More

    ಈ ಲೋಕವೇ ದೇವನಾಡುವ ಗೊಂಬೆಯಾಟ…

    ಈ ಲೋಕವೇ ದೇವನಾಡುವ ಗೊಂಬೆಯಾಟ...ಗೆಳೆಯ ಎಚ್.ಎಸ್.ಗೋಪಾಲರಾವ್ ಅನೇಕ ದಿನಗಳಿಂದ ಮನೆಗೆ ಕರೆಯುತ್ತಿದ್ದರು. ಅವರ ಮಗ ಬಾಲಸುಬ್ರಹ್ಮಣ್ಯ ನನ್ನ ವಿದ್ಯಾರ್ಥಿ. ಅವರ ಒತ್ತಾಯವೂ ಇತ್ತು. ಆದರೂ ಹೋಗಲಾಗಿರಲಿಲ್ಲ. ಅವರ ಮನೆ ಬೆಂಗಳೂರಿನ ಹೊರವಲಯದ ಅರಸಿನಕುಂಟೆಯಲ್ಲಿ; ದೂರವೆನ್ನುವುದು ಒಂದು ನೆಪವಷ್ಟೆ! ನಮ್ಮ ಬಡಾವಣೆಯ ಗೆಳೆಯರ ಮನೆಗಳಿಗೇ ಹೋಗಿ ಅದೆಷ್ಟು ವರ್ಷಗಳಾಯಿತು! ಒಂದು ಕಾಲಕ್ಕೆ ನಾವೆಲ್ಲರೂ ಗೆಳೆಯರ ಮನೆಗಳಿಗೆ, ಬಂಧುಗಳ ಮನೆಗಳಿಗೆ ಕರೆಯದಿದ್ದರೂ ಹೋಗುತ್ತಿದ್ದೆವು. ರಜೆಗಳಲ್ಲಿ ಬಂಧುಗಳ ಮನೆಗಳಿಗೆ ಹೋಗುವುದಂತೂ ಒಂದು ರೀತಿ ಅಲಿಖಿತ ಒಪ್ಪಂದದಂತಿತ್ತು. ನಮ್ಮ ಅಮ್ಮ ಇದ್ದಾಗ ರಜನಿಯವರು ಅಮ್ಮನ ಅಕ್ಕತಂಗಿಯರು ಹಾಗೂ ಅವರಿಗೆ ಆಪ್ತರಾದವರನ್ನೆಲ್ಲ ಒಟ್ಟಿಗೇ ಸೇರಿಸಿ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದರು. ಅವರೆಲ್ಲ ಸೇರಿ ಮಾಡುತ್ತಿದ್ದ ಬಗೆಬಗೆಯ ಅಡುಗೆ ಹಾಗೂ ತಿಂಡಿಗಳು; ಪಗಡೆಯಾಟದ ಅಬ್ಬರ; ಬಾಲ್ಯದ, ಹರಯದ ನೆನಪುಗಳ ಓಕುಳಿಯಾಟ ಇವೆಲ್ಲ ಯಥಾಪ್ರಕಾರದ ದೈನಿಕಕ್ಕೆ ಹೊಸ ಚೈತನ್ಯ ನೀಡುತ್ತಿತ್ತು. ಎಲ್ಲರೂ ಒಟ್ಟಿಗೇ ಸೇರುವುದೇ ಹಬ್ಬ; ನಮ್ಮ ಹಬ್ಬಗಳ ಸ್ವರೂಪದಲ್ಲಿಯೇ ಸಹಬಾಳ್ವೆಯ, ಸಂತೋಷದ ಪರಿಕಲ್ಪನೆಯಿದೆ. ಅನೇಕ ವರ್ಷಗಳವರೆಗೆ ನಾವು ಅಣ್ಣತಮ್ಮಂದಿರು ಹಬ್ಬಗಳನ್ನು ಒಟ್ಟಿಗೇ ಆಚರಿಸುತ್ತಿದ್ದೆವು. ಸಂಜೆಯ ವೇಳೆ ಆರತಿಗೆಂದು ಕರೆಯುವ ಸಂಪ್ರದಾಯವೂ ಸಾಮಾಜಿಕ ಸಾಮರಸ್ಯದ ಒಂದು ಭಾಗವೇ ಆಗಿತ್ತು. ಪು.