ಇದು ವಾಟ್ಸ್ಆ್ಯಪ್ ವೆಡ್ಡಿಂಗ್ ಇನ್ವಿಟೇಶನ್; ಬೇಸ್ತು ಬಿದ್ದೀರಿ, ವಾಟ್ಸ್​ಆ್ಯಪ್ ಫೀಚರ್ ಅಲ್ಲ !

ಸೂರತ್‌: ನಿಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಏನಾದರೂ ಹೊಸ ಮಾದರಿಯಲ್ಲಿ ಮಾಡಬೇಕು ಎಂದುಕೊಂಡಿದ್ದೀರಾ? ಸೃಜನಾತ್ಮಕವಾಗಿ ಆಮಂತ್ರಣ ನೀಡಬೇಕು ಎಂದುಕೊಂಡಿದ್ದರೆ ಇಲ್ಲಿದೆ ಒಂದು ಉಪಾಯ.

ಅದೇನೆಂದರೆ, ಹಳೆ ಮಾದರಿಯಲ್ಲೇ ಆಮಂತ್ರಣ ಪತ್ರಿಕೆ ನೀಡುವ ಬದಲು ಹೊಸದಾಗಿ ಏನಾದರೂ ಮಾಡಬೇಕು ಎಂದು ಸೂರತ್‌ನ ಆರ್ಝೂ ಮತ್ತು ಚಿಂತನ್ ದೇಸಾಯಿ ಅವರು ತಮ್ಮ ಮದುವೆಗೆ ಅನನ್ಯವಾದ ಏನನ್ನಾದರೂ ವಿನ್ಯಾಸಗೊಳಿಸಲು ಬಯಸಿದ್ದರು. ಆಗ ಹೊಳೆದದ್ದೇ ವಾಟ್ಸ್‌ಆ್ಯಪ್‌ ವೆಡ್ಡಿಂಗ್‌ ಕಾರ್ಡ್‌.

ಚಿಂತನ್‌ ಮೂಲತಃ ವೆಬ್‌ ಡೆವಲಪರ್‌ ಆಗಿದ್ದರು. ಆದ್ದರಿಂದಲೇ ವಾಟ್ಸ್‌ಆ್ಯಪ್‌ನಿಂದ ಸ್ಫೂರ್ತಿಗೊಂಡಿದ್ದ ಇವರು ನಾಲ್ಕು ಪುಟಗಳ ಆಮಂತ್ರಣ ಪತ್ರಿಕೆಯನ್ನು ಸಿದ್ಧಗೊಳಿಸಿದ್ದಾರೆ. ಪತ್ರಿಕೆಯನ್ನು ಸಿದ್ಧಗೊಳಿಸಿದ್ದು ಚಿಂತನ್‌ ಆದರೂ ಕೂಡ ಉಪಾಯವನ್ನು ನೀಡಿದ್ದು ಭಾವಿ ಪತ್ನಿ ಆರ್ಝೂ.

ನೀವು ನಮ್ಮ ಮದುವೆಗೆ ಹಾಜರಾಗುವ ಬಾಧ್ಯತೆಯನ್ನು ಹೊಂದಿದ್ದೀರಿ. ಹಾಜರಾಗದಿದ್ದರೆ ನಿಮ್ಮ ವಾಟ್ಸ್‌ಆ್ಯಪ್‌ನ್ನು ನಿರ್ಬಂಧಿಸಲಾಗುತ್ತದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಆಹ್ವಾನವನ್ನು ಅನ್‌ಲಾಕ್‌ ಮಾಡಿ ಎಂದು ಹೇಳುವ ಕಾರ್ಡ್‌ನ ಮುಖಪುಟದಿಂದ ಹಿಡಿದು ಎಲ್ಲವೂ ವಾಟ್ಸ್‌ಆ್ಯಪ್‌ ಮಾದರಿಯಲ್ಲೇ ಇದೆ.

ಸಂಪೂರ್ಣ ಕಾರ್ಡ್‌ ತಯಾರಿಗೆ ಒಂದು ವಾರ ಸಮಯ ಹಿಡಿಯಿತು. ಅದಾದ ನಂತರವೇ ಸುಂದರವಾದ ಕಾರ್ಡ್‌ ಸಿದ್ಧವಾಯಿತು. ವಾಟ್ಸ್‌ಆ್ಯಪ್‌ ಲೋಗೋ ಬದಲಿಗೆ ಗಣೇಶನ ಫೋಟೊ ಬಳಸಿಕೊಳ್ಳಲಾಗಿದೆ ಹಾಗಾಗಿ ಇದು ಸಾಂಪ್ರದಾಯಿಕ ಸ್ಪರ್ಶವನ್ನು ಸಹ ನೀಡುತ್ತದೆ ಎನ್ನುತ್ತಾರೆ ಆರ್ಝೂ.

ಈ ಜೋಡಿ ಮುಂಬರುವ ಫೆಬ್ರವರಿಯಲ್ಲಿ ಹಸೆಮಣೆ ಏರಲಿದೆ. (ಏಜೆನ್ಸೀಸ್)