ಈ ವರ್ಷವೂ ಇಲ್ಲ ಉಚಿತ ಬಸ್​ಪಾಸ್

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು

ಪ್ರಸಕ್ತ ವರ್ಷದಲ್ಲೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ಸಿಗುವುದು ಅನುಮಾನ. 2019-20ನೇ ಆರ್ಥಿಕ ವರ್ಷದ ಬಜೆಟ್​ಗೆ ಪೂರ್ವಭಾವಿ ಸಭೆ ಆರಂಭಗೊಂಡಿದ್ದು, ಉಚಿತ ಬಸ್​ಪಾಸ್ ಪ್ರಸ್ತಾವನೆಯನ್ನೇ ಕೈಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ರೈತರ ಸಾಲಮನ್ನಾ ಹಾಗೂ ಇತರೆ ಬೃಹತ್ ಯೋಜನೆಗಳನ್ನು ಘೋಷಿಸಿರುವ ಸರ್ಕಾರಕ್ಕೆ ಸಂಪನ್ಮೂಲ ಕ್ರೋಡೀಕರಣವೇ ತಲೆಬಿಸಿಯಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಪೆಟ್ರೋಲ್-ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಸ್ಥಿತಿಗೆ ರಾಜ್ಯ ಸರ್ಕಾರ ತಲುಪಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ವಿತರಣೆಯಿಂದ ಸರ್ಕಾರದ ಮೇಲೆ ಅಂದಾಜು 350-400 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂಬ ಕಾರಣಕ್ಕೆ ಈ ವರ್ಷವೂ ಬಜೆಟ್​ನಲ್ಲಿ ಇದರ ಘೋಷಣೆ ಅನುಮಾನವಾಗಿದೆ.

ರೈತರ ಸಾಲ ಮನ್ನಾ ಸೇರಿ ಹಲವು ಯೋಜನೆಗಳಿಂದಾಗಿ 400 ಕೋಟಿ ರೂ. ವರೆಗೆ ಹೆಚ್ಚುವರಿ ಅನುದಾನ ಸಿಗುವುದು ಅನುಮಾನ. ಈ ಹಿಂದಿನಂತೆ 7ನೇ ತರಗತಿಯವರೆಗೆ ಈಗಾಗಲೇ ಉಚಿತ ಪಾಸ್ ಸೌಲಭ್ಯವಿದೆ. ಉಳಿದ ವಿದ್ಯಾರ್ಥಿಗಳ ಒಟ್ಟು ಪಾಸ್ ವೆಚ್ಚದಲ್ಲಿ ಶೇ.50 ಸರ್ಕಾರದಿಂದ ಸಹಾಯಧನ ನೀಡುತ್ತಿದೆ. ಎಸ್​ಸಿಪಿ, ಟಿಎಸ್​ಪಿ ಕ್ರಿಯಾ ಯೋಜನೆಯಲ್ಲಿ ಎಸ್​ಸಿ-ಎಸ್​ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮುಂದುವರಿಯಲಿದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.

ಸಿದ್ದರಾಮಯ್ಯ ಘೋಷಣೆ: 2018ರ ಫೆಬ್ರವರಿಯಲ್ಲಿ ಚುನಾವಣೆ ಹೊಸ್ತಿಲಿನಲ್ಲಿ 2018-19ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶಾಲಾ ಕಾಲೇಜಿಗೆ ದೂರ ಪ್ರಯಾಣಿಸುವ ಅನಿವಾರ್ಯತೆ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಾರಿಗೆ ವೆಚ್ಚ ತೊಡಕಾಗಬಾರದು ಎಂಬ ಕಾಳಜಿ ಸರ್ಕಾರದ್ದಾಗಿದೆ. ಹೀಗಾಗಿ 2018-19ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುವುದು. ಇದರಿಂದ 19.60 ಲಕ್ಷ ವಿದ್ಯಾರ್ಥಿಗಳು ಪ್ರಯೋಜನೆ ಪಡೆಯಲಿದ್ದಾರೆ’ ಎಂದು ಘೋಷಿಸಿದ್ದರು. ನಂತರದಲ್ಲಿ ಹಣಕಾಸು ಇಲಾಖೆ ಈ ಯೋಜನೆಗೆ ಒಪ್ಪಿರಲಿಲ್ಲ.

ನಿರೀಕ್ಷೆ ಹುಸಿ: ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಪ್ರತಿಪಕ್ಷ ಮತ್ತು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. 2018ರ ಜೂನ್​ನಲ್ಲಿ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಸಾರಿಗೆ ಇಲಾಖೆ 2ನೇ ಬಾರಿ ಪ್ರಸ್ತಾವನೆ ಇರಿಸಿತ್ತು. ಬಜೆಟ್​ನಲ್ಲಿ ಸಿಎಂ ಕುಮಾರಸ್ವಾಮಿ ಉಚಿತ ಬಸ್​ಪಾಸ್ ಘೋಷಿಸುವ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಗಿತ್ತು. ಸರ್ಕಾರಿ ಶಾಲಾ-ಕಾಲೇಜು ಮಕ್ಕಳಿಗಷ್ಟೇ ಉಚಿತ ಪಾಸ್ ನೀಡುವ ಬಗ್ಗೆ ಸಿಎಂ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದರು.