ತಿ.ನರಸಿಂಹಾಚಾರ್ ಅವರು ಹೇಳುತ್ತಿದ್ದ ಹಾಗೆ ಹಬ್ಬಗಳೆಂದರೆ ದೇವರ ಹೆಸರಿನಲ್ಲಿ ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಿಕೊಳ್ಳುವ ಸಾಧನಗಳು. ಪೂಜೆ ಪ್ರಾರ್ಥನೆಗಳ ಜೊತೆಗೆ ಹಾಡು, ಹಸೆ, ಹರಟೆ, ಅಡುಗೆ, ತೊಡುಗೆ, ಕ್ರೀಡೆ ಹಾಗೂ ಸಂಬಂಧಿಕರ ಸಮಾವೇಶ ಇವೆಲ್ಲಗಳ ಸಂತೋಷಕೂಟವೇ ಹಬ್ಬ. ಅಲಂಕಾರ ಕಣ್ಣಿಗೆ ಸೊಗಸು; ಸಂಗೀತ ಕರ್ಣಕ್ಕೆ ಇಂಪು; ಧೂಪ, ಗಂಧ, ಹೂವಿನ ಪರಿಮಳ ನಾಸಿಕಕ್ಕೆ ಹಿತಕರ; ರುಚಿರುಚಿಯಾದ ಅಡುಗೆ ರಸನೆಗೆ ರಸಾಸ್ವಾದ. ಹೀಗೆ ಹಬ್ಬ ಪರದ ಹೆಸರಿನಲ್ಲಿ ಇಹದ ಸಡಗರ. ಈಗ ಈ ಬಗೆಯ ಸಡಗರ ನಮ್ಮ ಸಾಮಾಜಿಕ ಬದುಕಿನಿಂದಲೇ ಮರೆಯಾದಂತೆ ಭಾಸವಾಗುತ್ತಿದೆ ಎಂದರೆ ವಯಸ್ಸಾದವರ ಹಳಹಳಿಕೆ ಎಂದು ಹೀಗಳೆದರೂ, ನಮ್ಮ ಬದುಕಿನಿಂದ ಹಬ್ಬಗಳ ಸಂಭ್ರಮ ಕಣ್ಮರೆಯಾಗುತ್ತಿರುವುದಂತೂ ವಾಸ್ತವ. ಬದಲಿಗೆ ಹಬ್ಬಗಳೆಂದರೆ ಈಗ ಘರ್ಷಣೆಗಳ ಆತಂಕ; ಕೋಮುಗಲಭೆಗಳ ಭೀತಿ; ಹೇಗೋ ಮಾಡಿ ಮುಗಿಸುವ ಸಂಪ್ರದಾಯದ ಯಥಾರೀತಿ. ಮನೆಯೊಳಗಿನ ಹಬ್ಬಗಳ ಸಂಭ್ರಮ ಈಗ ಮರೆಯಾಗಿ ಮನೆಯಾಚೆಯ ಪಾರ್ಟಿಗಳಲ್ಲಿ ಸಂಭ್ರಮವನ್ನು ಅರಸಿ ಹೊರಟಂತೆ ತೋರುತ್ತಿದೆ. ಮನೆಯ ಹಬ್ಬಗಳಿಗೆ ನೈತಿಕತೆಯ ಒಂದು ಚೌಕಟ್ಟಿರುತ್ತದೆ; ಮನೆಯಾಚೆಯ ಪಾರ್ಟಿಗಳಿಗೆ ಯಾವುದು ಎಲ್ಲೆ?

