ಬೆಂಗಳೂರು: ಕಳೆದ ವರ್ಷ ಬಿಸಿಲಿನ ಝುಳಕ್ಕೆ ಬಳಲಿ ಬೆಂಡಾಗಿದ್ದ ಕರುನಾಡು, ಈ ವರ್ಷವೂ ಅಧಿಕ ತಾಪಮಾನ ಎದುರಿಸಲು ಅಣಿಯಾಗಬೇಕಿದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3-4 ಡಿ.ಸೆ.ಉಷ್ಣಾಂಶ ಹೆಚ್ಚಳವಾಗಲಿದ್ದು, ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ಕೊಟ್ಟಿದೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಮಾರ್ಚ್ನಿಂದ ಆರಂಭವಾಗಿ ಮೇ ವರೆಗೆ ಇರಲಿದೆ. ಆದರೆ, ಈ ಬಾರಿ ವಾಡಿಕೆಗೂ ಮುನ್ನವೇ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲೇ ಅಧಿಕವಾಗಲಿದೆ.
ಅಧಿಕ ತಾಪಮಾನ ಸಾಧ್ಯತೆ?: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿ.ಸೆ. ಹೆಚ್ಚು ಉಷ್ಣಾಂಶ ವರದಿಯಾಗಲಿದೆ. ರಾಜ್ಯದ ಶೇ.90 ಪ್ರದೇಶ ಬಿಸಿಲಿನ ತಾಪಕ್ಕೆ ನಲುಗಲಿವೆ. ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಗಿಂತ ಹೆಚ್ಚು ಉಷ್ಣಾಂಶ ದಾಖಲಾದರೆ ಶಾಖ ಅಲೆ ಎಂದು ಕರೆಯಲಾಗುತ್ತದೆ. ಆರು ವರ್ಷಗಳಿಂದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದೆ.
ಜನವರಿ ಅತಿ ಉಷ್ಣತೆ ತಿಂಗಳು: ಜನವರಿ ಜಗತ್ತಿನ ದಾಖಲಿತ ಅತಿ ಉಷ್ಣತೆಯ ಮಾಸವಾಗಿತ್ತು ಎಂದು ಐರೋಪ್ಯ ಒಕ್ಕೂಟದ ವಿಜ್ಞಾನಿಗಳು ಹೇಳಿದ್ದಾರೆ. ಈ ಮೂಲಕ ಅತಿಯಾದ ಜಾಗತಿಕ ತಾಪಮಾನ ಪ್ರವೃತ್ತಿ ಮುಂದುವರಿದಿದೆ ಎಂದು ಐರೋಪ್ಯ ಒಕ್ಕೂಟದ ಕೊಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸಸ್ (ಸಿ3ಎಸ್) ವಿಜ್ಞಾನಿಗಳು ಗುರುವಾರ ತಿಳಿಸಿದ್ದಾರೆ. ಕಳೆದ 19 ತಿಂಗಳಲ್ಲಿ 18 ತಿಂಗಳು 1.5 ಡಿಗ್ರಿ ಸೆಲ್ಶಿಯಸ್ಗಿಂತಲೂ ಅಧಿಕ ಸರಾಸರಿ ಜಾಗತಿಕ ತಾಪಮಾನ ದಾಖಲಾಗಿ ಅಸಾಧಾರಣ ಉಷ್ಣ ವಾತಾವಾರಣ ಮುಂದುವರಿದಿತ್ತು ಎಂದು ವಿವರಿಸಿದ್ದಾರೆ.
ಹೆಚ್ಚಳಕ್ಕೆ ಕಾರಣ?: ಮಣ್ಣಿನಲ್ಲಿ ತೇವಾಂಶ ಕೊರತೆ, ಕೆರೆ- ಕುಂಟೆಗಳಲ್ಲಿ ನೀರು ಬರಿದಾಗುವುದು, ತೇವಾಂಶ ಭರಿತ ಮೋಡ ಇಲ್ಲದಿರುವುದು, ಅರಣ್ಯ ನಾಶ, ಪಳೆಯುಳಿಕೆ ಇಂಧನ ಸುಡುವುದು, ತಗ್ಗದ ಎಲ್-ನಿನೋ ಪ್ರಭಾವ, ಕರ್ನಾಟಕದ ಹೆಚ್ಚಿನ ಭಾಗಗಳು ಶುಷ್ಕ, ಅರೆ ಶುಷ್ಕ ಸ್ಥಿತಿ.
ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಕಾರವಾರ, ಕಲಬುರಗಿ, ಗದಗ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗಾಗಲೇ ವಾಡಿಕೆಗಿಂತ 2-3 ಡಿ. ಸೆ. ಅಧಿಕ ತಾಪಮಾನ ದಾಖಲಾಗುತ್ತಿದೆ. ಪ್ರಸಕ್ತ ತಿಂಗಳ 2ನೇ ಅಥವಾ 3ನೇ ವಾರ ಬೇಸಿಗೆ ಶುರುವಾಗುವ ಸಾಧ್ಯತೆ ಇದೆ. ಈ ಬಾರಿ 4 ತಿಂಗಳು ಬಿಸಿಲು ಇರಲಿದೆ.
| ಸಿ.ಎಸ್.ಪಾಟೀಲ್ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ
Team India ಆಲ್ರೌಂಡ್ ಪ್ರದರ್ಶನಕ್ಕೆ ನಲುಗಿದ ಆಂಗ್ಲರು; ಮೊದಲ ಏಕದಿನದಲ್ಲಿ ಭಾರತಕ್ಕೆ ಸುಲಬ ತುತ್ತಾದ ಇಂಗ್ಲೆಂಡ್
ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad