳ್ಳತನ ಮಾಡಿದ ಸೊತ್ತುಗಳನ್ನು ಮಾರಾಟ ಮಾಡಿ ಲಭಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ದುಬಾರಿ ಬೆಲೆಯ ಕಾರು, ಬೈಕ್‌ಗಳನ್ನೇ ಕಳ್ಳತನ ಮಾಡುತ್ತಿದ್ದರು. ಹಲವು ದೈವಸ್ಥಾನಗಳಿಂದಲೂ ಕಳ್ಳತನ ಮಾಡಿರುವುದನ್ನು ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ನಿರ್ದೇಶನದಂತೆ ಉತ್ತರ ವಿಭಾಗ ಎಸಿಪಿ ಶ್ರೀನಿವಾಸ ಆರ್.ಗೌಡ ನೇತೃತ್ವದಲ್ಲಿ ಮೂಲ್ಕಿ ಇನ್‌ಸ್ಪೆಕ್ಟರ್ ಸತೀಶ್, ಸಿದ್ದರಾಜು, ಪಿಎಸ್‌ಐ ಶೀತಲ್ ಆಲಗೂರ, ಎಎಸ್‌ಐ ಚಂದ್ರಶೇಖರ್, ಹೆಡ್ ಕಾನ್ಸ್‌ಟೆಬಲ್‌ಗಳಾದ ತಾರನಾಥ, ಧರ್ಮೇಂದ್ರ, ಚಂದ್ರಶೇಖರ್, ಪ್ರಮೋದ್, ಮಹೇಶ್, ಸೌಮ್ಯಾ, ಸಿಬ್ಬಂದಿ ಸುರೇಶ್, ರಾಜೇಶ್, ಮೊಹಮ್ಮದ್ ಹುಸೇನ್, ಅಣ್ಣಪ್ಪ, ಸಂದೀಪ್, ಧರ್ಮರಾಯ, ಹನುಮಂತ, ಬಸವರಾಜ, ಸತೀಶ್, ರೋಹಿತ್, ಧನರಾಜ್, ರಂಗನಗೌಡ, ರಮೇಶ್, ಶರೀಫ್, ನದಾಫ್, ವಿದೀಪ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಊಹಾಪೋಹಗಳಿಗೆ ತೆರೆ: ಅವಿಭಜಿತ ದ.ಕ ಜಿಲ್ಲೆಯ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾಗಿರುವ ನಾಲ್ವರ ತಂಡವನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಹಗಲುಹೊತ್ತು ಶ್ರೀಮಂತರಂತೆ ಐಷಾರಾಮಿ ಕಾರುಗಳಲ್ಲಿ ಸುತ್ತಾಡುವ ಚೋರರು, ಜನ ಸಂಚಾರವಿಲ್ಲದ ಪ್ರದೇಶ ಮತ್ತು ಜನರಿಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿ ರಾತ್ರಿ ಕಳ್ಳತನ ಮಾಡುತ್ತಿದ್ದು, ಮೂಲ್ಕಿಯ ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಈ ತಂಡದಲ್ಲಿ ಶಾಮೀಲಾಗಿರುವ ಬಗ್ಗೆ ಆರೋಪಿಗಳ ಚಿತ್ರ ಸಹಿತ ಮಾಹಿತಿ ಬಿತ್ತರವಾಗಿತ್ತು. ಆದರೆ ಪೊಲೀಸ್ ಮೂಲಗಳು ಇದನ್ನು ಖಚಿತಪಡಿಸಿರಲಿಲ್ಲ.

Leave a Reply

Your email address will not be published. Required fields are marked *