    ಮೊನ್ನೆ ಗೋಪಾಲರಾಯರ ಸೊಸೆ ವೇದಾ ಅವರು ರಜನಿಯವರಿಗೆ ಕರೆ ಮಾಡಿ ‘ಗೊಂಬೆ ಕೂರಿಸಿದ್ದೇವೆ, ನೋಡಲು ಬನ್ನಿ’ ಎಂದು ಕರೆದರು. ಅವರ ಮನೆಯವರೆಲ್ಲರ ಒತ್ತಾಯವೂ ಹಿನ್ನೆಲೆಗಿತ್ತು. ರಜನಿಯವರಿಗೆ ‘ಗೊಂಬೆಹಬ್ಬ’ದಲ್ಲಿ ಪಾಲ್ಗೊಳ್ಳುವ ಉತ್ಸಾಹ; ನನಗೂ ಬಾಲ್ಯದ ದಿನಗಳ ನೆನಪಾಗಿ ಮಹಾನವಮಿಯ ಸಂಜೆ ಗೋಪಾಲರಾಯರ ಮನೆಗೆ ನಾನು, ರಜನಿ, ಅಭಿನವ ರವಿ ಹಾಗೂ ಚಂದ್ರಿಕಾ ಹೋದೆವು.

    ಮನೆ ಪ್ರವೇಶಿಸಿದ ತಕ್ಷಣ ನೆಲಅಂತಸ್ತಿನಲ್ಲಿ ಗೋಪಾಲರಾಯರ ಗ್ರಂಥ ಸಂಪತ್ತಿನ ದರ್ಶನವಾಯಿತು. ಅವರ ಕುಟುಂಬ ಗೋಪಾಲರಾಯರ ಆಸಕ್ತಿಯನ್ನು ಅರ್ಥಮಾಡಿಕೊಂಡು ನೆಲಅಂತಸ್ತನ್ನು ಸಂಪೂರ್ಣವಾಗಿ ಅವರ ಸುಪರ್ದಿಗೇ ಬಿಟ್ಟುಕೊಟ್ಟಿದ್ದಾರೆ. ಗೋಪಾಲರಾಯರ ಆಸಕ್ತಿಯ ಕ್ಷೇತ್ರಗಳಾದ ಇತಿಹಾಸ ಹಾಗೂ ಸಂಶೋಧನೆಗೆ ಸಂಬಂಧಿಸಿದ ಮುಖ್ಯ ಗ್ರಂಥಗಳೆಲ್ಲ ಅಲ್ಲಿದ್ದವು. ಉಳಿದ ಪ್ರಕಾರದ ಕೃತಿಗಳು ಹಿಂದಿನ ಸಾಲಿನಲ್ಲಿದ್ದುವು. ಸಂಶೋಧನಾರ್ಥಿಗಳಿಗೆ ಇದೊಂದು ಆಕರ ಗ್ರಂಥಾಲಯದ ತಾಣವೆನ್ನಿಸಿತು.

