More

    ಈ ಬಾರಿ ಹಸಿರು ದೀಪಾವಳಿ: ಕರೊನಾ ಸೋಂಕು ತಡೆಗಾಗಿ ಈ ವರ್ಷ ಪಟಾಕಿ ನಿಷೇಧ

    ಬೆಂಗಳೂರು: ಕರೊನಾದ ಕರಿಛಾಯೆಯಿಂದಾಗಿ ಕರ್ನಾಟಕ ಈ ಬಾರಿ ಹಸಿರು ದೀಪಾವಳಿಯಲ್ಲಿ ಬೆಳಗಲಿದೆ. ಕರೊನಾ ಸೋಂಕು ಹರಡಬಹುದೆಂಬ ಹಿನ್ನೆಲೆಯಲ್ಲಿ ಮಾಲಿನ್ಯಕಾರಕವಲ್ಲದ ಹಸಿರು ಪಟಾಕಿ ಹೊರತುಪಡಿಸಿ ಉಳಿದ ಸಿಡಿಮದ್ದುಗಳನ್ನು ಸಿಡಿಸುವುದನ್ನು ಈ ವರ್ಷಕ್ಕೆ ಸೀಮಿತವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಶುಕ್ರವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ನಿಷೇಧಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಜತೆಗೆ ರ್ಚಚಿಸಿ ಶೀಘ್ರ ಆದೇಶ ಹೊರಡಿಸಲಾಗುವುದು ಎಂದರು. ಕರೊನಾ ಪಿಡುಗಿನಿಂದ ಜನರ ಜೀವ-ಜೀವನ ರಕ್ಷಿಸುವುದು ಮುಖ್ಯ. ಪಟಾಕಿ ಹೊಗೆಯಿಂದ ಸಮಸ್ಯೆಯಾಗುವ ಆತಂಕವಿದೆ. ಹೀಗಾಗಿ ಪಟಾಕಿಗಳನ್ನು ನಿಷೇಧಿಸಲಾಗುವುದೆಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

    ತಜ್ಞರ ಸಲಹೆಗೆ ಮನ್ನಣೆ: ಪಟಾಕಿ ಸಿಡಿಸಿದ ಬಳಿಕ ಅದರ ಹೊಗೆಯಿಂದ ರೊನಾ ಸೋಂಕು ಹೆಚ್ಚಾಗುವ ಆತಂಕವಿದೆ. ಜತೆಗೆ ಕರೊನಾದಿಂದ ಚೇತರಿಸಿಕೊಂಡವರು, ಶ್ವಾಸಕೋಶ ಸಂಬಂಧಿ ರೋಗಗಳ ಬಾಧಿತರಿಗೂ ಹೊಗೆ ಕಂಟಕವಾಗಲಿದೆ. ಹಬ್ಬದ ಸಡಗರದಲ್ಲಿ ಎಗ್ಗಿಲ್ಲದೆ ಪಟಾಕಿಗಳನ್ನು ಸಿಡಿಸುವುದರಿಂದ ಹೊಗೆ ಹರಡಿ ಮಾಲಿನ್ಯ ಉಲ್ಬಣಿಸುತ್ತದೆ. ಹೀಗಾಗಿ ದೀಪಾವಳಿಯಲ್ಲಿ ಪಟಾಕಿ ನಿಷೇಧ ಸೂಕ್ತ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು.

    ಒಮ್ಮತದ ನಿಲುವು: ಸಿಎಂ ಪಟಾಕಿ ನಿಷೇಧ ಆದೇಶ ಹೊರಡಿಸುವುದಕ್ಕೂ ಮೊದಲು ಕಂದಾಯ ಸಚಿವ ಮತ್ತು ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಆರ್.ಅಶೋಕ್ ಈ ಬಗ್ಗೆ ಸಿಎಂ ಜತೆ ರ್ಚಚಿಸಿ ಪಟಾಕಿ ನಿಷೇಧದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟರು.

    ಹಸಿರು ಪಟಾಕಿ ಎಂದರೇನು?

    • ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುವುದು
    • ಸಿಡಿತದ ಬಳಿಕ ಗಂಧಕ, ನೈಟ್ರೋಜನ್ ಆಕ್ಸೈಡ್ ಪ್ರಮಾಣ ಕಡಿಮೆ
    • ಪೊಟ್ಯಾಷಿಯಮ್ ನೈಟ್ರೇಟ್ ಪ್ರಮಾಣ ಕಡಿಮೆ

    ಕೋವಿಡ್-19 ಜಾಗತಿಕ ಸಾಂಕ್ರಾಮಿಕವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಈ ಸಂದರ್ಭದಲ್ಲಿ ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯವಾಗಲಿದೆ ಮತ್ತು ಇದರಿಂದ ಕರೊನಾ ಹೆಚ್ಚುವ ಅಪಾಯವೂ ಇದ್ದು, ಈ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ ಎಂಬ ಅಂಶವನ್ನು ಪರಿಗಣಿಸಿದ ಸಚಿವ ಅಶೋಕ್, ಮುಂಜಾನೆಯೇ ಅಧಿಕಾರಿಗಳೊಂದಿಗೆ ರ್ಚಚಿಸಿ ಅಗತ್ಯ ಮಾಹಿತಿ ಕಲೆ ಹಾಕಿದರು. ಒಂದೇ ಸಲ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯವಾಗಲಿದೆ. ಇದರಿಂದ ಶ್ವಾಸಕೋಶದ ಮೇಲೆ ಪರಿಣಾಮ ಬೀರಲಿದೆ. ಈ ಮಾಲಿನ್ಯದಿಂದ ಒಂದೆಡೆ ಕೋವಿಡ್ ಹೆಚ್ಚುವ ಅಪಾಯವಿದ್ದರೆ ಮತ್ತೊಂದೆಡೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆ ಕದ ತಟ್ಟ ಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂಬುದನ್ನು ಅಶೋಕ್ ಮನವರಿಕೆ ಮಾಡಿಕೊಟ್ಟಿದ್ದಾರೆ.

    ಪಟಾಕಿ ನಿಷೇಧ ನಿರ್ಧಾರ ಸೂಕ್ತವಾಗಿದೆ. ಇದಕ್ಕೆ ನಾಡಿನ ಜನರು ಸಹಕಾರ ನೀಡಬೇಕು. ಈ ಸಲ ಪಟಾಕಿ ಬಿಟ್ಟು ದೀಪ ಹಚ್ಚಿ ಹಬ್ಬ ಆಚರಿಸೋಣ. ಕರೊನಾ ನಿಯಂತ್ರಣಕ್ಕೆ ಬಂದಿರುವ ಸಂದರ್ಭದಲ್ಲಿ ಮತ್ತೊಂದು ಅನಾಹುತಕ್ಕೆ ಅವಕಾಶ ನೀಡುವುದು ಬೇಡ
    
    ವಿ. ಸೋಮಣ್ಣ, ವಸತಿ ಸಚಿವ

    *ತಜ್ಞರು ಏನಂತಾರೆ?

    ಚಳಿಗಾಲದಲ್ಲಿ ಶ್ವಾಸಕೋಶ ಸೇರಿದಂತೆ ವೈರಲ್ ಸೋಂಕಿನ ಕಾಯಿಲೆ ಹೆಚ್ಚಾಗಿರುತ್ತದೆ. ಅಸ್ತಮಾ, ಬ್ರಾಂಕೈಟಿಸ್ ಸೇರಿದಂತೆ ನೇರ ಶ್ವಾಸಕೋಶ ಸಂಬಂಧಿ ಕಾಯಿಲೆ ಉಲ್ಬಣಾವಸ್ಥೆಯಲ್ಲಿರುತ್ತವೆ. ಪಟಾಕಿಯಿಂದ ವಾಯು ಮಾಲಿನ್ಯ ಹೆಚ್ಚಿ ವೈರಲ್ ಸೋಂಕುಗಳು ಇನ್ನಷ್ಟು ಹೆಚ್ಚಾಗುತ್ತದೆ. ಜತೆಗೆ ವಾಯುಮಾಲಿನ್ಯದಿಂದ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುತ್ತವೆ. ದೇಶದಲ್ಲಿ ವಾಯುಮಾಲಿನ್ಯದಿಂದ ಅತಿ ಹೆಚ್ಚು ಜನ ಸಾವನ್ನಪ್ಪುತ್ತಾರೆ. ಗರ್ಭಿಣಿಯರ ಮೇಲೂ ಪರಿಣಾಮ ಬೀರುವುದರಿಂದ ಹುಟ್ಟುವ ಮಕ್ಕಳ ತೂಕ ಕಡಿಮೆ ಆಗಿರುತ್ತದೆ. ಒಂದೆಡೆ ಕರೊನಾ ಸೋಂಕು, ಇನ್ನೊಂದೆಡೆ ಚಳಿಗಾಲ, ಮತ್ತೊಂದೆಡೆ ಪಟಾಕಿಯಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಕರೊನಾ ಸೋಂಕಿತರ ಮೇಲಂತೂ ವಾಯುಮಾಲಿನ್ಯ ದುಷ್ಪರಿಣಾಮ ಬೀರುತ್ತದೆ. ಅವರ ಆರೋಗ್ಯದಲ್ಲಿ ಸಂಕೀರ್ಣ ಸಮಸ್ಯೆ ತಲೆದೋರಬಹುದು. ಗುಂಪು ಗುಂಪಾಗಿ ಸೇರಿ ಪಟಾಕಿ ಸಿಡಿಸುವುದರಿಂದ ಕರೊನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ದಟ್ಟವಾಗಿರುತ್ತವೆ. ಈ ಕಾರಣದಿಂದ ಹಲವಾರು ರಾಜ್ಯಗಳು ಪಟಾಕಿ ನಿಷೇಧಿಸಿವೆ. ನಮ್ಮ ರಾಜ್ಯದಲ್ಲೂ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಒಳ್ಳೆಯದು.