838 ಕೋಟಿ ರೂ.ಬಿಡುಗಡೆ

2018-19ನೇ ಸಾಲಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪಾಸು ನೀಡಿದರೆ ಒಟ್ಟು 1,955 ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿತ್ತು. 2018-19ನೇ ಸಾಲಿನ ಬಜೆಟ್​ನಲ್ಲಿ ಪಾಸ್​ಗೆ ಘೋಷಿಸಲಾಗಿದ್ದ ಅಂದಾಜು 838 ಕೋಟಿ ರೂ. ದೊರೆತಿದೆ. ಉಚಿತ ಬಸ್​ಪಾಸ್​ಗೆ 400 ಕೋಟಿ ರೂ. ವರೆಗೆ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಫೆಬ್ರವರಿ ಬಜೆಟ್​ನಲ್ಲಿ ಘೋಷಿಸಲಾಗಿದ್ದ ಎಲ್ಲ ಯೋಜನೆ ಮುಂದುವರಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ ಆರ್ಥಿಕ ಹೊರೆ ನೆಪ ಇರಿಸಿಕೊಂಡು ಪ್ರಮುಖ ಯೋಜನೆ ಅನುಷ್ಠಾನಕ್ಕೇ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ.

ಉದ್ಯೋಗ ಕೋಶಕ್ಕೆ ದೇಣಿಗೆ

| ದೇವರಾಜ್ ಎಲ್. ಬೆಂಗಳೂರು

ಕಾಲೇಜುಗಳಲ್ಲಿ ಪ್ಲೇಸ್​ವೆುಂಟ್ ಕೇಂದ್ರ ತೆರೆಯಿರಿ ಎನ್ನುವ ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ಸೋತಿರುವುದು ಕಾಲೇಜುಗಳನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.

ರಾಜ್ಯದಲ್ಲಿ 11 ಸರ್ಕಾರಿ ಇಂಜಿನಿಯರಿಂಗ್, 412 ಪ್ರಥಮ ದರ್ಜೆ ಕಾಲೇಜುಗಳಿವೆ. ಈ ಎಲ್ಲ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ಲೇಸ್​ವೆುಂಟ್ ಕೇಂದ್ರ ತೆರೆಯಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ, ಇದಕ್ಕಾಗಿ ಅನುದಾನ ನೀಡುವುದಿಲ್ಲವಾದ್ದರಿಂದ ವಿದ್ಯಾರ್ಥಿಗಳಿಂದಲೇ ಹಣ ಪಡೆದು ಪ್ಲೇಸ್​ವೆುಂಟ್ ಕೇಂದ್ರ ನಿರ್ವಣ-ನಿರ್ವಾಹಣೆ ಮಾಡುವ ಪರಿಸ್ಥಿತಿಗೆ ತಲುಪಿವೆ.

ನಗರದಲ್ಲಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಪ್ಲೇಸ್​ವೆುಂಟ್ ಕೇಂದ್ರ ನಡೆಸುತ್ತಿದೆ. ಪ್ರತಿ ಕಾಲೇಜಿನಲ್ಲಿ ಪ್ಲೇಸ್​ವೆುಂಟ್ ಕೇಂದ್ರ ತೆರೆದು ನಿರ್ವಹಿಸಲು ವಾರ್ಷಿಕ 3ರಿಂದ 4 ಲಕ್ಷ ರೂ. ಅಗತ್ಯವಿದೆ.

ಎಐಸಿಟಿಇ ಪ್ರಕಾರ ಪ್ರತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್​ವೆುಂಟ್ ಕೇಂದ್ರ ತೆರೆಯುವುದು ಕಡ್ಡಾಯ. ಅದೇ ರೀತಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗದ ಮಾಹಿತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲು ಪ್ಲೇಸ್​ವೆುಂಟ್ ಕೇಂದ್ರ ತೆರೆಯಲು ಇಲಾಖೆ ಸೂಚಿಸಿದೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಇರುವುದೂ ಪ್ಲೇಸ್​ವೆುಂಟ್ ಕೇಂದ್ರ ಇಲ್ಲದ್ದಕ್ಕೆ ಪ್ರಮುಖ ಕಾರಣವಾಗಿದೆ.

ವಿದ್ಯಾರ್ಥಿಗಳಿಂದ ತಿಂಗಳ ವೇತನ

ಸರ್ಕಾರಿ ಕಾಲೇಜುಗಳು ನಡೆಸುವ ಉದ್ಯೋಗ ಮೇಳ- ಪ್ಲೇಸ್​ವೆುಂಟ್ ಕೇಂದ್ರದ ಮೂಲಕ ವಿದ್ಯಾರ್ಥಿಗೆ ಉದ್ಯೋಗ ಸಿಕ್ಕಲ್ಲಿ ಆ ವಿದ್ಯಾರ್ಥಿಯಿಂದ ಕಾಲೇಜು ಆಡಳಿತ ಮಂಡಳಿ ಮೊದಲ ತಿಂಗಳ ವೇತನ ಪಡೆಯುತ್ತದೆ. ಆದರೆ, ಇದು ಕಡ್ಡಾಯಲ್ಲ. ಆಸಕ್ತ ವಿದ್ಯಾರ್ಥಿಗಳಷ್ಟೇ ನೀಡಬಹುದು.

ಪ್ಲೇಸ್​ವೆುಂಟ್ ಕೇಂದ್ರ ತೆರೆಯಲು ಹಣಕಾಸಿನ ಅಗತ್ಯವಿಲ್ಲ. ನಿರ್ವಹಣೆಗೆ ಬೇಕಾದ ಹಣವನ್ನು ಆಯಾ ಕಾಲೇಜು ಪ್ರಾಂಶುಪಾಲರೇ ಭರಿಸಲಿದ್ದಾರೆ.

| ಎಚ್.ಯು. ತಳವಾರ್ ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