    ಮೊದಲನೇ ಅಂತಸ್ತಿನ ‘ವಾಸದ ಮನೆ’ ಪ್ರವೇಶಿಸಿದಾಕ್ಷಣ ಬೇರೊಂದು ಲೋಕವೇ ಅನಾವರಣವಾಯಿತು. ಇರಲು ಅಗತ್ಯ ವಾದಷ್ಟು ಸ್ಥಳವನ್ನು ಹೊರತುಪಡಿಸಿ ಇಡೀ ಮನೆಯನ್ನು ಗೊಂಬೆಗಳು ಆಕ್ರಮಿಸಿಕೊಂಡಿದ್ದವು. ಇತ್ತೀಚಿನ ದಿನಗಳಲ್ಲಿ ಇಂತಹ ಗೊಂಬೆ ಪ್ರದರ್ಶನ ನಾನು ನೋಡಿದ ನೆನಪಿಲ್ಲ. ಗೊಂಬೆಗಳ ಇತಿಹಾಸ ಹರಪ್ಪ ಮೊಹೆಂಜೊದಾರೋ ಸಂಸ್ಕೃತಿಯಷ್ಟು ಹಿಂದಿನಿಂದಲೇ ನಮಗೆ ದೊರಕುತ್ತದೆ. ಮರ, ಮಣ್ಣು, ಕಲ್ಲು, ಲೋಹ, ಬಟ್ಟೆ, ತೊಗಲು ಹೀಗೆ ಹಲವು ರೀತಿಯ ಗೊಂಬೆಗಳು ನಮಗೆ ದೊರಕುತ್ತವೆ. ಹಾಗೆ ನೋಡಿದರೆ ಗೊಂಬೆಗಳ ಇತಿಹಾಸಕ್ಕೂ ಮಾನವ ಸಂಸ್ಕೃತಿಯ ಬೆಳವಣಿಗೆಗೂ ಹೊಕ್ಕುಳ ಬಳ್ಳಿಯ ಸಂಬಂಧವಿದೆ.

    ಗೊಂಬೆಗಳ ಕಥನಕ್ಕೆ ಪ್ರಮುಖವಾಗಿ ಮೂರು ನೆಲೆಗಳಿವೆ. ಒಂದು- ಗೊಂಬೆಗಳು ಮಕ್ಕಳಿಗೆ ಮನರಂಜನೆಯ ಸಾಧನ. ಗೊಂಬೆಗಳು ಮಕ್ಕಳಿಗೆ ನಿರ್ಜೀವ ವಸ್ತುಗಳಲ್ಲ; ಜೀವಂತ ಜಗತ್ತು. ಅದರಲ್ಲೂ ಪ್ರಾಣಿಜಗತ್ತಿನ ಜೊತೆ ಮಕ್ಕಳಿಗೆ ಒಡನಾಟ ಜಾಸ್ತಿ. ‘ಈ ಲೋಕವೇ ದೇವನಾಡುವ ಗೊಂಬೆಯಾಟ’ ಎಂಬಂತೆ ಮಕ್ಕಳು ಗೊಂಬೆಗಳ ಮೂಲಕ ಜೀವನ ನಾಟಕವನ್ನು ಆಡುತ್ತಿರುತ್ತಾರೆ. ಈ ಹಂತದಲ್ಲಿಯೇ ಮನರಂಜನೆ ಕಲಿಕೆಯ ನೆಲೆ ಪಡೆದುಕೊಂಡು ಬಿಡುತ್ತದೆ. ಗೊಂಬೆ ಪ್ರದರ್ಶನದಲ್ಲಿ ಪ್ರಧಾನವಾಗಿ ನಮ್ಮ ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವತ, ಇತಿಹಾಸ ಇವುಗಳನ್ನೆಲ್ಲ ದೃಶ್ಯವತ್ತಾಗಿ ತೋರಿ ಸುವ ಪ್ರಯತ್ನವಿರುತ್ತದೆ. ನಮ್ಮಲ್ಲಿ ಬಹುಮಂದಿ ಇವುಗಳ ಜ್ಞಾನವನ್ನು ಓದಿ ಪಡೆದವರಲ್ಲ; ಕೇಳಿ, ನೋಡಿ ಪಡೆದವರು. ಮೌಖಿಕ ಪರಂಪರೆಯ ಜೊತೆಗೆ ದೃಶ್ಯಪರಂಪರೆಯೂ ನಮ್ಮಲ್ಲಿ ಪ್ರಮುಖ ಧಾರೆಯಾಗಿಯೇ ಬೆಳೆದುಬಂದಿದೆ. ಗೊಂಬೆಯಾಟ, ಯಕ್ಷಗಾನ, ಬಯಲುನಾಟಕ, ನೃತ್ಯರೂಪಕಗಳು, ಇನ್ನೂ ಅನೇಕ ಜಾನಪದ ಕಲಾಪ್ರಕಾರಗಳು ಈ ಬಗೆಯ ಜ್ಞಾನಪ್ರಸಾರದ ಸಾಧನಗಳು. ಗೊಂಬೆಹಬ್ಬವೂ ಇಂಥದೇ ಒಂದು ಮಾಧ್ಯಮ. ಈ ಮೂಲಕ ಲೋಕಜ್ಞಾನದ ಜೊತೆಗೆ ಸಂಸ್ಕೃತಿ ಪ್ರಚಾರವೂ ನಡೆಯುತ್ತಿತ್ತು. ಒಂದು ಸಂಸ್ಕೃತಿಯ ಜೀವಂತಿಕೆ ಜನಪದ ಆಚರಣೆಯಲ್ಲಿರುತ್ತದೆಯೇ ಹೊರತು ಗ್ರಂಥಸ್ಥವಾಗಿರುವುದಿಲ್ಲ. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ತಂಜಾವೂರು, ಆಂಧ್ರದ ಕೊಂಡಪಲ್ಲಿ, ಕರ್ನಾಟಕದ ಚನ್ನಪಟ್ಟಣ ಮೊದಲಾದವು ಗೊಂಬೆ ತಯಾರಿಕೆಯಲ್ಲಿ ಪ್ರಸಿದ್ಧವಾಗಿವೆ. ಆದರೆ ‘ಗೊಂಬೆಹಬ್ಬ’ ಕರ್ನಾಟಕದಲ್ಲಿ, ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚು ಪ್ರಚಲಿತ.

    ಗೊಂಬೆಹಬ್ಬಕ್ಕೂ ಮೈಸೂರು ಅರಸರ ದಸರಾ ಉತ್ಸವಕ್ಕೂ ನಿಕಟ ಸಂಬಂಧವಿದೆ. ದಸರಾ ಉತ್ಸವ ಒಂದು ರೀತಿಯಲ್ಲಿ ನಮ್ಮ ಗಣರಾಜ್ಯೋತ್ಸವ ಇದ್ದ ಹಾಗೆ! ವ್ಯತ್ಯಾಸವೆಂದರೆ ದಸರಾಕ್ಕೆ ಧಾರ್ವಿುಕ ಆವರಣವಿದೆ. ಒಡೆಯರ ವೈಭವ ಪ್ರದರ್ಶನದ ಜೊತೆಗೆ ಸಂಸ್ಕೃತಿ, ಕಲೆಗೆ ಪ್ರೋತ್ಸಾಹ ನೀಡುವ ವೇದಿಕೆಯಾಗಿಯೂ ಅದು ಬಳಕೆಯಾಗುತ್ತಿತ್ತು. ಇದು ಮನೆಮನೆಗಳಲ್ಲೂ ಅನಾವರಣಗೊಳ್ಳಬೇಕು ಎಂಬ ಆಶಯ ಬಹುಶಃ ಗೊಂಬೆಹಬ್ಬದ ಹಿಂದಿರುವಂತೆ ತೋರುತ್ತದೆ. ಆದರೆ ಇದು ಮೇಲುವರ್ಗದಲ್ಲಿ ಮಾತ್ರ ಕಾಣಿಸುತ್ತದೆಯೇ ಹೊರತು ಸಾರ್ವತ್ರಿಕವಾಗಿ ಆಚರಣೆಯಲ್ಲಿರಲಿಲ್ಲ. ‘ಯಾರೇ ರಾಜ್ಯವಾಳಿದರೂ ರಾಗಿ ಬೀಸುವುದು ತಪ್ಪೀತೆ?’ ಎಂಬುದು ಜನಸಾಮಾನ್ಯರ ಭಾವಜಗತ್ತಾಗಿತ್ತು. ಗೊಂಬೆ ಪ್ರದರ್ಶನದಲ್ಲಿ ಪ್ರಧಾನವಾಗಿ ಇರಲೇ ಬೇಕಾದ ಎರಡು ಗೊಂಬೆಗಳೆಂದರೆ ಪಟ್ಟದರಾಜ ಹಾಗೂ ಪಟ್ಟದರಾಣಿ. ಉಳಿದಂತೆ ಅವರವರ ಆಸಕ್ತಿಯ ವಲಯದ ಗೊಂಬೆಗಳಿರಬಹುದು. ಇದು ಒಂದು ರೀತಿ ಪ್ರಭುತ್ವದ ಆರಾಧನೆಯ ಭಾಗವಾಗಿಯೂ ಬಳಕೆಯಲ್ಲಿದ್ದಿರಬೇಕು. ಮದುವೆಗಳಲ್ಲಿ ಮದುಮಕ್ಕಳಿಗೆ ‘ರಾಜರಾಣಿ’ಯರ ಗೊಂಬೆಗಳನ್ನು ಕೊಡುವ ಪದ್ಧತಿ ಈಗಲೂ ಇದೆ. ಅದು ಒಂದು ನೆಲೆಯಲ್ಲಿ ‘ನೀವೂ ರಾಜರಾಣಿಯರಂತೆ ಇರಿ’ ಎಂಬ ಆಶಯ ಹೊಂದಿದ್ದರೆ, ಮತ್ತೊಂದು ನೆಲೆಯಲ್ಲಿ ರಾಜಭಕ್ತಿಯ ಅಧೀನ ಮನೋಭಾವವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕ್ರಮವೂ ಆಗಿದ್ದಿರಬಹುದು. ‘ರಾಜಭಕ್ತಿ’ ಒಂದು ಮೌಲ್ಯವಾಗಿದ್ದ ಪರಿಸರವದು. ‘ಗೊಂಬೆಹಬ್ಬ’ಕ್ಕೆ ಹೀಗೆ ದಸರಾ ಹಿನ್ನೆಲೆಯಿದ್ದರೂ, ಅದರಾಚೆಗೆ ಅದರ ವ್ಯಾಪ್ತಿಯಿದೆ. ಮನರಂಜನೆ, ಕಲಿಕೆ, ಸಂಸ್ಕೃತಿ ಪ್ರಸಾರ, ಕೃಷಿಸಂಸ್ಕೃತಿ, ಇತಿಹಾಸ ಇಂತಹ ಅನೇಕ ಸಂಗತಿಗಳ ಜಟಿಲ ಹೆಣಿಗೆಯಿಂದ ಇದು ರೂಪುಗೊಂಡಿದೆ.

    ನವರಾತ್ರಿಯ ಸಂಭ್ರಮ ಆಶ್ವಯುಜ ಶುದ್ಧ ಪಾಡ್ಯದಿಂದ ಆರಂಭವಾಗಿ ದಶಮಿಯಂದು ಮುಗಿಯುತ್ತದೆ. ಈ ಅವಧಿಯಲ್ಲಿ ಪ್ರತಿನಿತ್ಯ ಉತ್ಸವ ಆಚರಿಸಲ್ಪಡುತ್ತದೆ. ನನಗೆ ಇಲ್ಲಿ ಮಾಸ್ತಿಯವರ ಕಥಾಮಾಲಿಕೆಯ ‘ನವರಾತ್ರಿ’ ನೆನಪಾಗುತ್ತಿದೆ. ನವರಾತ್ರಿಗೆ ಮೊದಲಿನ ಹದಿನೈದು ದಿನಗಳನ್ನು ‘ಪಿತೃಪಕ್ಷ’ವೆಂದು ಕರೆದು, ಆ ಸಂದರ್ಭದಲ್ಲಿ ಜನಪದರು ಹಿರಿಯರ ಆರಾಧನೆ ನಡೆಸುತ್ತಾರೆ. ಇದು ಸಾರ್ವತ್ರಿಕ ಆಚರಣೆ.

    ಗೋಪಾಲರಾಯರ ಮನೆಯಲ್ಲಿನ ‘ಗೊಂಬೆಹಬ್ಬ’ ನನಗೆ ವಿಶೇಷವೆನ್ನಿಸಲು ಕಾರಣ ಪರಂಪರೆಯನ್ನು ಅವರು ಸಮಕಾಲೀನಗೊಳಿಸಿ, ನಮ್ಮ ಕಾಲಕ್ಕೆ ಪ್ರಸ್ತುತವಾಗುವ ರೀತಿಯಲ್ಲಿ ಯೋಜಿಸಿದ್ದು. ಸಾಮಾನ್ಯವಾಗಿ ಗೊಂಬೆ ಪ್ರದರ್ಶನದಲ್ಲಿ ಒಂದು ಥೀಮ್ ಪ್ರಧಾನವಾಗಿರುತ್ತದೆ. ಅದು ಕಥಾಸರಣಿಯ ರೀತಿಯಲ್ಲಿ ಅನಾವರಣಗೊಳ್ಳುತ್ತದೆ. ಇವರ ಮನೆಯಲ್ಲಿ ಈ ವರ್ಷ ‘ಶಿಕ್ಷಣ’ವನ್ನು ಹಾಗೆ ಆರಿಸಿಕೊಂಡಿದ್ದರು. ‘ಗುರುಕುಲ’ದ ಕ್ರಮದಿಂದ ಆರಂಭವಾಗಿ ಇವತ್ತಿನ ‘ಆನ್​ಲೈನ್ ಕ್ಲಾಸ್’ವರೆಗಿನ ಶಿಕ್ಷಣದ ಬದಲಾವಣೆಯ ಹಂತಗಳನ್ನು ದೃಶ್ಯವತ್ತಾಗಿ ಚಿತ್ರಿಸಿದ್ದರು. ಅದಕ್ಕೆ ಸೂಕ್ತವಾದ ತಲೆಬರಹ ರೂಪದ ಬರವಣಿಗೆಯೂ ಅಲ್ಲಿತ್ತು. ಜೊತೆಗೆ ಅದನ್ನೆಲ್ಲ ಬಂದವರಿಗೆ ಅಚ್ಚುಕಟ್ಟಾಗಿ ಅವರಲ್ಲೊಬ್ಬರು ಆಸಕ್ತಿಯಿಂದ ವಿವರಿಸುತ್ತಿದ್ದರು. ಅದನ್ನು ವೀಕ್ಷಿಸಿದಾಗ ನಮ್ಮ ಶಿಕ್ಷಣಕ್ರಮದ ಪಕ್ಷಿನೋಟವೊಂದು ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿದ್ದು ಮಾತ್ರವಲ್ಲ ಬದಲಾವಣೆಯ ಸ್ವರೂಪದ ಬಗೆಗೆ ಆಲೋಚನೆಗೂ ಹಚ್ಚುತ್ತಿತ್ತು. ಮತ್ತೊಂದು- ದಶಾವತಾರವನ್ನು ಡಾರ್ವಿನ್ನನ ವಿಕಾಸವಾದಕ್ಕೆ ಅನ್ವಯಿಸಿ ವಿವರಿಸಿದ ಬಗೆ. ನನಗೆ ತಕ್ಷಣ ಎ.ಎನ್. ಮೂರ್ತಿರಾಯರ ‘ದೇವರು’ ಪುಸ್ತಕ ನೆನಪಾಯಿತು. ಮೂರ್ತಿರಾಯರ ಚಿಂತನೆಗಳನ್ನು ಹೀಗೆ ದೃಶ್ಯರೂಪದಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಮತ್ತೊಂದು ಚಮತ್ಕಾರ ಅಲ್ಲಿತ್ತು. ನಲ್ಲಿಯಿಂದ ಸಣ್ಣ ಜಲಪಾತದ ಹಾಗೆ ನೀರು ಸುರಿಯುತ್ತಿತ್ತು; ಅದು ವಿಶೇಷವಲ್ಲ, ಆದರೆ ಆ ನಲ್ಲಿ ಯಾವುದೇ ಆಧಾರವಿಲ್ಲದೆ ಬಯಲಿನಲ್ಲಿ ತೇಲುತ್ತ ನಿಂತಿರುವಂತೆ ಭಾಸವಾಗಿ ಅದೊಂದು ಮಾಯಾಜಾಲದಂತಿತ್ತು. ಅದು ಮಾಂತ್ರಿಕನ ಮಾಯೆಯಾಗಿರದೆ ವಿಜ್ಞಾನದ ಕಣ್ಕಟ್ಟಾಗಿತ್ತು. ಕಾಣ್ಕೆಗೂ ಕಣ್ಕಟ್ಟಿಗೂ ಅದೆಷ್ಟು ಸಾಮೀಪ್ಯ!