    -ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆ.

    ಎಲ್ಲೆಲ್ಲಿ ನಿಷೇಧ ?

    *ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒಡಿಶಾ, ರಾಜಸ್ಥಾನ ಸರ್ಕಾರಗಳು ಕೂಡ ಈ ಬಾರಿಯ ದೀಪಾವಳಿಗೆ ಪಟಾಕಿ ನಿಷೇಧಿಸುವತ್ತ ಹೆಜ್ಜೆ ಇಟ್ಟಿದ್ದು, ಅಧಿಕೃತ ನಿರ್ಧಾರ ಹೊರಬೀಳಬೇಕಿದೆ.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿ ಹಬ್ಬವನ್ನು ಸರಳ, ಸುಂದರ, ಅರ್ಥಗರ್ಭಿತ ಮತ್ತು ಭಕ್ತಿಪೂರ್ವಕ ವಾಗಿ ಆಚರಿಸಬೇಕೆಂದು ಮನವಿ ಮಾಡುವೆ.
    
    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ
    ದೀಪಾವಳಿ ಸಂದರ್ಭದಲ್ಲಿ ಪರಿಸರಕ್ಕೆ ಮಾರಕವಾಗಿರುವ ಹಾಗೂ ಕರೊನಾ ಸೋಂಕಿನ ದುಷ್ಪರಿಣಾಮ ಗಮನ ದಲ್ಲಿರಿಸಿಕೊಂಡು ರಾಜ್ಯದಲ್ಲೂ ಪಟಾಕಿ ನಿಷೇಧಿಸುವುದು ಸೂಕ್ತವಾಗಿತ್ತು. ಮುಖ್ಯಮಂತ್ರಿಗಳು ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಪಟಾಕಿ ನಿಷೇಧಿಸಿರುವುದು ಸಕಾಲಿಕ ನಿರ್ಧಾರ. ಸಿಎಂ ನಿರ್ಧಾರ ಅಭಿನಂದನೀಯ.
    
    | ಆರ್.ಅಶೋಕ್ ಕಂದಾಯ ಸಚಿವ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಉಪಾಧ್ಯಕ್ಷ

    ಪಟಾಕಿ ಹೊಡೆದರೆ ಬೀಳುತ್ತೆ ದಂಡ?

    ಸರ್ಕಾರದ ಸೂಚನೆ ಉಲ್ಲಂಘಿಸಿ ಪಟಾಕಿ ಹೊಡೆದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ವೈದ್ಯಕೀಯ ಸಚಿವ ಡಾ.ಸುಧಾಕರ್ ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಬಗ್ಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ಸಂದರ್ಭ ದಲ್ಲಿ ಜನರ ಜೀವ ಉಳಿಸುವುದಕ್ಕೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ನೀಡಿದ ವರದಿ, ನಮ್ಮ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts