ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಹಾಗೂ ಬೆನ್ನೆಲುಬುಗಳು ಬಲಿಷ್ಠವಾಗಲು ಉಪಯುಕ್ತವಾದ ಯೋಗಾಸನ, ‘ಪೂರ್ಣ ಧನುರಾಸನ’. ಧನುಸ್ ಎಂದರೆ ಬಿಲ್ಲು ಎಂದರ್ಥ. ಈ ಆಸನದಲ್ಲಿ ಬೆನ್ನು ಬಿಲ್ಲಿನಂತೆ ಬಾಗಿರುತ್ತದೆ. ಹೊಟ್ಟೆಯ ಆಧಾರದಲ್ಲಿ ಅಭ್ಯಾಸ ಮಾಡುವ ಆಸನ ಇದಾಗಿದೆ.
ಉಪಯೋಗಗಳು: ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ. ಹೊಟ್ಟೆಯ ಕೊಬ್ಬು ಕರಗುತ್ತದೆ. ಬೆನ್ನು ನೋವು ಪರಿಹಾರಕ್ಕೆ ಈ ಆಸನವು ಉಪಕಾರಿಯಾಗಿದೆ. ಈ ಆಸನದಲ್ಲಿ ದೇಹದ ಹೊಕ್ಕುಳಿನ ಭಾಗಕ್ಕೆ ಚೆನ್ನಾಗಿ ರಕ್ತ ಪರಿಚಲನೆಯಾಗುತ್ತದೆ. ಪೂರ್ಣ ಧನುರಾಸನ ಅಭ್ಯಾಸದಿಂದ ಆಲಸ್ಯ ನಿವಾರಣೆಯಾಗುತ್ತದೆ. ಲಿವರ್ ಭಾಗಕ್ಕೆ ಮೃದುವಾದ ಮಸಾಜ್ ದೊರಕಿ, ಮಧುಮೇಹ ನಿಯಂತ್ರಣವಾಗುತ್ತದೆ. ಬೆನ್ನೆಲುಬುಗಳು ಬಲಗೊಳ್ಳುತ್ತವೆ. ಥೈರಾಯ್ಡ್ ಮತ್ತು ಅಡ್ರಿನಲ್ ಗ್ರಂಥಿಗಳು ಪುನಶ್ಚೇತನಗೊಳ್ಳುತ್ತವೆ.
ಇದನ್ನೂ ಓದಿ: ಜೊಮ್ಯಾಟೊದಿಂದ ಇನ್ನುಮುಂದೆ ಈ ಸೇವೆ ಇರುವುದಿಲ್ಲ; ಸೆ.17ರಿಂದಲೇ ಅನ್ವಯ..
ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಮೊದಲು ಕೆಳಮುಖ ಮಾಡಿ, ಹೊಟ್ಟೆಯನ್ನು ನೆಲಕ್ಕೆ ತಾಗಿಸಿ ಉದ್ದಕ್ಕೂ ಮಲಗಬೇಕು. ಕಾಲುಗಳನ್ನು ಜೋಡಿಸಿ ಕೈಗಳನ್ನು ಹಿಂದಕ್ಕೆ ತರುವುದು. ಉಸಿರನ್ನು ಹೊರಕ್ಕೆ ಬಿಟ್ಟು, ಮೊಣಕಾಲುಗಳನ್ನು ಬಗ್ಗಿಸಿ ಕೈಗಳಿಂದ ಆಯಾ ಕಾಲಿನ ಹೆಬ್ಬೆರಳುಗಳನ್ನು ಹಿಡಿದು, ಉಸಿರನ್ನು ತೆಗೆದುಕೊಳ್ಳುತ್ತಾ ಕಾಲುಗಳನ್ನು ಎಳೆದುಕೊಂಡು ಬೆನ್ನನ್ನು ಬಿಲ್ಲಿನಂತೆ ಬಾಗಿಸಬೇಕು. ತೋಳುಗಳನ್ನು ನೇರವಾಗಿಸಬೇಕು ಹಾಗೂ ತೋಳುಗಳು ಕಿವಿಗೆ ಒತ್ತಿರುವಂತೆ ಪ್ರಯತ್ನಿಸಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಾ, ಕಾಲು ನಿಮಿಷದಿಂದ ಒಂದು ನಿಮಿಷ ಇರಬೇಕು. ಅನಂತರ ಕೈಕಾಲುಗಳನ್ನು ಕೆಳಗಿಳಿಸಿ ಮಕರಾಸನದಲ್ಲಿ ವಿಶ್ರಾಂತಿ ಪಡೆಯಬೇಕು.
ಇದು ಸ್ವಲ್ಪ ವೃತ್ತಾಕಾರದ ಭಂಗಿಯಾಗಿದ್ದು, ಹೆದೆಯೇರಿಸಿದ ಬಿಲ್ಲಿನಂತೆ ಭಾಸವಾಗುತ್ತದೆ. ಪೂರ್ಣ ಧನುರಾಸನ ಭಂಗಿಯು ಸಮರ್ಪಕವಾಗಿ ಬರಬೇಕಾದರೆ, ಆರಂಭದಲ್ಲಿ ಧನುರಾಸನವನ್ನು ಚೆನ್ನಾಗಿ ಕಲಿತಿರಬೇಕು. ಯೋಗ ಶಿಕ್ಷಕರ ನೆರವಿನೊಂದಿಗೆ ಈ ಆಸನವನ್ನು ಕಲಿಯಬೇಕು. ತೀವ್ರ ಸೊಂಟ ನೋವು, ಕುತ್ತಿಗೆ ನೋವು ಇದ್ದವರು ಈ ಆಸನ ಅಭ್ಯಾಸ ಮಾಡಬಾರದು.