    ‘ಗೊಂಬೆಹಬ್ಬ’ ನಿಸ್ಸಂದೇಹವಾಗಿ ಸಂಪ್ರದಾಯದ ಆಚರಣೆ. ಆದರೆ ಅದು ಕೇವಲ ಮನರಂಜನಾಚರಣೆಯ ಸಂಪ್ರದಾಯವಾಗದೆ ಪ್ರಭಾವಿಯಾದ ‘ದೃಶ್ಯಮಾಧ್ಯಮ’ವೂ ಹೌದು. ನಮ್ಮ ಶಾಲಾ ಕಾಲೇಜುಗಳಲ್ಲಿ ಈ ದೃಶ್ಯಮಾಧ್ಯಮವನ್ನು ಕಲಿಕೆಯ ಪರಿಣಾಮಕಾರಿ ಮಾಧ್ಯಮವಾಗಿ ಬಳಸಿಕೊಳ್ಳಬಹುದಾದ ಒಂದು ಸಾಧ್ಯತೆ ಗೋಪಾಲರಾಯರ ಮನೆಯಲ್ಲಿನ ಗೊಂಬೆ ಪ್ರದರ್ಶನದಲ್ಲಿತ್ತು. ಅನಾಟಮಿಗೆ ಸಂಬಂಧಿಸಿದಂತೆ ಈ ರೀತಿ ಗೊಂಬೆಗಳ ಮೂಲಕವೇ ನಮ್ಮ ದೇಹದ ವಿವಿಧ ಅಂಗಗಳು ಹಾಗೂ ಅವುಗಳ ಕಾರ್ಯಸ್ವರೂಪವನ್ನು ವಿವರಿಸುವ ಪ್ರದರ್ಶನವೊಂದನ್ನು ನೋಡಿದ ನೆನಪಾಗುತ್ತಿದೆ. ಆ ಗೊಂಬೆ ಪ್ರದರ್ಶನ ನಮ್ಮ ದೇಹರಚನೆಯ ಬಗ್ಗೆ ಪ್ರಾಥಮಿಕ ತಿಳುವಳಿಕೆ ನೀಡುವಂತಿತ್ತು.

    ಗೋಪಾಲರಾಯರ ಮನೆಯ ಇಡೀ ಕುಟುಂಬ ಶ್ರದ್ಧೆ ಆಸಕ್ತಿಗಳಿಂದ ರೂಪಿಸಿದ್ದ ‘ಗೊಂಬೆ ಪ್ರದರ್ಶನ’ ನಿಜಕ್ಕೂ ಪರಂಪರೆಯನ್ನು ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ರೂಪಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂಬುದಕ್ಕೆ ಮಾದರಿಯಂತಿತ್ತು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts